ಮಾದಿಗ ಸಮುದಾಯದ ಇಬ್ಭಾಗಕ್ಕೆ ಹುನ್ನಾರ

7
ಮಹಾಸಭಾ ಅಧ್ಯಕ್ಷ ಹನುಮಂತಪ್ಪ ದುರ್ಗ ಆರೋಪ

ಮಾದಿಗ ಸಮುದಾಯದ ಇಬ್ಭಾಗಕ್ಕೆ ಹುನ್ನಾರ

Published:
Updated:

ಚಿತ್ರದುರ್ಗ: ಸಮಾಜ ಕಲ್ಯಾಣ ಇಲಾಖೆಯ ಮಾಜಿ ಸಚಿವ ಎಚ್‌. ಆಂಜನೇಯ ಅವರು ಮಠ ಹಾಗೂ ಅಭಿವೃದ್ಧಿ ನಿಗಮದ ಹೆಸರಿನಲ್ಲಿ ಮಾದಿಗ ಸಮುದಾಯವನ್ನು ಇಬ್ಭಾಗ ಮಾಡುವ ಹುನ್ನಾರಕ್ಕೆ ಕೈಹಾಕಿದ್ದಾರೆ ಎಂದು ಮಾದಿಗ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಹನುಮಂತಪ್ಪ ದುರ್ಗ ಆರೋಪಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಾದಿಗ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದಲ್ಲಿ ತೀರ್ಮಾನವಾಗಿತ್ತು. ನಿಗಮ ಅಸ್ತಿತ್ವಕ್ಕೆ ಬರುವ ವೇಳೆಗೆ ಇದರ ಹೆಸರನ್ನು ಆದಿಜಾಂಬವ ಎಂದು ಬದಲಿಸಿದ್ದು ಏಕೆ’ ಎಂದು ಪ್ರಶ್ನಿಸಿದರು.

‘ಹಿರಿಯೂರು ತಾಲ್ಲೂಕಿನ ಆದಿಜಾಂಬವ ಮಠಕ್ಕೆ ಶತಮಾನದ ಇತಿಹಾಸವಿದೆ. ಮಠದ ಅಭವೃದ್ಧಿಯನ್ನು ಕಡೆಗಣಿಸಿದ ಆಂಜನೇಯ ಅವರು, ಮೇಲ್ವರ್ಗದ ಕುಮ್ಮಕ್ಕಿನಿಂದ ಮಾದಾರ ಚೆನ್ನಯ್ಯ ಗುರುಪೀಠ ಸ್ಥಾಪಿಸಿದರು. ಹಂಪಿಯಲ್ಲಿರುವ ಮಾತಂಗ ಮಠಕ್ಕೆ ಕುಟುಂಬದ ಸದಸ್ಯರನ್ನು ನೇಮಿಸಿ ಸಮುದಾಯವನ್ನು ವಂಚಿಸುತ್ತಿದ್ದಾರೆ. ಬೃಹತ್‌ ಸಭೆ ನಡೆಸಿ ಜನಾಂಗದಲ್ಲಿ ಜಾಗೃತಿ ಮೂಡಿಸಲು ಸಿದ್ಧತೆ ನಡೆಯುತ್ತಿದೆ’ ಎಂದರು.

‘ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸಿ, ಒಳಮೀಸಲಾತಿ ನೀಡುವಂತೆ ಮಾದಿಗ ಸಮುದಾಯ ಒತ್ತಾಯಿಸುತ್ತಿದೆ. ಕಾಂಗ್ರೆಸ್‌ ಸರ್ಕಾರದಲ್ಲಿ ಸಚಿವರಾಗಿದ್ದ ಆಂಜನೇಯ ಅವರು ಇತರ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ನಿರಾಸಕ್ತಿ ತೋರಿದರು. ಇದರಿಂದ ಈ ವರದಿ ಇನ್ನೂ ಅನುಷ್ಠಾನಕ್ಕೆ ಬರುತ್ತಿಲ್ಲ. ಸಚಿವರಾಗಿದ್ದ ಅವಧಿಯಲ್ಲಿ ಸರಿಯಾಗಿ ಕೆಲಸ ಮಾಡಲಿಲ್ಲ’ ಎಂದು ಆರೋಪಿಸಿದರು.

‘ಸತತ ಬರಗಾಲಕ್ಕೆ ತುತ್ತಾಗಿರುವ ಜಿಲ್ಲೆಯಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆಯನ್ನು ಜಾರಿಗೊಳಿಸಲಿಲ್ಲ. ಐದು ವರ್ಷ ಸಚಿವರಾಗಿದ್ದ ಅವಧಿಯಲ್ಲಿ ಜಿಲ್ಲೆ ಅಭಿವೃದ್ಧಿ ಹೊಂದಲಿಲ್ಲ. ಭದ್ರಾ ಮೆಲ್ದಂಡೆ ಯೋಜನೆಯ ಕಾಮಗಾರಿ ತ್ವರಿತಗೊಳಿಸಲು ಇಚ್ಛಾಶಕ್ತಿ ಪ್ರದರ್ಶಿಸಲಿಲ್ಲ. ಇದರಿಂದ ಜಿಲ್ಲೆ ಇನ್ನಷ್ಟು ಹಿಂದೆ ಉಳಿಯಿತು. ಲೋಕಸಭೆ ಚುನಾವಣೆಯಲ್ಲಿ ವಲಸಿಗರಿಗೆ ಮಣೆಹಾಕಿ ಸ್ಥಳೀಯರಿಗೆ ಅನ್ಯಾಯ ಮಾಡಿದರು’ ಎಂದು ದೂರಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಲಕ್ಷ್ಮಣ್, ಕಾಂಗ್ರೆಸ್ ಮುಖಂಡ ಡಾ.ಬಿ. ತಿಪ್ಪೇಸ್ವಾಮಿ, ಮಾದಿಗ ಮಹಾಸಭಾ ಯುವ ಘಟಕದ ಅಧ್ಯಕ್ಷ ಸುರೇಶ್, ಉಪಾಧ್ಯಕ್ಷ ರುದ್ರಮುನಿ, ಹೊಸದುರ್ಗ ತಾಲ್ಲೂಕು ಪಂಚಾಯಿತಿ ಸದಸ್ಯ ಕೃಷ್ಣಮೂರ್ತಿ, ಮಲ್ಲಪ್ಪ, ನಾಕಿಕೆರೆ ಹನುಮಂತಪ್ಪ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !