ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ | ಕೊಟ್ಟೂರು ಏತ ನೀರಾವರಿ ಘೋಷಿಸಿ

ಮುಖ್ಯಮಂತ್ರಿಗೆ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸೂಚನೆ
Last Updated 25 ಸೆಪ್ಟೆಂಬರ್ 2022, 3:19 IST
ಅಕ್ಷರ ಗಾತ್ರ

ಸಿರಿಗೆರೆ (ಚಿತ್ರದುರ್ಗ): ವಿಜಯನಗರ ಜಿಲ್ಲೆಯ ಕೊಟ್ಟೂರಿನಲ್ಲಿ ತರಳಬಾಳು ಹುಣ್ಣಿಮೆ ನಿಗದಿಯಾಗಿದೆ. ಚುನಾವಣೆಗೂ ಮುನ್ನವೇ ಕೊಟ್ಟೂರು ಏತ ನೀರಾವರಿ ಯೋಜನೆ ಘೋಷಣೆ ಮಾಡಿದರೆ ಅನುಕೂಲ ಎಂದು ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಒತ್ತಾಯಿಸಿದರು.

ಚಿತ್ರದುರ್ಗ ತಾಲ್ಲೂಕಿನ ಸಿರಿಗೆರೆಯ ತರಳಬಾಳು ಮಠದಲ್ಲಿ ಶನಿವಾರ ಏರ್ಪಡಿಸಿದ್ದ ಲಿಂಗೈಕ್ಯ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ 30ನೇ ಶ್ರದ್ಧಾಂಜಲಿ ಸಮಾರಂಭದಲ್ಲಿ ಸ್ವಾಮೀಜಿ ಆಶೀರ್ವಚನ ನೀಡಿದರು.

‘ತರಳಬಾಳು ಹುಣ್ಣಿಮೆ ನಡೆದ ಪ್ರದೇಶದಲ್ಲಿ ಏತ ನೀರಾವರಿ ರೂಪಿಸಲಾಗಿದೆ. ಕೊಟ್ಟೂರಿನಲ್ಲಿ ನಿಗದಿಯಾದ ಹುಣ್ಣಿಮೆ ಮಹೋತ್ಸವ ಪೂರ್ಣಗೊಳ್ಳುವ ಹೊತ್ತಿಗೆಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಸಾಧ್ಯತೆ ಇದೆ. ಯೋಜನೆಯ ಆದೇಶ ಪ್ರತಿ ಹಿಡಿದೇ ಉತ್ಸವಕ್ಕೆ ತೆರಳುವಂತಾದರೆ ಒಳಿತು’ ಎಂದು ಸೂಚಿಸಿದರು.

‘ದಾವಣಗೆರೆಯ ವಿದ್ಯಾರ್ಥಿನಿಲಯ ಸ್ಥಾಪನೆಯಾಗಿ ಶತಮಾನ ತುಂಬಿದೆ. ಇದರ ಸ್ಮರಣಾರ್ಥವಾಗಿ ವಿದ್ಯಾಸಂಸ್ಥೆಯ ಮಕ್ಕಳಿಗೆ ಉಚಿತ ಊಟ ಮತ್ತು ವಸತಿ ಸೌಲಭ್ಯ ಕಲ್ಪಿಸುವ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಇದರಿಂದ ಮಠಕ್ಕೆ ಪ್ರತಿ ವರ್ಷ ₹ 3 ಕೋಟಿ ಖರ್ಚು ತಗಲುತ್ತದೆ. ಮಠದ ಭಕ್ತರು, ಶಿಷ್ಯರು ಈ ಕಾರ್ಯಕ್ಕೆ ಕೈಜೋಡಿಸುವ ವಿಶ್ವಾಸವಿದೆ’ ಎಂದು ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಅರಮನೆ ಮತ್ತು ಗುರುಮನೆಯ ಸಂಬಂಧ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಯೂ ಮುಂದುವರಿಯುತ್ತಿದೆ. ಮಠದ ಭಕ್ತರಲ್ಲಿ ರೈತರೇ ಹೆಚ್ಚಿರುವುದನ್ನು ಮನಗಂಡ ಗುರುಗಳು ಅವರ ಬೆವರ ಹನಿಗೆ ಬೆಲೆ ಕೊಡುವ ಕಾರ್ಯ ಮಾಡುತ್ತಿದ್ದಾರೆ. ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಸರ್ಕಾರ ಬೆಂಬಲವಾಗಿ ನಿಲ್ಲಲಿದೆ’ ಎಂದರು.

'ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆ ಆಗುವ ಅಂತಿಮ ಘಟ್ಟದಲ್ಲಿದೆ. ಕೇಂದ್ರ ಸಚಿವ ಸಂಪುಟದ ಅನುಮೋದನೆ ದೊರೆತ ತಕ್ಷಣವೇ
₹ 14 ಸಾವಿರ ಕೋಟಿ ನೆರವು ಸಿಗಲಿದೆ. ಈ ಯೋಜನೆ ಪೂರ್ಣಗೊಳ್ಳಲು ದೊಡ್ಡ ಹಣಕಾಸಿನ ಶಕ್ತಿ ಬರಲಿದೆ' ಎಂದು ಸಂತಸ ವ್ಯಕ್ತಪಡಿಸಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ‘ರಾಜ್ಯಾದ್ಯಂತ ಉತ್ತಮ ಮಳೆಯಾಗಿದೆ. ಕೆರೆ, ಕಟ್ಟೆ ಜಲಾಶಯ ತುಂಬಿವೆ. ಕೆಲವು ಭಾಗದಲ್ಲಿ ಅತಿವೃಷ್ಟಿಯಿಂದ ಬೆಳೆ ನಾಶವಾಗಿದೆ. ಬೆಳೆ ನಾಶಕ್ಕೆ ಸೂಕ್ತ ಪರಿಹಾರ ನೀಡುವ ಭರವಸೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿದ್ದಾರೆ. ಫಸಲ್ ಬಿಮಾ ಯೋಜನೆಯಡಿ ದೇಶಾದ್ಯಂತ ರೈತರು ₹ 26 ಸಾವಿರ ಕೋಟಿ ಬೆಳೆ ವಿಮೆ ಕಂತು ಪಾವತಿ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ರೈತ ಸಮೂಹಕ್ಕೆ₹ 1‌ ಲಕ್ಷ ಕೋಟಿ ಪರಿಹಾರ ನೀಡಲಾಗಿದೆ’ ಎಂದು ಹೇಳಿದರು.

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ, ‘ಮಠ ಧಾರ್ಮಿಕ ಆಚರಣೆಗೆ ಸೀಮಿತವಾಗದೇ, ಸಾಮಾಜಿಕ ಬದಲಾವಣೆಗೆ ಕಾರಣವಾಗಿದೆ. ಮಧ್ಯ ಕರ್ನಾಟಕದಲ್ಲಿ ತ್ರಿವಿಧ ದಾಸೋಹ ಮಾಡಿದೆ. ಕೆರೆ ತುಂಬಿಸಿ ರೈತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ಮಾಡುತ್ತಿರುವ ಕಾರ್ಯ ಅನುಕರಣೀಯ’ ಎಂದರು.

ಸಂಸದ ಜಿ.ಎಂ.ಸಿದ್ದೇಶ್ವರ, ‘ಲಿಂಗೈಕ್ಯ ಗುರುಗಳು ಶಕ್ತಿಯಾಗಿದ್ದರು. ಬಸವಾದಿತತ್ವ ಪ್ರಚಾರ, ತ್ರಿವಿಧ ದಾಸೋಹ ಮಾಡುವ ಮೂಲಕ ಸಾಂಸ್ಕೃತಿಕ, ರಾಜಕೀಯವಾಗಿ ಸಮಾಜವನ್ನು ಮೇಲೆತ್ತಿದರು. ಅಸ್ಪೃಶ್ಯತೆ ತೊಲಗಿಸಲು ಸಹಪಂಕ್ತಿ ಭೋಜನ ಮಾಡಿದರು. ಸಮಾಜದ ಕಂದಾಚಾರ ಹೋಗಲಾಡಿಸುವ ಪ್ರಯತ್ನ ಮಾಡಿದರು’ ಎಂದು ಹೇಳಿದರು.

ಸಾಧು ಸದ್ಧರ್ಮ ವೀರಶೈವ ಸಂಘ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ಗುರುವಂದನೆ ಸಲ್ಲಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು‌. ಶಾಸಕರಾದ ಎಸ್‌.ಎ.ರವೀಂದ್ರನಾಥ್‌, ಅರುಣ್‌ ಪೂಜಾರ್‌, ಲಿಡ್ಕರ್ ಅಧ್ಯಕ್ಷ ಪ್ರೊ.ಲಿಂಗಣ್ಣ, ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್, ಬಿಜೆಪಿ ಮುಖಂಡ ಜಿ.ಎಸ್‌.ಅನಿತ್‌, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ನಂದಿನಿದೇವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ಇದ್ದರು.

ಬೆಂಗಳೂರಿನ ಗಾನಗಂಗಾ ಸಂಗೀತ ವಿದ್ಯಾಲಯದ ಗೀತಾ ಬತ್ತದ್ ವಚನ ಗೀತೆಗಳನ್ನು ಪ್ರಸ್ತುತ ಪಡಿಸಿದರು. ಬೇಲೂರಿನ ಪೃಥ್ವಿ, ಹೊನ್ನಾಳಿಯ ಐಶ್ವರ್ಯ ಭರತನಾಟ್ಯ ಪ್ರದರ್ಶಿಸಿದರು.

ಕಾರ್ಯಕ್ರಮಕ್ಕೆ ಸಾಣೇಹಳ್ಳಿ ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು ಗೈರಾಗಿದ್ದರು.

‘ಕಾವಿ ಹಾಕಿದವರೆಲ್ಲ ಗುರುಗಳಲ್ಲ’
ಕಾವಿ ಹಾಕಿಕೊಂಡ ಎಲ್ಲರೂ ಗುರುಗಳಾಗಲು ಸಾಧ್ಯವಿಲ್ಲ. ಅರಿವು ಮೂಡಿಸಿದವರು ಮಾತ್ರ ಗುರುಗಳು ಎಂದು ಕಾನೂನು ಸಚಿವ
ಜೆ.ಸಿ.ಮಾಧುಸ್ವಾಮಿ ಅಭಿಪ್ರಾಯಪಟ್ಟರು.

‘ಹಳ್ಳಿಗಳನ್ನು ಸುತ್ತಿ ಜನರಲ್ಲಿ ಅರಿವು‌ ಮೂಡಿಸಿದವರು ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ. ಭಯ ಮತ್ತು ಭಕ್ತಿಯಿಂದ ಮಠವನ್ನು ಬೆಳೆಸಿದ್ದಾರೆ. ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಸಮುದಾಯವನ್ನು ಮೇಲೆ ತಂದಿದ್ದಾರೆ. ಕರ್ನಾಟಕ ಶೈಕ್ಷಣಿಕವಾಗಿ ಪ್ರಗತಿ ಹೊಂದಲು ಮಠಗಳೇ ಕಾರಣ. ಇಲ್ಲವಾದರೆ ಹಿಂದುಳಿದ ರಾಜ್ಯದ ಸಾಲಿಗೆ ಸೇರುತ್ತಿತ್ತು’ ಎಂದರು.

‘ಬೊಮ್ಮಾಯಿ ಅವರು ಸರ್ಕಾರ ನಡೆಸುತ್ತಿರುವದು ಹೆಮ್ಮೆಯ ಸಂಗತಿ. ಬೇರೆಯವರು ಆಕಾಶಕ್ಕೆ ಏಣಿ ಹಾಕುವುದಾಗಿ ಹೇಳಬಹುದು. ಆದರೆ, ವಾಸ್ತವ ಭಿನ್ನವಾಗಿದೆ’ ಎಂದರು.

‘ಬೊಮ್ಮಾಯಿ ಗರ್ಭಗುಡಿಯ ದೇವರು ಯಡಿಯೂರಪ್ಪ ಉತ್ಸವ ಮೂರ್ತಿ’
ಬಸವರಾಜ ಬೊಮ್ಮಾಯಿ ಅವರು ಗರ್ಭಗುಡಿಯ ದೇವರು; ಬಿ.ಎಸ್‌.ಯಡಿಯೂರಪ್ಪ ಉತ್ಸವ ಮೂರ್ತಿ ಎಂದು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಕೊಂಡಾಡಿದರು.

ಮಾಧುಸ್ವಾಮಿ ಅವರು ಸರ್ದಾರ್‌ ವಲ್ಲಭಬಾಯಿ ಪಟೇಲರಿದ್ದಂತೆ. ಸರ್ಕಾರಕ್ಕೆ ಬರುವ ಯಾವುದೇ ಸವಾಲನ್ನು ಮುಂಚೂಣಿಯಲ್ಲಿ ನಿಂತು ಎದುರಿಸುತ್ತಾರೆ. ನೀರಾವರಿ ಯೋಜನೆಗೆ ಸಹಕಾರ ನೀಡಿದಎಂ.ಬಿ. ಪಾಟೀಲರು ಅಭಿಮನ್ಯುವಿನಂತೆ ಎಂದು ಮೆಚ್ಚುಗೆ ವ್ಯಕ್ತಪಡಿದರು.

**

ಕುಗ್ರಾಮಗಳಲ್ಲೂ ಶಾಲೆ, ಕಾಲೇಜು ಸ್ಥಾಪಿಸಿ ಸರ್ಕಾರದ ಕಾರ್ಯವನ್ನು ಮಠ ಮಾಡಿದೆ. ಫಸಲ್ ಬಿಮಾ ಯೋಜನೆಯ ತೊಡಕು ನಿವಾರಣೆಗೆ ಗುರುಗಳು ಪ್ರಯತ್ನಿಸಿದ್ದು ರೈತರ ಬಗೆಗಿನ ಕಾಳಜಿ ತೋರಿಸುತ್ತದೆ.
-ಜಿ.ಎಚ್.ತಿಪ್ಪಾರೆಡ್ಡಿ, ಶಾಸಕ, ಚಿತ್ರದುರ್ಗ

*

ಎಲ್ಲ ಜಾತಿ, ಸಮುದಾಯಕ್ಕೆ ಉತ್ತಮ ಶಿಕ್ಷಣ ನೀಡಿರುವುದು ಅನುಕರಣೀಯ. ಭರಮಸಾಗರ ಹೋಬಳಿಯ ಕೆರೆಗಳಿಗೆ ನೀರು ಉಣಿಸುವ ಕಾರ್ಯದಿಂದ ರೈತರ ಬದುಕು ಹಸನಾಗಿರುವುದಕ್ಕೆ ಕೃತಜ್ಞ.
-ಎಂ.ಚಂದ್ರಪ್ಪ, ಶಾಸಕ ಹೊಳಲ್ಕೆರೆ

*

ಬರಪೀಡಿತ ಜಗಳೂರು ತಾಲ್ಲೂಕಿಗೆ ನೀರು ತಂದಿರುವುದು ಹರ್ಷವುಂಟು ಮಾಡಿದೆ. ಏತ ನೀರಾವರಿ ಯೋಜನೆಯ ಕೊಳವೆ ಮಾರ್ಗ ಅಳವಡಿಸುವ ಕಾರ್ಯ ನಡೆಯುತ್ತಿದೆ. ಸ್ವಾಮೀಜಿ ಪ್ರಯತ್ನಕ್ಕೆ ಜನರು ಪುಳಕಗೊಂಡಿದ್ದಾರೆ.
-ಎಸ್. ವಿ.ರಾಮಚಂದ್ರ, ಶಾಸಕ ಜಗಳೂರು

*

ಉಬ್ರಾಣಿ ಏತ ನೀರಾವರಿ ಯೋಜನೆಯನ್ನು ತರಳಬಾಳು ಶ್ರೀ ಸಾಕಾರಗೊಳಿಸಿದರು. ರಾಜ್ಯದ ಹಲವೆಡೆ ಕೆರೆ ತುಂಬಿಸಲಾಗುತ್ತಿದೆ. ಸಮಾಜಮುಖಿ ಕಾರ್ಯಕ್ಕೆ ಕೈಜೋಡಿಸುತ್ತೇವೆ.
-ಮಾಡಾಳ್‌ ವಿರೂಪಾಕ್ಷಪ್ಪ, ಶಾಸಕ, ಚನ್ನಗಿರಿ

*

ಕಡೂರು ತಾಲ್ಲೂಕು ಬರಪೀಡಿತ ಪ್ರದೇಶ. ಅಬ್ಬೆ ತಿರುವು, ಗೋಂದಿಯಿಂದ ನೀರು ತರುವ ಪ್ರಯತ್ನಕ್ಕೆ ಮುಖ್ಯಮಂತ್ರಿ ಕೈಜೋಡಿಸಿದ್ದಾರೆ. ಇನ್ನೂ ಕೆಲ ನೀರಾವರಿ ಮುಖ್ಯಮಂತ್ರಿ ಸಹಕಾರ ಬೇಕಿದೆ.
-ಬೆಳ್ಳಿ ಪ್ರಕಾಶ್, ಶಾಸಕ ಕಡೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT