ಇದೊಂದು ಅಪ್ಪ–ಮಕ್ಕಳ ಬಜೆಟ್‌

7
ಬಿಜೆಪಿ ವಿಭಾಗೀಯ ಸಹ ಪ್ರಭಾರಿ ಜಿ.ಎಂ. ಸುರೇಶ್ ಲೇವಡಿ

ಇದೊಂದು ಅಪ್ಪ–ಮಕ್ಕಳ ಬಜೆಟ್‌

Published:
Updated:

ಚಿತ್ರದುರ್ಗ: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಂಡಿಸಿದ್ದು ರಾಜ್ಯ ಬಜೆಟ್‌ ಅಲ್ಲ, ಇದೊಂದು ಜಿಲ್ಲಾ ಪಂಚಾಯಿತಿ ಬಜೆಟ್‌ ಎಂದು ಬಿಜೆಪಿ ವಿಭಾಗೀಯ ಸಹ ಪ್ರಭಾರಿ ಜಿ.ಎಂ.ಸುರೇಶ್ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಲೇವಡಿ ಮಾಡಿದರು.

‘ಇದೊಂದು ಅಪ್ಪ – ಮಕ್ಕಳ ಬಜೆಟ್ ಆಗಿದ್ದು, ರೈತರಿಗೆ ಯಾವುದೇ ಪ್ರಯೋಜನವಿಲ್ಲ. ಸಾಲ ಮನ್ನಾ ವಿಚಾರದಲ್ಲಿ ವಚನಭ್ರಷ್ಟರಾಗುವ ಸಾಧ್ಯತೆಯೇ ಹೆಚ್ಚಿದೆ. ಶೇ 95 ರಷ್ಟು ರೈತರು ಇದರಿಂದ ವಂಚಿತರಾಗಲಿದ್ದಾರೆ. ಶೇ 5 ರಷ್ಟು ರೈತರಿಗೆ ಯೋಜನೆಯ ಲಾಭ ಸಿಕ್ಕರೆ ಹೆಚ್ಚು’ ಎಂದು ಅಭಿಪ್ರಯಾಪಟ್ಟರು.

‘ಕೇಂದ್ರ ಸರ್ಕಾರ ರೈತರ ಪರಿಸ್ಥಿತಿಗಳನ್ನು ಅರ್ಥಮಾಡಿಕೊಂಡು ಅನೇಕ ಯೋಜನೆ ಜಾರಿಗೆ ತಂದಿದೆ. ಆದರೆ, ಈ ಬಗ್ಗೆ ಮಾಹಿತಿ ಇಲ್ಲದ ಮುಖ್ಯಮಂತ್ರಿ ಮನಬಂದಂತೆ ಮಾತನಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಜೆಡಿಎಸ್ ಶಾಸಕರು ಪ್ರತಿನಿಧಿಸುವ 37 ಕ್ಷೇತ್ರಗಳಿಗೆ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ. ತವರು ಜಿಲ್ಲೆ ಹಾಸನ ಮತ್ತು ರಾಮನಗರಕ್ಕೆ ಮಣೆ ಹಾಕಲಾಗಿದೆ. ಬಜೆಟ್‌ನಿಂದ ಎಲ್ಲ ರೈತರಿಗೆ ಅನುಕೂಲವಿಲ್ಲ. ಅನ್ನದಾತರಿಗೆ ಮೋಸ ಮಾಡುವ ತಂತ್ರಗಾರಿಕೆ ಬಜೆಟ್‌ನಲ್ಲಿದೆ’ ಎಂದು ದೂರಿದರು.

ಬಿಜೆಪಿ ರೈತ ಮೋರ್ಚ ಜಿಲ್ಲಾ ಘಟಕದ ಅಧ್ಯಕ್ಷ ಡಿ.ರಮೇಶ್ ಮಾತನಾಡಿ, ‘ಬರಪೀಡಿತ ಚಿತ್ರದುರ್ಗ ಜಿಲ್ಲೆಗೆ ಯಾವುದೇ ಮಾನ್ಯತೆ ನೀಡಿಲ್ಲ. ₹ 2 ಲಕ್ಷದವರೆಗಿನ ಸುಸ್ತಿ ಸಾಲ ಮನ್ನಾ ಮಾಡಿರುವುದರಿಂದ ಎಲ್ಲ ರೈತರಿಗೂ ಪ್ರಯೋಜನವಾಗದು’ ಎಂದರು.

‘ಜಿಲ್ಲೆಯಲ್ಲಿ ಈವರೆಗೂ 180 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಡಿಯುವ ನೀರಿಗೂ ಹಾಹಾಕಾರವಿದೆ ಎಂಬ ವಿಷಯ ಸರ್ಕಾರಕ್ಕೆ ತಿಳಿದಿದೆ. ಆದರೂ, ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪಿಸಿಲ್ಲ’ ಎಂದು ಕಿಡಿಕಾರಿದರು.

‘ಸರಿಯಾದ ಸಮಯಕ್ಕೆ ಮಳೆಯಾಗದೆ, ರೈತರು ಕೊಳವೆ ಬಾವಿಗಳ ಮೇಲೆ ಅವಲಂಬಿತರಾಗುತ್ತಿದ್ದಾರೆ. ಸಿರಿಧಾನ್ಯಗಳ ತವರೂರು ಚಿತ್ರದುರ್ಗ ಜಿಲ್ಲೆಯ ರೈತರ ಹಿತವನ್ನು ಈ ಬಜೆಟ್ ಕಡೆಗಣಿಸಿದೆ. ಇದರಿಂದ ಜಿಲ್ಲೆಯ ರೈತರಿಗೆ ಅನ್ಯಾಯವಾಗಿದೆ’ ಎಂದರು.

ರೈತ ಮೋರ್ಚ ಪ್ರಧಾನ ಕಾರ್ಯದರ್ಶಿ ನಂದಿ ನಾಗರಾಜ್, ಜಿಲ್ಲಾ ಬಿಜೆಪಿ ವಕ್ತಾರ ನಾಗರಾಜ್ ಬೇದ್ರೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರತ್ನಮ್ಮ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !