ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಪಿಎಂಸಿ ಸ್ಥಗಿತ: ರೈತ ಅತಂತ್ರ

Last Updated 17 ಮೇ 2021, 3:28 IST
ಅಕ್ಷರ ಗಾತ್ರ

ಚಿತ್ರದುರ್ಗ: ಪೂರ್ವ ಮುಂಗಾರು ಮಳೆ ವಾಡಿಕೆಗಿಂತ ಹೆಚ್ಚಾಗಿ ಸುರಿಯುತ್ತಿದೆ. ಕೃಷಿ ಚಟುವಟಿಕೆಗೆ ರೈತರು ಸಜ್ಜಾಗುತ್ತಿದ್ದಾರೆ. ಆದರೆ, ಬೀಜ, ರಸಗೊಬ್ಬರ ಖರೀದಿ, ಭೂಮಿ ಹದಮಾಡಿಕೊಳ್ಳಲು ಸಂಗ್ರಹಿಸಿಟ್ಟಿದ್ದ ಧಾನ್ಯದ ಮಾರಾಟ ಆಗುತ್ತಿಲ್ಲ. ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ (ಎಪಿಎಂಸಿ) ವಹಿವಾಟು ಸ್ಥಗಿತಗೊಂಡಿರುವುದು ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ಕೊರೊನಾ ಸೋಂಕು ನಿಯಂತ್ರಣಕ್ಕೆ ಸರ್ಕಾರ ಲಾಕ್‌ಡೌನ್‌ ಘೋಷಣೆ ಮಾಡಿದೆ. ಕೃಷಿ ಸಂಬಂಧಿತ ವಹಿವಾಟಿಗೆ ಅವಕಾಶ ಮಾಡಿಕೊಟ್ಟಿದೆ. ಇದಕ್ಕೆ ನಿಗದಿಪಡಿಸಿದ ಸಮಯ, ಪೊಲೀಸರ ಲಾಠಿ ಏಟಿನ ಭೀತಿ ಹಾಗೂ ಕೋವಿಡ್‌ ಆತಂಕದಿಂದ ಜಿಲ್ಲೆಯ ಬಹುತೇಕ ಎಪಿಎಂಸಿಗಳಲ್ಲಿ ವಹಿವಾಟು ಸ್ಥಗಿತಗೊಂಡಿದೆ. ದಲ್ಲಾಲರು, ಖರೀದಿದಾರರ ಮನವೊಲಿಸಲು ಯತ್ನಿಸಿದ ಅಧಿಕಾರಿಗಳು ಅಸಹಾಯಕತೆಯಿಂದ ಮೌನಕ್ಕೆ ಶರಣಾಗಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಗಳಿವೆ. ಚಿಕ್ಕಜಾಜೂರು, ಭೀಮಸಮುದ್ರ, ಶ್ರೀರಾಂಪುರದಂತಹ ದೊಡ್ಡ ಗ್ರಾಮಗಳಲ್ಲಿಯೂ ಕೃಷಿ ಉತ್ಪನ ವಹಿವಾಟಿಗೆ ಮಾರುಕಟ್ಟೆ ವ್ಯವಸ್ಥೆ ಇದೆ. ಚಿತ್ರದುರ್ಗ, ಹೊಸದುರ್ಗ ಹಾಗೂ ಚಳ್ಳಕೆರೆ ಎಪಿಎಂಸಿಯ ವಹಿವಾಟು ದೊಡ್ಡ ಮಟ್ಟದಲ್ಲಿ ನಡೆಯುತ್ತದೆ. ಅಡಿಕೆ ಮಾರುಕಟ್ಟೆಗೆ ಭೀಮಸಮುದ್ರ, ಕೊಬ್ಬರಿ ಮಾರುಕಟ್ಟೆಗೆ ಶ್ರೀರಾಂಪುರ ಮಾರುಕಟ್ಟೆ ರಾಜ್ಯದಲ್ಲೇ ಖ್ಯಾತಿ ಪಡೆದಿವೆ. ಎಪಿಎಂಸಿ ಸ್ಥಗಿತಗೊಂಡಿದ್ದರಿಂದ ಕೃಷಿ ಉತ್ಪನ್ನಗಳ ಮಾರಾಟ ಮತ್ತು ಖರೀದಿ ನಡೆಯದೇ ಹಲವು ದಿನಗಳೇ ಕಳೆದಿವೆ.

ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಜಿಲ್ಲೆಯಲ್ಲಿ ಮುಂಗಾರು ಪೂರ್ವ ತಯಾರಿಗೆ ರೈತರು ಸಜ್ಜಾಗುತ್ತಾರೆ. ಹಿಂಗಾರು ಹಾಗೂ ಮುಂಗಾರಿನ ಧಾನ್ಯಗಳನ್ನು ಮಾರುಕಟ್ಟೆಗೆ ತರುತ್ತಾರೆ. ಬರುವ ಆದಾಯದಲ್ಲಿ ಬೀಜ, ಗೊಬ್ಬರ ಖರೀದಿಸುತ್ತಾರೆ. ಕೊರೊನಾ ಸೋಂಕಿನ ಎರಡನೇ ಅಲೆ ಇದೇ ಸಂದರ್ಭದಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿರುವುದರಿಂದ ರೈತರು ತೊಂದರೆಗೆ ಸಿಲುಕಿದ್ದಾರೆ. ಧಾನ್ಯಗಳ ಮಾರಾಟಕ್ಕೆ ಪರದಾಡುತ್ತಿದ್ದಾರೆ. ಬೀಜ ಮತ್ತು ಗೊಬ್ಬರ ಖರೀದಿಗೂ ಕಷ್ಟಪಡುತ್ತಿದ್ದಾರೆ.

ಕೃಷಿ ಉತ್ಪನ್ನ ಮಾರಾಟಕ್ಕೆ ಇದು ಸಕಾಲವಲ್ಲದಿದ್ದರೂ ಎಪಿಎಂಸಿಯಲ್ಲಿ ಉತ್ತಮ ವಹಿವಾಟು ದಾಖಲಾಗುತ್ತಿತ್ತು. ಬೇಸಿಗೆ ಹಂಗಾಮಿನ ಶೇಂಗಾ, ಸೂರ್ಯಕಾಂತಿ, ಮೆಕ್ಕೆಜೋಳ, ಹತ್ತಿ, ಮೆಣಸಿನಕಾಯಿ, ಅಲಸಂದೆ, ಹುಣಸೆ ಹಣ್ಣು... ಹೀಗೆ ತರಹೇವಾರಿ ಉತ್ಪನಗಳು ಮಾರುಕಟ್ಟೆಗೆ ಬರುತ್ತಿದ್ದವು. ದಾವಣಗೆರೆ ಜಿಲ್ಲೆಯ ಜಗಳೂರು, ವಿಜಯನಗರ ಜಿಲ್ಲೆಯ ಕೂಡ್ಲಿಗಿ, ತುಮಕೂರು ಜಿಲ್ಲೆಯ ಪಾವಗಡ ಸೇರಿ ನೆರೆಯ ಜಿಲ್ಲೆಯ ರೈತರು ಚಿತ್ರದುರ್ಗ ಎಪಿಎಂಸಿ ಮೇಲೆ ಅವಲಂಬಿತರಾಗಿದ್ದಾರೆ. ಪಕ್ಕದ ಆಂಧ್ರಪ್ರದೇಶದ ರೈತರು ಚಳ್ಳಕೆರೆ ಎಪಿಎಂಸಿಯೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದಾರೆ. ಖರೀದಿ ಸ್ಥಗಿತಗೊಂಡಿದ್ದರಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ನೀರವ ಮೌನ ಆವರಿಸಿದೆ.
ಎಲ್ಲ ಮಳಿಗೆ, ಗೋದಾಮುಗಳು ಬಾಗಿಲು ಹಾಕಿವೆ. ಕೂಲಿಗಾಗಿ
ಕಾಯುವ ಹಮಾಲಿಗಳು ಮಾತ್ರ ಬೆಳಗಿನ ಹೊತ್ತು ಇಲ್ಲಿ ಕಾಣಸಿಗುತ್ತಾರೆ.

ಏಪ್ರಿಲ್‌ ಅಂತ್ಯದಲ್ಲಿ ಸರ್ಕಾರ ಲಾಕ್‌ಡೌನ್‌ ಮಾದರಿಯ ನಿರ್ಬಂಧಗಳನ್ನು ಹೇರಿದಾಗ ಎಪಿಎಂಸಿ ವಹಿವಾಟಿಗೆ ತೊಂದರೆ ಉಂಟಾಗಿತ್ತು. ಖರೀದಿದಾರರು ಹಾಗೂ ದಲ್ಲಾಲರ ಒತ್ತಾಯಕ್ಕೆ ಮಣಿದ ಸರ್ಕಾರ ಎಪಿಎಂಸಿ ವಹಿವಾಟಿಗೆ ಬೆಳಿಗ್ಗೆ 6 ರಿಂದ
ಮಧ್ಯಾಹ್ನ 12ರವರೆಗೆ ಅವಕಾಶ ಕಲ್ಪಿಸಿತು. ನಿಗದಿತ ಅವಧಿಯಲ್ಲಿಯೇ ಎಪಿಎಂಸಿ ವಹಿವಾಟು ನಡೆಯುತ್ತಿತ್ತು. ಮೇ 10ರ ನಂತರ ವಹಿವಾಟಿನ ಅವಧಿಯನ್ನು ನಾಲ್ಕು ಗಂಟೆಗೆ ಸೀಮಿತಗೊಳಿಸಿದ್ದು ಖರೀದಿದಾರರ ಅಸಮಾಧಾನಕ್ಕೆ ಕಾರಣವಾಯಿತು.

‘ಬೆಳಿಗ್ಗೆ 6ರಿಂದ 10ರ ವರೆಗಿನ ಅವಧಿಯಲ್ಲಿ ವಹಿವಾಟು ನಡೆಸುವುದು ಕಷ್ಟ. ಕೃಷಿ ಉತ್ಪನ್ನದ ಗುಣಮಟ್ಟ ನೋಡಿ ಟೆಂಡರ್‌ ಹಾಕಿ ಖರೀದಿಸುವ ಪ್ರಕ್ರಿಯೆಗೆ ಸಾಕಷ್ಟು ಸಮಯ ಹಿಡಿಯುತ್ತದೆ. ನಾಲ್ಕು ಗಂಟೆಯ ಅವಧಿ ಪ್ರಾಯೋಗಿಕವಾಗಿ ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ಮನವರಿಕೆ ಆಯಿತು. ಹಳ್ಳಿಗಳಿಂದ ರೈತರು ಬರುವುದಕ್ಕೂ ತೊಂದರೆ ಉಂಟಾಗುತ್ತಿತ್ತು. ಹೀಗಾಗಿ, ಸರ್ಕಾರದ ಗಮನ ಸೆಳೆದು ವಹಿವಾಟು ಸ್ಥಗಿತಗೊಳಿಸಲಾಯಿತು’ ಎಂದು ವಿವರಿಸುತ್ತಾರೆ ಖರೀದಿದಾರರ ಸಂಘದ ಕಾರ್ಯದರ್ಶಿ ಮಲ್ಲಣ್ಣ ಸಾಹುಕಾರ್‌.

ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದು ಎಲ್ಲರನ್ನೂ ಕಂಗೆಡಿಸಿದೆ. ಕೃಷಿ ಉತ್ಪನ್ನದೊಂದಿಗೆ ಬರುವ ರೈತರು, ಹಮಾಲರು, ಲಾರಿ ಚಾಲಕರು ಹೀಗೆ ಪ್ರತಿ ಅಂಗಡಿ ಮುಂದೆ ಕನಿಷ್ಠ 30 ಜನರು ಸೇರುತ್ತಿದ್ದರು. ಮಾಸ್ಕ್‌ ಧರಿಸುವ, ಸ್ಯಾನಿಟೈಸರ್ ಬಳಸುವ ಹಾಗೂ ಅಂತರ ಕಾಯ್ದುಕೊಳ್ಳುವಂತೆ ಜನರಿಗೆ ತಿಳಿವಳಿಕೆ ನೀಡಿದರೂ ಪ್ರಯೋಜನವಾಗಿರಲಿಲ್ಲ. ಹೀಗಾಗಿ, ವಹಿವಾಟು ಸ್ಥಗಿತ ಮಾಡುವುದು ಅನಿವಾರ್ಯವಾಗಿತ್ತು ಎಂಬುದು ವ್ಯಾಪಾರಿಗಳ ಅಭಿಪ್ರಾಯ.

ಬೆಳಿಗ್ಗೆ 10 ಗಂಟೆಯವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶ ನೀಡಿದ್ದರಿಂದ ಸಂಚಾರಕ್ಕೆ ತೊಂದರೆ ಇಲ್ಲ. ಆದರೆ, ಎಪಿಎಂಸಿ ಮಾರುಕಟ್ಟೆಯಿಂದ ಮನೆಗೆ ಮರಳುವಾಗ ಮಧ್ಯಾಹ್ನ ಕಳೆಯುತ್ತಿತ್ತು. ಹಮಾಲರು, ರೈತರು ಹಾಗೂ ಅಂಗಡಿಗಳ ಮಾಲೀಕರು ಪೊಲೀಸರ ಲಾಠಿ ಏಟಿಗೆ ಗುರಿಯಾಗಬೇಕಾಯಿತು. ಇದು ವಹಿವಾಟಿನಿಂದ ಹಿಂದೆ ಸರಿಯುವಂತೆ ಮಾಡಿತು.

ಖರೀದಿದಾರರಿಗೆ ಕೋವಿಡ್‌ ಭೀತಿ

ಹೊಸದುರ್ಗ: ಕೊರೊನಾ ಸೋಂಕಿನ ಎರಡನೇ ಅಲೆಯ ಕರಿನೆರಳು ವ್ಯಾಪಕವಾಗಿ ಬಿದ್ದಿರುವ ಪರಿಣಾಮ ಇಲ್ಲಿನ ಎಪಿಎಂಸಿ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಬಹುತೇಕ ಸ್ಥಗಿತವಾಗಿದೆ.

ಪೂರ್ವ ಮುಂಗಾರು ಹಂಗಾಮಿನ ಮಳೆ ಆರಂಭವಾಗುತ್ತಿದ್ದಂತೆ ಬಿತ್ತನೆ ಬೀಜ, ಗೊಬ್ಬರ ಹಾಗೂ ಕೃಷಿ ಸಾಧನ, ಸಲಕರಣೆ ಖರೀದಿಸಲು ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ರಾಗಿ, ಸಾಮೆ, ಹುರುಳಿ, ಹೆಸರುಕಾಳು, ಕಡಲೆಕಾಳು ಸೇರಿ ಇನ್ನಿತರ ದವಸ–ಧಾನ್ಯಗಳನ್ನು ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಗೆ ತಂದು ಮಾರಾಟ ಮಾಡುತ್ತಿದ್ದರು. ಇದರಿಂದ ಬಂದ ಹಣದಲ್ಲಿ ಕೃಷಿ ಚಟುವಟಿಕೆಗೆ ಬೇಕಾದ ಸಾಮಗ್ರಿ ಖರೀದಿಸುತ್ತಿದ್ದರು.

ಆದರೆ, ಈ ಬಾರಿ ಲಾಕ್‌ಡೌನ್‌ ಕಠಿಣವಾಗಿದೆ.
ಬೆಳಿಗ್ಗೆ 6ರಿಂದ 10 ಗಂಟೆಯವರೆಗೂ ಎಪಿಎಂಸಿಯಲ್ಲಿ ವ್ಯಾಪಾರ, ವಹಿವಾಟು ನಡೆಸಲು ಅನುಮತಿ ನೀಡಿದ್ದರೂ ಒಂದೆಡೆ ಕೊರೊನಾ ಭೀತಿ ಹಾಗೂ ಪೊಲೀಸರ ಭಯದಿಂದ ಬಹುತೇಕ ರೈತರು ಮಾರುಕಟ್ಟೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಕೆಲವು ರೈತರು ಕಷ್ಟಪಟ್ಟು ಮಾರುಕಟ್ಟೆಗೆ ದವಸ ತಂದರೂ ಖರೀದಿದಾರರು ಸರಿಯಾಗಿ ಬರುತ್ತಿಲ್ಲ. ಇದರಿಂದಾಗಿ ಎಂದಿನಂತೆ ಮಾರುಕಟ್ಟೆ ನಡೆಯುತ್ತಿಲ್ಲ.

ಮತ್ತೊಂದೆಡೆ ಬೆಂಬಲ ಬೆಲೆಗೆ ರಾಗಿ ಮಾರಾಟ ಮಾಡಿದ್ದ ಹಣವೂ ರೈತರ ಕೈಸೇರಿಲ್ಲ. ಇದರಿಂದಾಗಿ ಕೃಷಿ ಕಾಯಕಕ್ಕೆ ಬೇಕಾದ ಅಗತ್ಯ ವಸ್ತುಗಳ ಖರೀದಿಗೆ ರೈತರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಹಾರ್ಡ್‌ವೇರ್‌, ಆಯಿಲ್‌ ಸೇರಿ ಇನ್ನಿತರ ಅಂಗಡಿಗಳು ಬಂದ್‌ ಆಗಿರುವುದರಿಂದ ಕೃಷಿ ಪಂಪ್‌ಸೆಟ್‌, ಟ್ರ್ಯಾಕ್ಟರ್‌, ಎತ್ತಿನ ಬೇಸಾಯಕ್ಕೆ ಬೇಕಾದ ಕೃಷಿ ಸಲಕರಣೆಗಳೂ ಸಿಗುತ್ತಿಲ್ಲ.

ಪಟ್ಟಣದ ಕೋಟೆ ಬಡಾವಣೆಯಲ್ಲಿ ಪ್ರತಿದಿನ ಬೆಳಿಗ್ಗೆ ನಡೆಯುತ್ತಿದ್ದ ಬಂಡೆ ಸಂತೆ ರದ್ದು ಮಾಡಿರುವುದರಿಂದ ಸೊಪ್ಪು, ಹೂವು, ಹಣ್ಣು, ತರಕಾರಿ ಬೆಳೆಯುವ ರೈತರ ಗೋಳು ಹೇಳತೀರದಾಗಿದೆ ಎನ್ನುತ್ತಾರೆ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಕೆ.ಸಿ. ಮಹೇಶ್ವರಪ್ಪ.

ಸಂಕಷ್ಟದಲ್ಲಿ ಕಾರ್ಮಿಕರು

ಚಳ್ಳಕೆರೆ: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ನಡೆಯುತ್ತಿದ್ದ ವಾಣಿಜ್ಯ, ವ್ಯಾಪಾರ ವಹಿವಾಟು ಲಾಕ್‌ಡೌನ್‌ನಿಂದಾಗಿ ಸಂಪೂರ್ಣ ಸ್ಥಗಿತಗೊಂಡಿದೆ. ರೈತರು, ವರ್ತಕರು ಹಾಗೂ ಕೂಲಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಲಾಕ್‍ಡೌನ್‌ಗೂ ಮೊದಲು ಶೇಂಗಾ, ಒಣಮೆಣಸಿಕಾಯಿ, ಹುಣಸೆಹಣ್ಣು, ಮೆಕ್ಕೆಜೋಳ, ರಾಗಿ ಬರುತ್ತಿತ್ತು. ಹೀಗೆ ಮಾರುಕಟ್ಟೆಗೆ ಬರುವ ಧಾನ್ಯದಲ್ಲಿ ಆಂಧ್ರಪ್ರದೇಶದ ಪಾಲು ಶೇ 80ರಷ್ಟಿತ್ತು. ಪ್ರತಿ ಶನಿವಾರ ಮತ್ತು ಭಾನುವಾರ ವಹಿವಾಟು ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿತ್ತು. ಇದರಿಂದ ಮಾರುಕಟ್ಟೆಗೆ ಉತ್ತಮ ಆದಾಯ ಬರುತ್ತಿತ್ತು.

ಎಲ್ಲೆಡೆ ವ್ಯಾಪಿಸುತ್ತಿರುವ ಕೊರೊನಾ ಎರಡನೇ ಅಲೆ ಭೀತಿಯಿಂದ ಸಂಚಾರ ಸ್ಥಗಿತಗೊಂಡಿದೆ. ಇದರಿಂದ ಮಾರುಕಟ್ಟೆಗೆ ಉತ್ಪನ್ನ ಬರುತ್ತಿಲ್ಲ. ಸೋಂಕಿನ ಭೀತಿ ಹೆಚ್ಚಿದ ಕಾರಣ ಖರೀದಿದಾರರು ಬರುತ್ತಿಲ್ಲ. ಟೆಂಡರ್ ಪ್ರಕ್ರಿಯೆ ಜರುಗುತ್ತಿಲ್ಲ. ಕೂಲಿಯಿಂದ ವಂಚಿತರಾದ ನೂರಾರು ಜನ ಹಮಾಲಿ ಕಾರ್ಮಿಕರು ತೊಂದರೆ ಅನುಭವಿಸುತ್ತಿದ್ದಾರೆ.

‘ಬಿತ್ತನೆ ಬೀಜ–ಗೊಬ್ಬರಕ್ಕೆ ಪಡೆದ ಸಾಲದ ಬಡ್ಡಿ ಏರುತ್ತದೆ ಎಂಬ ಭಯದಿಂದ ಬೆಳೆದ ಬೆಳೆಯನ್ನು ರೈತರು ಕಡಿಮೆ ಬೆಲೆಗೆ ಕೊಟ್ಟು ಸಾಲ ತೀರಿಸುವ ಪರಿಸ್ಥಿತಿ ಒದಗಿ ಬಂದಿದೆ’ ಎಂದು ರೈತ ಟಿ.ದೊಡ್ಡಣ್ಣ ಆತಂಕ ವ್ಯಕ್ತಪಡಿಸಿದರು.

ದಲ್ಲಾಲ್ಲರ ಸಂಘದ ತಾಲ್ಲೂಕು ಅಧ್ಯಕ್ಷ ಅರವಿಂದ, ‘ಮಾರುಕಟ್ಟೆಗೆ ಬರುತ್ತಿರುವ ಅಲ್ಪ ಸ್ವಲ್ಪ ಬೆಳೆಯನ್ನು ದಾಸ್ತಾನು ಮಾಡುತ್ತಿದ್ದೇವೆ. ತುಂಬಾ ತೊಂದರೆ ಇದೆ. ಬೀಜ ಮತ್ತು ಗೊಬ್ಬರಕ್ಕೆ ನೀಡಿದ ಸಾಲ ವಸೂಲಿ ಆಗುತ್ತಿಲ್ಲ’ ಎಂದು ಹೇಳಿದರು.

‘ವ್ಯಾಪಾರ ವಹಿವಾಟು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಸರ್ಕಾರ ನಿಗದಿಪಡಿಸಿದ ಕೆಲಸದ ಸಮಯ ಕಾರ್ಮಿಕರಿಗೆ ಸಾಕಾಗುತ್ತಿಲ್ಲ. ಹಬ್ಬುತ್ತಿರುವ ಕೊರೊನಾ ಸೋಂಕಿಗೆ ಕೂಲಿ ಕಾರ್ಮಿಕರು ಆತಂಕಗೊಂಡಿದ್ದಾರೆ’ ಎಂದು ಎಪಿಎಂಸಿ ಕಾರ್ಯದರ್ಶಿ ಶ್ರೀನಿವಾಸ್‍ ರೆಡ್ಡಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT