ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಪಾಳವಿಲ್ಲದೆ ರಾಮ ಪರಿಪೂರ್ಣನಲ್ಲ: ನರೇಂದ್ರ ಮೋದಿ

Last Updated 11 ಮೇ 2018, 19:30 IST
ಅಕ್ಷರ ಗಾತ್ರ

ಜನಕಪುರ: ‘ನೇಪಾಳವಿಲ್ಲದೆ ಭಾರತ ಪರಿಪೂರ್ಣವಾಗುವುದೇ ಇಲ್ಲ. ಹೀಗಾಗಿ ನೆರೆಯ ದೇಶಗಳ ವಿಚಾರ ಬಂದಾಗ ಭಾರತವು ನೇಪಾಳಕ್ಕೆ ಆದ್ಯತೆ ನೀಡುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಎರಡು ದಿನಗಳ ನೇಪಾಳ ಪ್ರವಾಸದಲ್ಲಿರುವ ಮೋದಿ, ಇಲ್ಲಿನ ಜಾನಕಿ ಮಂದಿರದ ಆವರಣದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.

‘ನಿಜವಾದ ಸ್ನೇಹಿತ ತೊಂದರೆಯಲ್ಲಿದ್ದಾಗ, ಆತನ ಸ್ನೇಹಿತ ಸುಮ್ಮನೆ ಕೂರಲು ಸಾಧ್ಯವಿಲ್ಲ ಎಂದು ರಾಮಚರಿತಮಾನಸ ಹೇಳುತ್ತದೆ. ಭಾರತ ಮತ್ತು ನೇಪಾಳಗಳು ಕಷ್ಟಕಾಲದಲ್ಲಿ ಪರಸ್ಪರ ಹೆಗಲುಕೊಟ್ಟು ನಿಂತಿವೆ. ಸೀತಾಮಾತೆಯ ಜನ್ಮಸ್ಥಳವಾದ ಜನಕಪುರದ ಬಗ್ಗೆ ಭಾರತೀಯರಿಗೆ ಬಿಡಿಸಲಾಗದ ನಂಟಿದೆ. ಜನಕಪುರದ ಅಭಿವೃದ್ಧಿಗೆ ಭಾರತ ₹ 100 ಕೋಟಿ ನೀಡಲಿದೆ’ ಎಂದು ಮೋದಿ ಘೋಷಿಸಿದರು.

ಜನಕಪುರ ಮತ್ತು ಭಾರತದ ಅಯೋಧ್ಯೆ ಮಧ್ಯೆ ನೇರ ಬಸ್‌ ಸಂಪರ್ಕ ಸೇವೆಗೆ ಮೋದಿ ಮತ್ತು ನೇಪಾಳ ಪ್ರಧಾನಿ ಕೆ.ಪಿ.ಒಲಿ ಶರ್ಮಾ ಚಾಲನೆ ನೀಡಿದರು. ‘ನಾನು ಇಲ್ಲಿಗೆ ಪ್ರಧಾನಿಯಾಗಿ ಬಂದಿಲ್ಲ. ಒಬ್ಬ ಭಕ್ತನಾಗಿ ಬಂದಿದ್ದೇನೆ. ನೇಪಾಳವಿಲ್ಲದೆ ಭಾರತೀಯರ ನಂಬಿಕೆ, ಭಾರತದ ದೇವಾಲಯಗಳು, ನಮ್ಮ ರಾಮನೂ ಪರಿಪೂರ್ಣವಾಗುವುದಿಲ್ಲ. ರಾಮಾಯಣಕ್ಕೆ ಸಂಬಂಧಿಸಿದ ಪ್ರಮುಖ ಸ್ಥಳಗಳ ತೀರ್ಥಯಾತ್ರೆಗೆಂದು ಭಾರತದಲ್ಲಿ ‘ರಾಮಾಯಣ ‍ವಲಯ ತೀರ್ಥಯಾತ್ರೆ’ ಯೋಜನೆ ರೂಪಿಸಲಾಗುತ್ತಿದೆ. ಜನಕಪುರ–ಅಯೋಧ್ಯೆ ಬಸ್ ಸೇವೆಯನ್ನು ಅದರೊಂದಿಗೆ ಜೋಡಿಸುತ್ತೇವೆ. ಇದರಿಂದ ಉದ್ಯೋಗಾವಕಾಶವೂ ಹೆಚ್ಚುತ್ತದೆ’ ಎಂದು ಅವರು ಹೇಳಿದರು.

‘ಬಿಹಾರದ ರಕ್ಸಾಲ್ ಮತ್ತು ನೇಪಾಳ ರಾಜಧಾನಿ ಕಠ್ಮಂಡು ನಡುವೆ ರೈಲುಮಾರ್ಗ ಅಭಿವೃದ್ಧಿಗೆ ಈಗಾಗಲೇ ಯೋಜನೆ ಸಿದ್ಧಪಡಿಸಿದ್ದೇವೆ. ರಸ್ತೆ ಮತ್ತು ರೈಲು ಸಂಪರ್ಕದಿಂದ ಎರಡೂ ದೇಶಗಳ ಮಧ್ಯೆ ವಾಣಿಜ್ಯ ಚಟುವಟಿಕೆ ಹೆಚ್ಚುತ್ತದೆ. ನೇಪಾಳವು ಭಾರತದೊಂದಿಗೆ ಸಂಪ್ರದಾಯ, ವಾಣಿಜ್ಯ, ಪ್ರವಾಸ, ತಂತ್ರಜ್ಞಾನ ಮತ್ತು ಸಾರಿಗೆ ಕ್ಷೇತ್ರಗಳಲ್ಲಿ ಸಹಕಾರ ನೀಡಿದರೆ ಎರಡೂ ದೇಶಗಳಿಗೆ ಲಾಭವಾಗುತ್ತದೆ’ ಎಂದು ಮೋದಿ ಅವರು ಹೇಳಿದರು.

ಮೈಥಿಲಿ ಕುರ್ತಾ
ನೇಪಾಳ ಪ್ರಧಾನಿ ಒಲಿ ಉಡುಗೊರೆಯಾಗಿ ನೀಡಿದ್ದ ಮೈಥಿಲಿ ಕುರ್ತಾವನ್ನು ಮೋದಿ ಧರಿಸಿದ್ದರು. ನೇಪಾಳದ 2ನೇ ಪ್ರಾಂತದ ಮುಖ್ಯಮಂತ್ರಿ ಲಾಲ್ ಬಾಬು ರಾವತ್ ಅವರು 121 ಕೆ.ಜಿ. ತೂಕದ ಹೂಮಾಲೆ ಹಾಕಿ ಜನಕಪುರಕ್ಕೆ ಮೋದಿಯನ್ನು ಸ್ವಾಗತಿಸಿದರು.

ಸಂಬಂಧ ಗಟ್ಟಿ
‘ಭಾರತ ಮತ್ತು ನೇಪಾಳದ ಮಧ್ಯೆ ಮುಕ್ತ ಗಡಿ ವ್ಯವಸ್ಥೆ ಇದ್ದರೆ, ಎರಡೂ ದೇಶಗಳ ಜನರ ಮಧ್ಯೆ ಸಂಪರ್ಕ ಸುಲಭವಾಗುತ್ತದೆ. ವಾಣಿಜ್ಯ ವ್ಯವಹಾರವೂ ಹೆಚ್ಚುತ್ತದೆ. ಮುಕ್ತ ಗಡಿಯು ಜನರ ಸಂಬಂಧ ಗಟ್ಟಿಗೊಳಿಸುತ್ತದೆ’ ಎಂದು ಲಾಲ್ ಬಾಬು ರಾವತ್ ಹೇಳಿದರು.

‘ಸಂಸ್ಕೃತಿ ಒಂದೇ’
‘ನೇಪಾಳ ಮತ್ತು ಭಾರತಗಳ ಸಂಸ್ಕೃತಿ, ನಾಗರಿಕತೆ ಮತ್ತು ಇತಿಹಾಸ ಒಂದೇ ಆಗಿವೆ. ಹೀಗಾಗಿ ಹಿಂದಿನಿಂದಲೂ ಎರಡು ದೇಶಗಳ ನಡುವಣ ಸಂಬಂಧ ಬಹಳ ಗಟ್ಟಿಯಾಗಿದೆ’ ಎಂದು ನೇಪಾಳ ರಕ್ಷಣಾ ಸಚಿವ ಈಶ್ವರ್ ಪೋಖರೆಲ್ ಹೇಳಿದರು.

ಜನಕಪುರ ಅಯೋಧ್ಯ ಬಸ್‌
495 ಕಿ.ಮೀ – ಅಯೋಧ್ಯೆ–ಜನಕಪುರಿ ನಡುವಣ ಅಂತರ
15– ರಾಮಾಯಣ ವಲಯ ತೀರ್ಥಯಾತ್ರೆಯಲ್ಲಿರುವ ಕ್ಷೇತ್ರಗಳ ಸಂಖ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT