ಶುಕ್ರವಾರ, ಅಕ್ಟೋಬರ್ 30, 2020
26 °C
ಪ್ರಯಾಣಿಕರ ಸುರಕ್ಷತೆಗೆ ಒತ್ತು, ಚಳ್ಳಕೆರೆಯಲ್ಲಿ ಪ್ರಾಯೋಗಿಕ ಅನುಷ್ಠಾನ

‘ಆಟೊ ಸ್ನೇಹಿ’ ವ್ಯವಸ್ಥೆಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಪ್ರಯಾಣಿಕರ ಸುಕ್ಷತೆಯ ದೃಷ್ಟಿಯಿಂದ ಪೊಲೀಸ್‌ ಇಲಾಖೆ ಹಾಗೂ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ) ರೂಪಿಸಿದ ‘ಆಟೊ ಸ್ನೇಹಿ’ ವ್ಯವಸ್ಥೆಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ ಅವರು ಗುರುವಾರ ಚಾಲನೆ ನೀಡಿದರು.

ಚಳ್ಳಕೆರೆ ತಾಲ್ಲೂಕಿನಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳ್ಳುವ ನೂತನ ವ್ಯವಸ್ಥೆ ಜಿಲ್ಲೆಯ ಉಳಿದ ಐದು ತಾಲ್ಲೂಕುಗಳಿಗೆ ಹಂತ ಹಂತವಾಗಿ ವಿಸ್ತರಣೆಯಾಗಲಿದೆ. ಶಿವಮೊಗ್ಗದ ಖಾಸಗಿ ಸಂಸ್ಥೆ ಅಭಿವೃದ್ಧಿಪಡಿಸಿದ ಮೊಬೈಲ್‌ ಆ್ಯಪ್‌ ಶೀಘ್ರವೇ ಸಾರ್ವಜನಿಕರಿಗೆ ಲಭ್ಯವಾಗಲಿದೆ.

ಮೋಟಾರು ವಾಹನ ಕಾಯ್ದೆಯ 84 ‘ಜಿ’ ಪ್ರಕಾರ ಆಟೊ ಚಾಲಕ ಹಾಗೂ ಮಾಲೀಕರ ವಿವರವನ್ನು ಪ್ರಯಾಣಿಕರಿಗೆ ತೋರಿಸುವುದು ಕಡ್ಡಾಯ. ಇದೇ ಉದ್ದೇಶದಿಂದ ಆಟೊ ಡಿಸ್‌ಪ್ಲೆ ಕಾರ್ಡ್‌ಗಳನ್ನು ನೀಡಲಾಗಿದೆ. ಚಾಲಕರ ಸೀಟಿನ ಹಿಂಭಾಗದಲ್ಲಿ ಇದನ್ನು ಪ್ರದರ್ಶಿಸಬೇಕು. ಚಾಲಕ, ಮಾಲೀಕರ ಹೆಸರು, ವಿಳಾಸ, ಮೊಬೈಲ್‌ ಸಂಖ್ಯೆ, ಚಾಲನಾ ಪರವಾನಗಿ ಸಂಖ್ಯೆ ಇದರಲ್ಲಿ ಇರುತ್ತವೆ. ಇದರೊಂದಿಗೆ ಪ್ರತಿ ಆಟೊಗೆ ವಿಶೇಷ ಗುರುತಿನ ಸಂಖ್ಯೆ ನೀಡಲಾಗುತ್ತದೆ. ಠಾಣೆಯಿಂದ ನೀಡುವ ‘ರಿಫ್ಲೆಕ್ಟರ್‌ ಸ್ಟಿಕರ್‌’ನ್ನು ಆಟೊ ಹೊರಗೆ ಅಂಟಿಸಬೇಕು.

‘ಅಪರಾಧಗಳನ್ನು ತಡೆಯುವ ಹಾಗೂ ಪತ್ತೆಹಚ್ಚುವ ಉದ್ದೇಶದಿಂದ ಈ ವ್ಯವಸ್ಥೆ ರೂಪಿಸಲಾಗಿದೆ. ಜಿಲ್ಲೆಯಲ್ಲಿರುವ ಆಟೊಗಳ ದತ್ತಾಂಶ ಸಂಗ್ರಹಿಸಲಾಗುತ್ತದೆ. ಪ್ರತಿ ತಾಲ್ಲೂಕಿನ ‘ರಿಫ್ಲೆಕ್ಟರ್‌ ಸ್ಟಿಕರ್‌’ಗೆ ಪ್ರತ್ಯೇಕ ಬಣ್ಣ ನೀಡಲಾಗುತ್ತದೆ. ಡಿಸ್‌ಪ್ಲೇ ಕಾರ್ಡ್‌ನಲ್ಲಿ ಕ್ಯೂಆರ್‌ ಕೋಡ್‌ ಕಾಣಲಿದೆ. ಇದನ್ನು ಪ್ರಯಾಣಿಕರು ಸ್ಕ್ಯಾನ್‌ ಮಾಡಿದರೆ ಸಂಪೂರ್ಣ ವಿವರ ಲಭ್ಯವಾಗಲಿದೆ’ ಎಂದು ರಾಧಿಕಾ ಮಾಹಿತಿ ನೀಡಿದರು.

‘ಆಟೊ, ಚಾಲಕರು ಹಾಗೂ ಮಾಲೀಕರ ಸಂಪೂರ್ಣ ವಿವರ ಒಂದೆಡೆ ಲಭ್ಯವಾಗುತ್ತದೆ. ಡಿಎಲ್‌, ಪರವಾನಗಿ, ವಿಮೆ ಗಡುವು ಬಗ್ಗೆ ಸಂಬಂಧಿಸಿದವರಿಗೆ ಎಚ್ಚರಿಕೆ ಸಂದೇಶ ರವಾನೆಯಾಗುತ್ತದೆ. ಮುಂಬರುವ ದಿನಗಳಲ್ಲಿ ಆನ್‌ಲೈನ್‌ ಬುಕ್ಕಿಂಗ್‌ ವ್ಯವಸ್ಥೆ ಜಾರಿಗೆ ಬಂದರೆ ಚಾಲಕರಿಗೆ ಅನುಕೂಲವಾಗುತ್ತದೆ. ರಾತ್ರಿ ವೇಳೆ ಸೇವೆ ಒದಗಿಸುವ ಚಾಲಕರು ಕ್ಷಣಾರ್ಧದಲ್ಲಿ ಅನುಮತಿ ಪಡೆದುಕೊಳ್ಳಬಹುದು’ ಎಂದು ವಿವರಿಸಿದರು.

‘ಮುಂದಿನ ಎರಡು ವಾರದಲ್ಲಿ ಆಟೊ ಸ್ನೇಹಿ ಮೊಬೈಲ್‌ ಆ್ಯಪ್‌ ಲಭ್ಯವಾಗಲಿದೆ. ಆಟೊ ಯಾವ ಪ್ರದೇಶದಲ್ಲಿದೆ ಎಂಬ ಲೈವ್‌ ಲೊಕೇಷನ್‌ ಪೊಲೀಸರಿಗೆ ಸುಲಭವಾಗಿ ಲಭ್ಯವಾಗಲಿದೆ. ಅಪರಾಧ ಚಟುವಟಿಕೆಯ ನಿಯಂತ್ರಣ ಹಾಗೂ ಪ್ರಕರಣಗಳ ತನಿಖೆಗೆ ಇದು ನೆರವಾಗಲಿದೆ. ಪ್ರಯಾಣಿಕರು ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಪ್ರಯಾಣಿಸಿದರೆ ಅನುಕೂಲ. ಸಂಕಷ್ಟದ ಸಂದರ್ಭದಲ್ಲಿ ಪೊಲೀಸರನ್ನು ಸುಲಭವಾಗಿ ಸಂಪರ್ಕಿಸಬಹುದು’ ಎಂದು ಹೇಳಿದರು.

‘ಅಪರಾಧ ನಿಯಂತ್ರಣ ಸುಲಭ’

ಅಪರಾಧ ಚಟುವಟಿಕೆಯ ಮಾಹಿತಿ ಆಟೊ ಚಾಲಕರಿಗೆ ಸುಲಭವಾಗಿ ಸಿಗುತ್ತದೆ. ಇದನ್ನು ಪೊಲೀಸರೊಂದಿಗೆ ಹಂಚಿಕೊಂಡರೆ ಅಪರಾಧ ಚಟುವಟಿಕೆಯನ್ನು ಸುಲಭವಾಗಿ ನಿಯಂತ್ರಿಸಲು ಸಾಧ್ಯ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ) ಜಿ.ಎಸ್‌.ಹೆಗಡೆ ಹೇಳಿದರು.

‘ಆಟೊ ಚಾಲಕರಲ್ಲಿ ಅನೇಕರು ಚಾಲನಾ ಪರವಾನಗಿ ಹೊಂದಿರುವುದಿಲ್ಲ. ವಿಮೆ ಕೂಡ ಸಕಾಲಕ್ಕೆ ಪಾವತಿಸುವುದಿಲ್ಲ. ಅಪಘಾತ ಸಂಭವಿಸಿದಾಗ ಚಾಲಕರು ಸಂಕಷ್ಟಕ್ಕೆ ಸಿಲುಕುತ್ತಾರೆ. ಇದನ್ನು ತಪ್ಪಿಸಲು ಸಕಾಲಕ್ಕೆ ಪ್ರಮಾಣಪತ್ರಗಳನ್ನು ಪಡೆಯಿರಿ. ಮಧ್ಯವರ್ತಿಗಳ ಆಮಿಷಕ್ಕೆ ಬಲಿಯಾಗದೇ ನೇರವಾಗಿ ಆರ್‌ಟಿಒ ಕಚೇರಿ ಸಂಪರ್ಕಿಸಿ’ ಎಂದು ಸಲಹೆ ನೀಡಿದರು.

‘ಕನಿಷ್ಠ ದರ ₹ 30 ನಿಗದಿಪಡಿಸಿ’

ಏರುತ್ತಿರುವ ಇಂಧನ ದರ ಹಾಗೂ ನಿರ್ವಹಣಾ ವೆಚ್ಚದಿಂದ ಆಟೊ ಪ್ರಯಾಣದ ಕನಿಷ್ಠ ದರವನ್ನು ₹ 30ಕ್ಕೆ ಏರಿಕೆ ಮಾಡಬೇಕು ಎಂದು ಚಳ್ಳಕೆರೆ ಆಟೊ ಚಾಲಕರ ಸಂಘದ ಅಧ್ಯಕ್ಷ ನಾಗರಾಜ ಮನವಿ ಮಾಡಿದರು.

‘ಲಾಕ್‌ಡೌನ್‌ ಘೋಷಣೆಯಾದ ಬಳಿಕ ಆಟೊ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೊರೊನಾ ಸೋಂಕಿನ ಆತಂಕದಲ್ಲಿ ಆಟೊ ಬಳಕೆ ಕಡಿಮೆಯಾಗಿದೆ. ದುಡಿಮೆ ಇಲ್ಲದೇ ಚಾಲಕರಿಗೆ ಸಂಕಷ್ಟ ಎದುರಾಗಿದೆ. ಸಂಚಾರ ನಿಯಮ ಉಲ್ಲಂಘನೆಯ ಸಂದರ್ಭದಲ್ಲಿ ಪೊಲೀಸರು ವಿಧಿಸುವ ದಂಡ ಪಾವತಿಸಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ’ ಎಂದು ಅಳಲು ತೋಡಿಕೊಂಡರು.

‘2005ಕ್ಕೂ ಮೊದಲು ಖರೀದಿಸಿದ ಆಟೊಗಳ ದಾಖಲಾತಿ ಸರಿಪಡಿಸಿಕೊಳ್ಳಲು ಇನ್ನಷ್ಟು ಕಾಲಾವಕಾಶ ನೀಡಿದರೆ ಅನುಕೂಲ. ಹೊರ ಜಿಲ್ಲೆ, ತಾಲ್ಲೂಕಿನ ಆಟೊಗಳಿಗೆ ಕಡಿವಾಣ ಹಾಕಿ. ಪ್ರಯಾಣಿಕರ ಸುರಕ್ಷತೆಗೆ ಒತ್ತು ನೀಡುತ್ತೇವೆ’ ಎಂದು ಕೇಳಿಕೊಂಡರು.

ಚಳ್ಳಕೆರೆ ಉಪವಿಭಾಗದ ಡಿವೈಎಸ್‌ಪಿ ಕೆ.ವಿ.ಶ್ರೀಧರ್, ಜಿಲ್ಲಾ ಮೀಸಲು ಪೊಲೀಸ್‌ ಪಡೆಯ ಡಿವೈಎಸ್‌ಪಿ ತಿಪ್ಪೇಸ್ವಾಮಿ, ಆಟೊ ಸ್ನೇಹಿ ವ್ಯವಸ್ಥೆಗೆ ತಾಂತ್ರಿಕ ನೆರವು ನೀಡಿದ ವಿನಯ್ ಇದ್ದರು.

***

ಆಟೊ ದಾಖಲೆಗಳು ಸಂಪೂರ್ಣ ಡಿಜಿಟಲೀಕರಣಗೊಳ್ಳಲಿವೆ. ಆಟೊಗೆ ಸಂಬಂಧಿಸಿದ ಮಾಹಿತಿ ಸುಲಭವಾಗಿ ಸಿಗಲಿದೆ. ಮಹಿಳೆಯರಲ್ಲಿ ಸುರಕ್ಷತೆಯ ಭಾವ ಮೂಡಲಿದೆ.
–ಮಂಜುನಾಥ್‌ ಲಿಂಗಾರೆಡ್ಡಿ, ಪಿಎಸ್‌ಐ, ಚಳ್ಳಕೆರೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.