ಸೋಮವಾರ, ಮೇ 23, 2022
20 °C
ಕೋವಿಡ್‌ ಲಸಿಕೆ: ಕೊನೆಯ ಸ್ಥಾನದಲ್ಲಿದ್ದ ಮೊಳಕಾಲ್ಮುರಿನಲ್ಲಿ 15 ದಿನಗಳಿಂದ ಚುರುಕು

ಚಿತ್ರದುರ್ಗ: ಹಳ್ಳಿ ಹಳ್ಳಿಯಲ್ಲಿ ಜಾಗೃತಿ; ಪ್ರಗತಿಯತ್ತ ಅಭಿಯಾನ

ಕೊಂಡ್ಲಹಳ್ಳಿ ಜಯಪ್ರಕಾಶ Updated:

ಅಕ್ಷರ ಗಾತ್ರ : | |

Prajavani

ಮೊಳಕಾಲ್ಮುರು: ತಾಲ್ಲೂಕಿನಲ್ಲಿ ಹಳ್ಳಿ ಹಳ್ಳಿಗಳಲ್ಲಿ, ಹೊಲಗಳಿಗೆ ಹೋಗಿ ಆರೋಗ್ಯ ಇಲಾಖೆ ಸಿಬ್ಬಂದಿ ಕೋವಿಡ್ ಲಸಿಕೆ ನೀಡುತ್ತಿದ್ದಾರೆ. ಲಸಿಕೆ ಸಾಧನೆಯಲ್ಲಿ ಕೊನೆ ಸ್ಥಾನದಲ್ಲಿದ್ದ ತಾಲ್ಲೂಕಿನಲ್ಲಿ ಇದರಿಂದ ಪ್ರಗತಿ ಕಾಣುತ್ತಿದೆ.

ಕೋವಿಡ್ ಅನ್ನು ನಿಯಂತ್ರಿಸಲು ಲಸಿಕೆ ಪರಿಣಾಮಕಾರಿ ಎಂದು ಸರ್ಕಾರ ಲಸಿಕೆ ಹಾಕಲು ಒತ್ತು ನೀಡಿದೆ. ಆದರೆ, ಮೂಢನಂಬಿಕೆ ಮತ್ತು ಜಾಗೃತಿ ಕೊರತೆಯಿಂದಾಗಿ ಪ್ರಗತಿಯಲ್ಲಿ ಮೊಳಕಾಲ್ಮುರು ತಾಲ್ಲೂಕು ಜಿಲ್ಲೆಯಲ್ಲಿ ಕೊನೆಯ ಸ್ಥಾನದಲ್ಲಿತ್ತು. 15 ದಿನಗಳಿಂದ ಆಶಾದಾಯಕ ಪ್ರಗತಿ ಕಾಣುತ್ತಿರುವುದು ಹುರುಪು ತಂದಿದೆ. ಜನರು ಲಸಿಕೆ ಹಾಕಿಸಲು ಮಂದೆ ಬರುತ್ತಿರುವ ಕಾರಣ ಆರೋಗ್ಯ ಇಲಾಖೆ ಸಿಬ್ಬಂದಿಯಲ್ಲಿ ಮಂದಹಾಸ ಮೂಡಿದೆ.

‘ಲಸಿಕೆ ಆರಂಭಿಕ ದಿನಗಳಲ್ಲಿ ಲಸಿಕೆ ಹಾಕಿಸಿಕೊಳ್ಳಿ ಎಂದರೆ ಸಾಕು ಜನರು ಜಗಳಕ್ಕೆ ಬರುತ್ತಿದ್ದರು. ಅನೇಕ ಕಡೆ ನಾವು ಹೋಗುವ ಹೊತ್ತಿಗೆ ಮನೆಗಳಿಗೆ ಬೀಗ ಹಾಕಿಕೊಂಡು ಹೋಗಿರುತ್ತಿದ್ದರು. ಇನ್ನು ಕೆಲವರು ನಮಗೆ ಏನಾದರೂ ಆದರೆ ಯಾರು ಗತಿ. ಮೊದಲು ₹ 25 ಲಕ್ಷದಿಂದ ₹ 50 ಲಕ್ಷ ಪರಿಹಾರ ಕೊಟ್ಟು ಹಾಕಿ ಎಂದು ಸಿಬ್ಬಂದಿ ಜತೆ ಜಗಳ ಕಾಯುತ್ತಿದ್ದರು. ಈ ವಿಡಿಯೊಗಳು ಸಾಕಷ್ಟು ವೈರಲ್ ಆಗಿದ್ದವು.

ತಾಲ್ಲೂಕಿನಲ್ಲಿ ಬುಡಕಟ್ಟು ಜನರು ಹೆಚ್ಚು ಇದ್ದಾರೆ. ವಿದ್ಯಾಭ್ಯಾಸದ ಕೊರತೆಯೂ ಇದೆ. ಜನರು ಹಟ್ಟಿ ಯಜಮಾನರು, ಮುಖಂಡರು ಹೇಳಿದಂತೆ ಕೇಳುತ್ತಿದ್ದರು. ಮುಖಂಡರು ಒಪ್ಪಿಗೆ ನೀಡದ ಹೊರತು ಜನರು ಹಾಕಿಸಿಕೊಳ್ಳುವುದಿಲ್ಲ ಎಂದು ಮುಖಂಡರ ಮನವೊಲಿಸುವ ಕೆಲಸ ಮಾಡುತ್ತಿದ್ದೇವೆ. ಇದು ಫಲ ನೀಡಿದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಸುಧಾ ಹೇಳಿದರು.

‘ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರ ಸಹಕಾರ ಪಡೆಯಲಾಗುತ್ತಿದೆ. ಲಸಿಕೆ ಪಡೆದಿರುವ ಸದಸ್ಯರು ಧೈರ್ಯ ಹೇಳುತ್ತಿರುವ ಕಾರಣ ಲಸಿಕೆ ಹಾಕಿಸಿಕೊಳ್ಳಲು ಜನರು ಒಪ್ಪಿಗೆ ನೀಡುತ್ತಿದ್ದಾರೆ. ತಾಲ್ಲೂಕಿನಲ್ಲಿ ರಾಮಸಾಗರ, ಜೀರಹಳ್ಳಿ, ಹುಚ್ಚಂಗಿದುರ್ಗ, ಚಿಕ್ಕೇರಹಳ್ಳಿ, ರೊಪ್ಪ, ಹನುಮಾಪುರ, ಮಾಚೇನಹಳ್ಳಿ ಸೇರಿ 18 ಗ್ರಾಮಗಳನ್ನು ಲಸಿಕೆ ನಿರ್ಲಕ್ಷಿಸುತ್ತಿರುವ ಗ್ರಾಮಗಳು ಎಂದು ಗುರುತಿಸಲಾಗಿತ್ತು. ಈಗ ಗ್ರಾಮಗಳಲ್ಲಿ ಹೆಚ್ಚು ಒತ್ತು ನೀಡಿದ್ದು, ಜನರು ಸ್ಪಂದಿಸುತ್ತಿದ್ದಾರೆ’ ಎಂದು ಅವರು ಹೇಳಿದರು.

‘ಬುಧವಾರ ಹಮ್ಮಿಕೊಳ್ಳುವ ವಿಶೇಷ ಲಸಿಕೆ ದಿನವನ್ನು ಉತ್ತಮ ಸಾಧನೆಯಾಗಿರುವ ಸ್ಥಳಗಳಲ್ಲಿ ಮುಂದುವರಿಸಲಾಗುತ್ತಿದೆ. ಜನರು ಹೊಲ, ಕಣ, ಕಾಮಗಾರಿ ಸ್ಥಳ ಎಲ್ಲಿಯೇ ಇದ್ದರೂ ಅಲ್ಲಿಗೆ ಹೋಗಿ ಲಸಿಕೆ ಹಾಕುತ್ತಿದ್ದೇವೆ. ತಾಲ್ಲೂಕಿನಲ್ಲಿ ಶುಕ್ರವಾರ ಪ್ರಥಮ ಶೇ 41 ಮಂದಿಗೆ ಮೊದಲ ಡೋಸ್‌, ಶೇ 51ರಷ್ಟು ಜನರಿಗೆ ದ್ವಿತೀಯ ಡೋಸ್ ನೀಡಲಾಗಿದೆ’ ಎಂದು ಮಾಹಿತಿ ನೀಡಿದರು.

ಬೇರುಮಟ್ಟದಲ್ಲಿ ಜನರು ಇನ್ನಷ್ಟು ಸ್ಪಂದಿಸಲು ಸ್ಥಳೀಯ ಯುವಸಮೂಹ, ಸಂಘ, ಸಂಸ್ಥೆ ಪದಾಧಿಕಾರಿಗಳು, ಅಧಿಕಾರಿಗಳು ಸಹಕಾರ ನೀಡಿದಲ್ಲಿ ಅಭಿಯಾನ ಇನ್ನಷ್ಟು ಯಶಸ್ವಿಯಾಗಲಿದೆ ಎಂಬುದು ಆರೋಗ್ಯ ಸಿಬ್ಬಂದಿ ಮನವಿ.

*

ಚಿಕ್ಕೇರಹಳ್ಳಿ ಗೊಲ್ಲರಹಟ್ಟಿಯಲ್ಲಿ ಈವರೆಗೆ ಒಂದೂ ಲಸಿಕೆ ಹಾಕಿರಲಿಲ್ಲ. ಶನಿವಾರ ಪ್ರಥಮವಾಗಿ ಲಸಿಕೆ ನೀಡಲಾಗಿದೆ. ಮುಖಂಡರು ಹೇಳಿದರೆ ಮಾತ್ರ ಜನರು ಲಸಿಕೆ ಹಾಕಿಸುತ್ತಿರುವುದು ಕಂಡುಬರುತ್ತಿದೆ.
-ಡಾ. ಸುಧಾ, ತಾಲ್ಲೂಕು ಆರೋಗ್ಯಾಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.