ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ ರಚಿಸುವ ಆಸಕ್ತಿ ಕುಗ್ಗಿದೆ

ವಿಮರ್ಶಕ ಅಗ್ರಹಾರ ಕೃಷ್ಣಮೂರ್ತಿ ಕಳವಳ
Last Updated 5 ಜೂನ್ 2019, 20:17 IST
ಅಕ್ಷರ ಗಾತ್ರ

ಚಿತ್ರದುರ್ಗ: ರಾಜಕೀಯ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ನಡೆಯುತ್ತಿರುವ ಅನಾಹುತಗಳು ಸಾಹಿತ್ಯ ರಚಿಸುವ ಆಸಕ್ತಿಯನ್ನು ಕುಗ್ಗಿಸುತ್ತಿವೆ ಎಂದು ವಿಮರ್ಶಕ ಅಗ್ರಹಾರ ಕೃಷ್ಣಮೂರ್ತಿ ಕಳವಳ ವ್ಯಕ್ತಪಡಿಸಿದರು.

ಇಲ್ಲಿನ ಮುರುಘಾ ಮಠದಲ್ಲಿ ಬುಧವಾರ ಏರ್ಪಡಿಸಿದ್ದ ಶರಣ ಸಂಗಮ ಹಾಗೂ ಸಾಹಿತಿ ಕುಂ.ವೀರಭದ್ರಪ್ಪ ಅವರ ‘ಜೈ ಬಜರಂಗಬಲಿ’ ಕಾದಂಬರಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ದೇಶದಲ್ಲಿ ನಡೆಯುತ್ತಿರುವ ಘಟನಾವಳಿಗಳು ಮಾಧ್ಯಮದ ಮೂಲಕ ನಿತ್ಯ ತಲುಪುತ್ತಿವೆ. ಕ್ರೌರ್ಯ, ಹಿಂಸೆ ವಿಜೃಂಭಿಸುತ್ತಿದೆ. ಇಂತಹ ಸಂದರ್ಭದಲ್ಲಿ ಲೇಖಕನಿಗೆ ಬಹುದೊಡ್ಡ ಹೊಣೆಗಾರಿಕೆ ಇರುತ್ತದೆ. ಆದರೆ, ಸಾಹಿತ್ಯ ರಚನೆ ಮಾಡದಂತಹ ಸ್ಥಿತಿಯಲ್ಲಿ ಬದುಕುತ್ತಿದ್ದೇವೆ’ ಎಂದು ಆತಂಕ ಹೊರಹಾಕಿದರು.

‘ದೇಶ ಹಾಗೂ ಕಾಲದ ಸ್ಥಿತಿಯನ್ನು ತಿಳಿಸಲು ಕುಂ.ವೀರಭದ್ರಪ್ಪ ಕಾದಂಬರಿ ರಚಿಸಿದ್ದಾರೆ. ಧರ್ಮದ ಕಪಿಮುಷ್ಟಿಯಲ್ಲಿ ಸಿಲುಕಿದ ರಾಜಕಾರಣವೇ ಕಾದಂಬರಿಯ ಕಥಾವಸ್ತು. ರೂಪಕಗಳನ್ನು ಬಳಸಿಕೊಂಡು ಪ್ರಸಕ್ತ ವಿದ್ಯಮಾನವನ್ನು ಅರ್ಥಪೂರ್ಣವಾಗಿ ಕಟ್ಟಿಕೊಟ್ಟಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಅಯೋಧ್ಯೆ, ಅಧಿಕಾರ ವಿಭಜಿತ ರಾಜಕಾರಣ, ಆರ್‌ಎಸ್‌ಎಸ್‌ ಸೇರಿ ಎಲ್ಲವೂ ಕಾದಂಬರಿಯಲ್ಲಿದೆ. ಮಾಧ್ಯಮದ ವರ್ತನೆ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ರಾಜಕೀಯ ಕುಚೋದ್ಯ, ವೋಟ್‌ ಬ್ಯಾಂಕ್‌ ರಾಜಕಾರಣವನ್ನು ರಸವತ್ತಾಗಿ ಕಟ್ಟಿಕೊಡಲಾಗಿದೆ. ಮನುಷ್ಯ ಲೋಕದ ವ್ಯವಹಾರವನ್ನು ಭಿನ್ನವಾಗಿ ಪ್ರಕಟಿಸುವ ಕಥನ ಕ್ರಮ ಇಷ್ಟವಾಗುತ್ತದೆ’ ಎಂದು ಹೇಳಿದರು.

‘ಧರ್ಮ ಕೇಂದ್ರಿತ ರಾಜಕಾರಣ ನಾಗರಿಕತೆಯನ್ನು ಅಧಃಪತನಕ್ಕೆ ಇಳಿಸುತ್ತಿದೆ. ಇದನ್ನು ವಿಡಂಬನೆಯ ಮೂಲಕ ಲೇಖಕರು ಚಿತ್ರಿಸಿದ್ದಾರೆ. ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯ ಸ್ತರಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ಕಾದಂಬರಿ ರಚಿಸಿದ್ದಾರೆ. ಇಂತಹ ಮತ್ತೊಬ್ಬ ಕಾದಂಬರಿಕಾರ ಸಿಗುವುದು ಅಪರೂಪ’ ಎಂದು ಹೊಗಳಿದರು.

‘ಕುವೆಂಪು, ಶಿವರಾಮ ಕಾರಂತ, ಎಸ್‌.ಎಲ್‌.ಭೈರಪ್ಪ ಸೇರಿ ಹಲವು ಕಾದಂಬರಿಕಾರರು ಕನ್ನಡದಲ್ಲಿ ಇದ್ದಾರೆ. ಕಾರಂತರ ಶೈಲಿಯಲ್ಲಿ ಕಾದಂಬರಿ ರಚಿಸಲು ಸಾಧ್ಯವಿದೆ. ಆದರೆ, ಕುವೆಂಪು ಮಾದರಿಯಲ್ಲಿ ಬರೆಯಲು ಯಾರಿಂದಲೂ ಸಾಧ್ಯವಿಲ್ಲ. ದೇವನೂರ ಮಹಾದೇವ ಅವರಂತೆ ಸಾಹಿತ್ಯ ರಚಿಸುವ ಶಕ್ತಿ ಮತ್ತೊಬ್ಬರಲ್ಲಿ ಇಲ್ಲ. ಇವರ ಸಾಲಿಗೆ ಕುಂ.ವೀರಭದ್ರಪ್ಪ ಕೂಡ ಸೇರುತ್ತಾರೆ’ ಎಂದರು.

ಕೃತಿಕಾರ ಕುಂ.ವೀರಭದ್ರಪ್ಪ ಮಾತನಾಡಿ, ‘ಕಾದಂಬರಿ ಪ್ರಕಾರ ನನಗೆ ದಕ್ಕುವುದಿಲ್ಲವೆಂದು ಅನೇಕರು ಜರಿದಿದ್ದರು. ಇದನ್ನು ಸವಾಲಾಗಿ ಸ್ವೀಕರಿಸಿ ಕಾದಂಬರಿ ರಚನೆಯಲ್ಲಿ ತೊಡಗಿದೆ. ರಸ್ತೆ, ನೀರು, ವಿದ್ಯುತ್‌ ಇಲ್ಲದ ಕುಗ್ರಾಮವೊಂದ ದೀಪದ ಕೆಳಗೆ ಕುಳಿತು ‘ಕಪ್ಪು’ ಕಾದಂಬರಿಯನ್ನು 8 ದಿನಗಳಲ್ಲಿ ಬರೆದಿದ್ದೇನೆ’ ಎಂದು ಅನುಭವ ಹಂಚಿಕೊಂಡರು.

‘1997ರಲ್ಲಿ ನನ್ನ ಇಬ್ಬರು ಮಕ್ಕಳ ಶಾಲಾ ಪ್ರವೇಶಕ್ಕೆ ಹಣ ಇಲ್ಲದೇ ಪರದಾಡುತ್ತಿದ್ದೆ. ಪ್ರಕಾಶಕರೊಬ್ಬರ ಬಳಿ ಹೋಗಿ ಕಾದಂಬರಿ ಬರೆದುಕೊಡುವ ಒಪ್ಪಂದ ಮಾಡಿಕೊಂಡು ₹ 10 ಸಾವಿರ ಮುಂಗಡ ಹಣ ಪಡೆದೆ. ಪಟ್ಟು ಬಿಡದೇ ಕುಳಿತು 600 ಪುಟಗಳ ‘ಶಾಮಣ್ಣ’ ಕಾದಂಬರಿ ಬರೆದೆ. ಮೂರು ತಿಂಗಳ ಕಾಲ ನಿರಂತರ ಬರವಣಿಗೆ ಮಾಡಿದ್ದರಿಂದ ದೇಹದ ತೂಕ 12 ಕೆ.ಜಿ. ಕಡಿಮೆಯಾಗಿತ್ತು. ಅರಮನೆ ಕಾದಂಬರಿ ರಚಿಸಲು 15 ವರ್ಷ ತೆಗೆಕೊಂಡಿದ್ದೆ’ ಎಂದರು.

ಶಿವಮೂರ್ತಿ ಮುರುಘಾ ಶರಣರು, ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಡಾ.ಎಂ.ಜಿ.ವೇದಮೂರ್ತಿ, ಬಾಪೂಜಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕೆ.ಎಂ.ವೀರೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT