ಬರಗೇರಮ್ಮ ದೇವಿ ಜಾತ್ರೆಗೆ ಸಕಲ ಸಿದ್ಧತೆ

ಶುಕ್ರವಾರ, ಏಪ್ರಿಲ್ 19, 2019
31 °C
12ರಂದು ಕಂಕಣಧಾರಣೆ, ಮಧುವಣಗಿತ್ತಿ ಪೂಜೆ: ಏಪ್ರಿಲ್ 20ರಂದು ಸಿಡಿ ಮಹೋತ್ಸವ

ಬರಗೇರಮ್ಮ ದೇವಿ ಜಾತ್ರೆಗೆ ಸಕಲ ಸಿದ್ಧತೆ

Published:
Updated:
Prajavani

ಚಿತ್ರದುರ್ಗ: ಬರಗೇರಮ್ಮ ದೇವತೆಯ 2019 ನೇ ಸಾಲಿನ ಜಾತ್ರಾ ಮಹೋತ್ಸವದ ಅಂಗವಾಗಿ ಹೊಳಲ್ಕೆರೆ ರಸ್ತೆಯ ಮೂಲದೇಗುಲ ಹಾಗೂ ಬುರುಜನಹಟ್ಟಿಯ ಪಾದದ ಗುಡಿಯಲ್ಲಿ ಸಕಲ ಸಿದ್ಧತೆ ಭರದಿಂದ ಸಾಗಿದೆ.

ಇಲ್ಲಿನ ನವದುರ್ಗೆಯರಲ್ಲಿ ಪ್ರಮುಖ ಶಕ್ತಿದೇವತೆ ಆಗಿರುವ ಬರಗೇರಮ್ಮ ದೇವತೆಯ ಜಾತ್ರಾ ಮಹೋತ್ಸವವೂ ಏಪ್ರಿಲ್ 26ರವರೆಗೂ ನಡೆಯಲಿದೆ. 

12ರಂದು ರಾತ್ರಿ 8ಕ್ಕೆ ದೇವತೆಗೆ ಕಂಕಣಧಾರಣೆ ಹಾಗೂ ಮಧುವಣಗಿತ್ತಿ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 16ರಂದು ರಾತ್ರಿ 8ಕ್ಕೆ ದೇವತೆಯ ಉತ್ಸವ ಮೂರ್ತಿಯನ್ನು ಬುರುಜನಹಟ್ಟಿಯ ದೇಗುಲದಿಂದ ಊರ ಹೊರಗಿನ ದೇಗುಲಕ್ಕೆ ಕರೆತರಲಾಗುವುದು. ನಂತರ ಕರಿಯಟ್ಟಿಯಲ್ಲಿನ ಭಕ್ತರಿಂದ ಪೂಜೆ ಸ್ವೀಕಾರ ನಡೆಯಲಿದೆ.

17ರಂದು ಬೆಳಿಗ್ಗೆ 9ಕ್ಕೆ ಚಂದ್ರವಳ್ಳಿಯಲ್ಲಿ ದೇವತೆಯ ಗಂಗಾಪೂಜೆ, ಕುಂಭಾಭಿಷೇಕ ನಂತರ ದೇಗುಲಕ್ಕೆ ಕರೆತರಲಾಗುವುದು. ಅನ್ನಸಂತರ್ಪಣೆ ನಂತರ ರಾತ್ರಿ ಈರಜ್ಜನಹಟ್ಟಿ ಹಾಗೂ ನಾಯಕರ ಸೊಲ್ಲಾಪುರದಲ್ಲಿ ಭಕ್ತರಿಂದ ಪೂಜೆ ನಡೆಯಲಿದೆ.

18ರಂದು ದೇವತೆಯು ನಾಯಕರ ಸೊಲ್ಲಾಪುರದಿಂದ ಹೊರಟು ಕೆಳಗಿನ ಸೊಲ್ಲಾಪುರ, ಗೊಲ್ಲರಹಟ್ಟಿ, ಟಗರನಹಟ್ಟಿ, ದೇವರಹಟ್ಟಿ, ಜಾಲಿಕಟ್ಟೆ ಮತ್ತು ಮಾಳಪ್ಪನಹಟ್ಟಿ ಭಕ್ತರ ಮನೆಗಳಲ್ಲಿ ಪೂಜೆ ನಡೆಯಲಿದೆ.

ಅಂದು ಬೆಳಿಗ್ಗೆ 9ಕ್ಕೆ ಪಿಳ್ಳೇಕೆರನಹಳ್ಳಿ, ಮೆದೇಹಳ್ಳಿ ರಸ್ತೆ, ಬಿವಿಕೆಎಸ್‌ ಲೇ ಔಟ್‌, ಚೇಳುಗುಡ್ಡ, ನೆಹರೂ ನಗರ, ಪಿ ಅಂಡ್‌ ಟಿ ಕ್ವಾಟ್ರರ್ಸ್‌, ಜ್ಞಾನಭಾರತಿ ಶಾಲಾ ಹಿಂಭಾಗದ ಭಕ್ತರ ಮನೆಗಳಲ್ಲಿ ಪೂಜೆ ಸ್ವೀಕಾರ.

19ರಂದು ದೇವತೆಯನ್ನು ವಿಶೇಷವಾಗಿ ಅಲಂಕರಿಸಿದ ನಂತರ ಬೆಳಿಗ್ಗೆ 9.30ರಿಂದ ಸಂಜೆವರೆಗೂ ಸಕಲ ವಾದ್ಯಗಳೊಡನೆ ನಗರದ ರಾಜ ಬೀದಿಗಳಲ್ಲಿ ‘ರಥೋತ್ಸವ’ ಭಕ್ತರಿಂದ ಮೀಸಲು ಅರ್ಪಣೆ, ಹರಕೆ ಸಲ್ಲಿಕೆ.

ಅಂದು ಬೆಳಿಗ್ಗೆ 8ರಿಂದ ರೈಲ್ವೆ ಸ್ಟೇಷನ್‌ ಬಡಾವಣೆಗಳ ಭಕ್ತರ ಮನೆಯಲ್ಲಿ ಪೂಜೆ ಸ್ವೀಕಾರ. ಸಂಜೆ 5.30ರಿಂದ ಬಾರ್‌ಲೈನ್‌, ತಿಪ್ಪಜ್ಜಿ ಸರ್ಕಲ್‌, ಮುನ್ಸಿಪಲ್‌ ಕಾಲೊನಿ, ಚರ್ಚ್‌ ಬಡಾವಣೆ, ಕೆಳಗೋಟೆ ಪ್ರದೇಶದ ಭಕ್ತರ ಮನೆಯಲ್ಲಿ ಪೂಜೆ ಸ್ವೀಕರಿಸಿದ ನಂತರ ದೇಗುಲಕ್ಕೆ ಮರಳುವುದು.

20ರಂದು ಬೆಳಿಗ್ಗೆ 8ಕ್ಕೆ ದೇಗುಲದಿಂದ ಹೊರಟು ದರ್ಜಿ ಕಾಲೊನಿ, ಗೋಪಾಲಪುರ, ಜೆಸಿಆರ್‌ ಹಾಗೂ ವಿ.ಪಿ. ಬಡಾವಣೆಗಳ ಭಕ್ತರ ಮನೆಗಳಲ್ಲಿ ಪೂಜೆ ಸ್ವೀಕಾರ. ಸಂಜೆ 6.30ಕ್ಕೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ದೇವತೆಯ ‘ಸಿಡಿ ಮಹೋತ್ಸವ’ ಜರುಗಲಿದೆ.

21ರಂದು ಅಗಸನಕಲ್ಲು, ರೈಲ್ವೆ ನಿಲ್ದಾಣ, ಗಾರೆಹಟ್ಟಿ, ಕವಾಡಿಗರಹಟ್ಟಿ, ಮಠದ ಕುರುಬರಹಟ್ಟಿ, ಕೋಡನಹಟ್ಟಿ, ಕರ್ಲಹಟ್ಟಿಯ ಭಕ್ತರ ಮನೆಗಳಲ್ಲಿ ಪೂಜೆ ಜರುಗಲಿದೆ.

22ರಂದು ದೇವತೆಗೆ ಬೆಳಿಗ್ಗೆ 8ಕ್ಕೆ ವಿಶೇಷ ‘ಭಂಡಾರದ ಪೂಜೆ’ ನಂತರ ರಾತ್ರಿ 8ಕ್ಕೆ ಓಕಳಿ ಸೇವೆಯ ಬಳಿಕ ಬುರುಜನಹಟ್ಟಿಗೆ ದೇವಿಯ ಮೂರ್ತಿ ಕರೆತರಲಾಗುವುದು.

24ರಂದು ಸುಣ್ಣಗಾರಹಟ್ಟಿ, ಕೋಳಿ ಬುರುಜನಹಟ್ಟಿ, ಕಾಮನಬಾವಿ ಬಡಾವಣೆ, ಜೋಗಿಮಟ್ಟಿ ರಸ್ತೆ ಸೇರಿ ಸುತ್ತಮುತ್ತ ಭಕ್ತರ ಮನೆಯಲ್ಲಿ ಪೂಜೆ ಸ್ವೀಕಾರ. ಸಿಹಿನೀರು ಹೊಂಡದಲ್ಲಿ ಗಂಗಾಪೂಜೆಯ ನಂತರ ಗುಡಿದುಂಬುವ ಕಾರ್ಯಕ್ರಮದ ಮೂಲಕ ದೇವತೆ ಸ್ವಸ್ಥಾನ ಸೇರಲಿದೆ.

26ರಂದು ಸಂಜೆ ಕಂಕಣ ವಿಸರ್ಜನೆ, ಜೋಗೂಟದೊಂದಿಗೆ ಜಾತ್ರೆ ಮುಕ್ತಾಯ ಆಗಲಿದೆ ಎಂದು ತಹಶೀಲ್ದಾರ್ ನಾಹೀದ ಜಂ. ಜಂ, ಕಂದಾಯಾಧಿಕಾರಿ ಎಚ್.ಕೆ. ಪ್ರಾಣೇಶ್, ದೇಗುಲದ ಪ್ರಧಾನ ಅರ್ಚಕ ಪೂಜಾರ್‌ ಸತ್ಯಪ್ಪ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !