ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಮತದಾರರ ಆಶೀರ್ವಾದ ಬೇಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ರಾಜ್ಯ ಮತ್ತು ಕೇಂದ್ರ ಸರ್ಕಾರದ ಫಲಾನುಭವಿಗಳ ಸಮಾವೇಶ, ವಿರೋಧ ಪಕ್ಷದ ವಿರುದ್ಧ ಕಿಡಿ
Last Updated 4 ಮಾರ್ಚ್ 2023, 14:12 IST
ಅಕ್ಷರ ಗಾತ್ರ

ಚಿತ್ರದುರ್ಗ: ಮೂರು ವರ್ಷಗಳಿಂದ ದಕ್ಷ ಮತ್ತು ಸಮರ್ಥ ಆಡಳಿತ ನೀಡಿದ ತೃಪ್ತಿ ಇದೆ. ಎಲ್ಲ ಸಮುದಾಯದ ಅಭಿವೃದ್ಧಿಗೆ ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದೇವೆ. ಇಂತಹ ಯೋಜನೆಗಳನ್ನು ಮುಂದುವರಿಸಲು ನಿಮ್ಮೆಲ್ಲರ (ಮತದಾರರ) ಆಶೀರ್ವಾದ ಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಲೆಬಾಗಿ ಕೈಮುಗಿದರು.

ನಗರದ ಮುರುಘಾರಾಜೇಂದ್ರ ಕ್ರೀಡಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಅವರು ಮಾತನಾಡಿದರು. ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ₹ 1,484 ಕೋಟಿಗೂ ಅಧಿಕ ವೆಚ್ಚದ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು.

‘ಆಡಳಿತ ಮಾಡಲು ಎಲ್ಲರಿಗೂ ಬರುತ್ತದೆ. ಅಧಿಕಾರಿಗಳೂ ಆಡಳಿತ ನಡೆಸುತ್ತಾರೆ. ಆದರೆ, ಬದುಕು ಕಟ್ಟಿಕೊಡುವ ಕೆಲಸವನ್ನು ಸರ್ಕಾರ ಮಾಡಬೇಕು. ಜನರ ಸಂಕಷ್ಟ ಅರಿತು, ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಮುಖ್ಯ. ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ವಿಶ್ವಾಸ ಮೂಡಿಸುವ ಕೆಲಸ ಆಗಬೇಕಿದೆ. ಇಂತಹ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೇವೆ’ ಎಂದು ಹೇಳಿದರು.

‘ಅಧಿಕಾರ ಕೇಂದ್ರಿತ ರಾಜಕಾರಣ ಹಾಗೂ ಜನಪರ ರಾಜಕಾರಣದ ಮಾದರಿಗಳು ನಮ್ಮ ನಡುವೆ ಇವೆ. ಜನಪರ ರಾಜಕಾರಣ ಇಂದಿನ ಅಗತ್ಯ. ಪ್ರಧಾನಿ ನರೇಂದ್ರ ಮೋದಿ, ಬಿ.ಎಸ್‌.ಯಡಿಯೂರಪ್ಪ ಜನಪರ ರಾಜಕಾರಣ ಮಾಡಿದ್ದರಿಂದ ಹಲವು ಕುಟುಂಬಗಳಲ್ಲಿ ಆತ್ಮವಿಶ್ವಾಸ ಮೂಡಿದೆ, ಸ್ವಾಭಿಮಾನದ ಬದುಕು ಸಿಕ್ಕಿದೆ. ಜನಕಲ್ಯಾಣ ಮಾಡುವುದು ಸರ್ಕಾರದ ಪ್ರಮುಖ ನೀತಿ’ ಎಂದು ನುಡಿದರು.

‘ಕಿಸಾನ್ ಸಮ್ಮಾನ್ ಯೋಜನೆಯಡಿ ರಾಜ್ಯದ 53 ಲಕ್ಷ ರೈತ ಕುಟುಂಬಗಳಿಗೆ ನಾಲ್ಕು ವರ್ಷದಲ್ಲಿ ₹ 16 ಸಾವಿರ ಕೋಟಿ ನೀಡಲಾಗಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 17 ಲಕ್ಷ ಮನೆಗಳ ನಿರ್ಮಾಣಕ್ಕೆ ಮಂಜೂರಾತಿ ಸಿಕ್ಕಿದೆ. 2.4 ಲಕ್ಷ ಜನರಿಗೆ ವಿದ್ಯುತ್ ಶಕ್ತಿ ಸಂಪರ್ಕ ಕಲ್ಪಿಸಲಾಗಿದೆ. ರೈತ ವಿದ್ಯಾನಿಧಿ ಯೋಜನೆಯಡಿ ಜಿಲ್ಲೆಯ 12,373 ವಿದ್ಯಾರ್ಥಿಗಳಿಗೆ ಲಾಭ ದೊರೆತಿದೆ. ಇನ್ನೂ ಹೆಚ್ಚಿನ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ನೀಡಲು ಅವಕಾಶವಿದೆ. ಇದಕ್ಕೆ ಅಧಿಕಾರಿಗಳು ಶ್ರಮಿಸಬೇಕು’ ಎಂದರು.

1 ಲಕ್ಷ ಹಕ್ಕುಪತ್ರ ವಿತರಣೆ:

‘ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ಹಟ್ಟಿಗಳು ಗ್ರಾಮಗಳಾಗಿಲ್ಲ. ಮನೆಯ ಒಡೆಯನಿಗೂ ಅದರ ಹಕ್ಕು ಇರಲಿಲ್ಲ. ಅವರಿಗೆ ಹಕ್ಕು ಕೊಡುವ ಕಾರ್ಯವನ್ನು ಸರ್ಕಾರ ಮಾಡಿದೆ. ಒಂದು ಲಕ್ಷ ಜನರಿಗೆ ಹಕ್ಕುಪತ್ರ ನೀಡುವ ಕಾರ್ಯಕ್ರಮವನ್ನು ದಾವಣಗೆರೆಯಲ್ಲಿ ನಡೆಸಲು ಯೋಜಿಸಲಾಗಿದೆ’ ಎಂದು ಹೇಳಿದರು.

‘ಗೊಲ್ಲರಹಟ್ಟಿ, ಕುರುಬರಹಟ್ಟಿಯನ್ನು ಗ್ರಾಮಗಳಾಗಿ ಪರಿವರ್ತನೆ ಮಾಡಲಾಗಿದೆ. ಇಲ್ಲಿಯ ಮನೆಗಳಿಗೆ ಹಕ್ಕುಪತ್ರ ನೀಡುವ ಕಾರ್ಯ ನಡೆಯುತ್ತಿದೆ. ಲಂಬಾಣಿ ಸಮುದಾಯದ 50 ಸಾವಿರ ಕುಟುಂಬಗಳಿಗೆ ಕಲಬುರ್ಗಿಯಲ್ಲಿ ಹಕ್ಕುಪತ್ರ ನೀಡಲಾಗಿದೆ. ಇಂತಹದೇ ಸಮಾರಂಭವೊಂದು ದಾವಣಗೆರೆಯಲ್ಲಿ ನಡೆಯಲಿದೆ’ ಎಂದು ಪ್ರಕಟಿಸಿದರು.

ಚಿತ್ರದುರ್ಗ ಜಿಲ್ಲೆಯ ಬಹುದಿನಗಳ ಬೇಡಿಕೆಯಾದ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಒಂದು ವಾರದಲ್ಲಿ ಅನುಮೋದನೆ ನೀಡುವುದಾಗಿ ಮುಖ್ಯಮಂತ್ರಿ ಆಶ್ವಾಸನೆ ನೀಡಿದರು. ಶೀಘ್ರದಲ್ಲಿ ಮತ್ತೊಮ್ಮೆ ಚಿತ್ರದುರ್ಗ ನಗರಕ್ಕೆ ಆಗಮಿಸಿ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸುವುದಾಗಿ ಹೇಳಿದರು.

ಭ್ರಮೆ ಬಿತ್ತಿದ ಭಾಗ್ಯದಾತ: ವ್ಯಂಗ್ಯ

ರಾಜ್ಯದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಪಕ್ಷದ ನಾಯಕರು ಜನರಿಗೆ ‘ಭಾಗ್ಯ’ ಕೊಡುವ ಭ್ರಮೆ ಬಿತ್ತಿದ್ದರು. ಹೀಗಾಗಿ, ರಾಜ್ಯ ಸೌಭಾಗ್ಯದ ಬದಲು ದೌರ್ಭಾಗ್ಯದಲ್ಲಿತ್ತು ಎಂದು ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದರು.

‘ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳಿಗೆ ನೀಡುವ ಹಾಸಿಗೆ, ದಿಂಬಿನಲ್ಲಿ ಭ್ರಷ್ಟಾಚಾರ ನಡೆಯಿತು. ಗಂಗಾಕಲ್ಯಾಣ ಯೋಜನೆಯಡಿ ನೀಡುವ ಕೊಳವೆ ಬಾವಿಯಲ್ಲಿ ಅಕ್ರಮವಾಗಿತ್ತು. ಅನ್ನಭಾಗ್ಯ ಅಕ್ಕಿ ಸೇರಿ ಎಲ್ಲ ಯೋಜನೆಯಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆಯಿತು. ಆದರೆ, ಈಗ ಇಂತಹ ಭ್ರಷ್ಟಾಚಾರಕ್ಕೆ ಕಡಿವಾಣ ಬಿದ್ದಿದೆ. ಫಲಾನುಭವಿಗಳ ಖಾತೆಗೆ ನೇರವಾಗಿ ಅನುದಾನ ತಲುಪುತ್ತಿದೆ’ ಎಂದು ಹೇಳಿದರು.

ಸಿದ್ದರಾಮಯ್ಯ ವಿರುದ್ಧ ಟೀಕೆ

ರಾಜಕೀಯ ಸಮಾವೇಶಕ್ಕೆ ₹ 500 ಕೊಟ್ಟು ಜನರನ್ನು ಕರೆತರಬೇಕು ಎಂಬ ಸೂಚನೆ ನೀಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಎಂತಹ ನಾಯಕ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಪ್ರಶ್ನಿಸಿದರು.

‘ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಯನ್ನು ಗಮನಿಸಿ ಜನರು ಸ್ವಯಂಪ್ರೇರಿತವಾಗಿ ಸಮಾವೇಶಕ್ಕೆ ಬಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಬೆಳಗಾವಿಗೆ ಭೇಟಿ ನೀಡಿದಾಗ ಸರ್ಕಾರದ ಹಲವು ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಿದರು. ಬೊಮ್ಮಾಯಿ ನೇತೃತ್ವದ ಸರ್ಕಾರವೂ ಇಂತಹದೇ ಕೆಲಸ ಮಾಡುತ್ತಿದೆ’ ಎಂದು ಹೇಳಿದರು.

‘ಯುದ್ಧ ನಿಲ್ಲಿಸುವ ಶಕ್ತಿ ಮೋದಿಗೆ ಇದೆ’

ರಷ್ಯ–ಉಕ್ರೇನ್‌ ಯುದ್ಧ ನಡೆಯುತ್ತಿದ್ದಾಗ ಅನೇಕ ವಿದ್ಯಾರ್ಥಿಗಳು ಯುದ್ದಪೀಡಿತ ಪ್ರದೇಶದಲ್ಲಿ ಸಿಲುಕಿದ್ದರು. ಎರಡೂ ದೇಶದ ನಾಯಕರೊಂದಿಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಯುದ್ಧವನ್ನು ನಿಲ್ಲಿಸಿ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತಂದರು ಎಂದು ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಹೇಳಿದರು.

‘ಪಾಕಿಸ್ತಾನ, ಚೀನಾ ಹಾಗೂ ಅಮೆರಿಕದ ವಿದ್ಯಾರ್ಥಿಗಳನ್ನು ಕೂಡ ಯುದ್ದಪೀಡಿತ ಪ್ರದೇಶದಿಂದ ಕರೆತಂದು ಆ ದೇಶಗಳಿಗೆ ಸುರಕ್ಷಿತವಾಗಿ ಮರಳಿಸಿದ ಕೀರ್ತಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ. ಎರಡು ದೇಶಗಳ ನಡುವೆ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸುವ ಶಕ್ತಿ ವಿಶ್ವದಲ್ಲಿ ನರೇಂದ್ರ ಮೋದಿ ಅವರಿಗೆ ಮಾತ್ರ ಇದೆ’ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಗಣಿ ಮತ್ತು ಭೂವಿಜ್ಞಾನ ಸಚಿವ ಹಾಲಪ್ಪ ಆಚಾರ್, ಪ್ರವಾಸೋದ್ಯಮ ಸಚಿವ ಆನಂದ್‍ಸಿಂಗ್, ವಿಧಾನಪರಿಷತ್ ಮುಖ್ಯ ಸಚೇತಕ ವೈ.ಎ.ನಾರಾಯಣಸ್ವಾಮಿ, ಶಾಸಕರಾದ ಎಂ.ಚಂದ್ರಪ್ಪ, ಗೂಳಿಹಟ್ಟಿ ಡಿ.ಶೇಖರ್, ಪ್ರೊ.ಲಿಂಗಣ್ಣ, ಕೆ.ಪೂರ್ಣಿಮಾ, ವಿಧಾನಪರಿಷತ್ ಸದಸ್ಯರಾದ ಚಿದಾನಂದ ಎಂ.ಗೌಡ, ಕೆ.ಎಸ್. ನವೀನ್, ಹೇಮಲತಾ ನಾಯಕ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಜಿ.ಟಿ.ಸುರೇಶ್, ನಗರಸಭೆ ಅಧ್ಯಕ್ಷೆ ಬಿ.ತಿಪ್ಪಮ್ಮ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ರಾಮ್‍ಪ್ರಸಾದ್‌ ಮನೋಹರ, ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಸ್‌.ದಿವಾಕರ ಪೊಲೀಸ್‌ ವರಿಷ್ಠಾಧಿಕಾರ ಕೆ.ಪರುಶುರಾಮ ಇದ್ದರು.

***

ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಾಧನೆಯನ್ನು ಜನರಿಗೆ ತಲುಪಿಸುವ ಪ್ರಯತ್ನದ ಭಾಗವಾಗಿ ಈ ಸಮಾವೇಶ ನಡೆಸಲಾಗಿದೆ. ಜನರ ಕಣ್ಣೀರು ಒರೆಸುವ ಕಾರ್ಯವನ್ನು ಸರ್ಕಾರಗಳು ಮಾಡುತ್ತಿವೆ.
ಬಿ.ಸಿ.ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ

***

ಪಾಕಿಸ್ತಾನದಲ್ಲಿ ಹಣ ನೀಡಿದರೂ ಆಹಾರ ಧಾನ್ಯ ಸಿಗುತ್ತಿಲ್ಲ. ಅಕ್ಕಿ, ಅಡುಗೆ ಅನಿಲ ಸೇರಿ ಎಲ್ಲ ಅಗತ್ಯ ವಸ್ತು ಗಗನಕ್ಕೆ ಏರಿವೆ. ಭಾರತದಲ್ಲಿ ಅಕ್ಕಿ, ಗೋದಿಯನ್ನು ಮೋದಿ ಉಚಿತವಾಗಿ ನೀಡುತ್ತಿದ್ದಾರೆ.
ಜಿ.ಎಚ್‌.ತಿಪ್ಪಾರೆಡ್ಡಿ, ಶಾಸಕ
ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT