ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಿಕ್ಷುಕರ ಕರ ₹ 37 ಲಕ್ಷ ಬಾಕಿ

ನಿರಾಶ್ರಿತರ ಪರಿಹಾರ ಕೇಂದ್ರದ ಅಭಿವೃದ್ಧಿಗೆ ತೊಡಕು
Last Updated 21 ನವೆಂಬರ್ 2018, 20:04 IST
ಅಕ್ಷರ ಗಾತ್ರ

ಚಿತ್ರದುರ್ಗ: ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸುವ ಉದ್ದೇಶದಿಂದ ಸಂಗ್ರಹಿಸುವ ಭಿಕ್ಷುಕರ ಕರದಲ್ಲಿ ₹ 37 ಲಕ್ಷವನ್ನು ಸ್ಥಳೀಯ ಸಂಸ್ಥೆಗಳು ಬಾಕಿ ಉಳಿಸಿಕೊಂಡಿವೆ. ನಿಯಮಿತವಾಗಿ ಕರ ಪಾವತಿಸದ ಪರಿಣಾಮ ನಿರಾಶ್ರಿತರ ಪರಿಹಾರದ ಅಭಿವೃದ್ಧಿಗೆ ತೊಂದರೆ ಉಂಟಾಗಿದೆ.

9 ವರ್ಷಗಳ ಬಾಕಿಯನ್ನು ಒಂದೇ ಕಂತಿನಲ್ಲಿ ಪಾವತಿಸದಿದ್ದರೆ ವಸೂಲಿಗೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ ಜಿಲ್ಲೆಯ ಏಳು ಸ್ಥಳೀಯ ಸಂಸ್ಥೆಗಳಿಗೆ ಎಚ್ಚರಿಕೆ ನೀಡಿದ್ದಾರೆ. ಕೇಂದ್ರ ಪರಿಹಾರ ಸಮಿತಿಗೆ ಮೂರು ತಿಂಗಳಿಗೊಮ್ಮೆ ಕರ ಪಾವತಿಸದೇ ಇದ್ದರೆ ಹಣ ದುರುಪಯೋಗ ಪ್ರಕರಣ ದಾಖಲಿಸಲು ಕಾನೂನಿನಲ್ಲಿ ಅವಕಾಶವಿದೆ.

ಕರ್ನಾಟಕ ಭಿಕ್ಷಾಟನೆ ನಿಷೇಧ ಕಾಯ್ದೆಯ ಪ್ರಕಾರ ಆಸ್ತಿ ತೆರಿಗೆಯಲ್ಲಿ ಶೇ 3ರಷ್ಟನ್ನು ಭಿಕ್ಷುಕರ ಕರ ಸಂಗ್ರಹಿಸಬೇಕು. ಕಟ್ಟಡ, ಮನೆ, ಜಮೀನು ಹಾಗೂ ನಿವೇಶನಗಳಿಂದ ಸಂಗ್ರಹಿಸಿದ ಕಂದಾಯದಲ್ಲಿ ಈ ಕರವೂ ಸೇರಿರುತ್ತದೆ. ಹೀಗೆ ಸಂಗ್ರಹವಾದ ಕರವನ್ನು ಪ್ರತಿ ಮೂರು ತಿಂಗಳಿಗೊಮ್ಮ ಕೇಂದ್ರ ಪರಿಹಾರ ನಿಧಿಗೆ ನೀಡುವುದು ಕಡ್ಡಾಯ.

ಆದರೆ, ಚಿತ್ರದುರ್ಗ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳು 2009–10ರಿಂದ 2017–18ರವರೆಗೆ ಲಕ್ಷಾಂತರ ರೂಪಾಯಿ ಕರ ಬಾಕಿ ಉಳಿಸಿಕೊಂಡಿವೆ. ಚಿತ್ರದುರ್ಗ, ಚಳ್ಳಕೆರೆ ನಗರಸಭೆ ಹಾಗೂ ಹೊಸದುರ್ಗ ಪುರಸಭೆ ಅತಿ ಹೆಚ್ಚು ಬಾಕಿ ಉಳಿಸಿಕೊಂಡಿವೆ. ಹಿರಿಯೂರು ₹ 1 ಸಾವಿರ, ಹೊಳಲ್ಕೆರೆ ₹ 12 ಸಾವಿರ, ನಾಯಕನಹಟ್ಟಿ ₹ 43 ಸಾವಿರ ಹಾಗೂ ಮೊಳಕಾಲ್ಮುರು ಪಟ್ಟಣ ಪಂಚಾಯಿತಿ ₹ 3.41 ಲಕ್ಷ ಬಾಕಿ ಪಾವತಿಸಬೇಕಿದೆ.

ನಿರಾಶ್ರಿತರು ಹಾಗೂ ಭಿಕ್ಷುಕರ ಪುನರ್ವಸತಿಗೆ ಚಿತ್ರದುರ್ಗ ಸೇರಿ ರಾಜ್ಯದ ವಿವಿಧೆಡೆ 14 ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದೆ. ಭಿಕ್ಷಾಟನೆಯಲ್ಲಿ ತೊಡಗಿದವರನ್ನು ವಶಕ್ಕೆ ಪಡೆದು ಪುನರ್ವಸತಿ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗುತ್ತದೆ. ಗರಿಷ್ಠ ಮೂರು ವರ್ಷದವರೆಗೆ ಇವರನ್ನು ಕೇಂದ್ರದಲ್ಲಿ ಆರೈಕೆ ಮಾಡಲು ಅವಕಾಶವಿದೆ. ವ್ಯಸನ ಮುಕ್ತಗೊಳಿಸಿ, ಕಾಯಿಲೆಗೆ ಚಿಕಿತ್ಸೆ ಕೊಡಿಸಿ ಸಮಾಜದ ಮುಖ್ಯವಾಹಿನಿಗೆ ತರುವುದು ಕೇಂದ್ರಗಳ ಜವಾಬ್ದಾರಿ.

ನಿರಾಶ್ರಿತರ ಕೇಂದ್ರಗಳಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಅನುದಾನ ನೀಡುವುದಿಲ್ಲ. ಕಟ್ಟಡ ನಿರ್ಮಾಣ, ಮೂಲ ಸೌಕರ್ಯ, ಊಟ, ವಸತಿ, ಔಷಧ ಸೇರಿ ಎಲ್ಲ ವೆಚ್ಚಕ್ಕೂ ಭಿಕ್ಷುಕರ ಕರವನ್ನು ಅವಲಂಬಿಸುವುದು ಅನಿವಾರ್ಯ. ಬಾಕಿ ಉಳಿಸಿಕೊಂಡ ಕರವನ್ನು ಪಾವತಿಸುವಂತೆ ನಿರಾಶ್ರಿತರ ಪರಿಹಾರ ಕೇಂದ್ರದ ಸಿಬ್ಬಂದಿ ಸ್ಥಳೀಯ ಪ್ರಾಧಿಕಾರಗಳಿಗೆ ಹಲವು ಬಾರಿ ಅಲೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT