ಶುಕ್ರವಾರ, ಸೆಪ್ಟೆಂಬರ್ 24, 2021
27 °C
ಅಮೃತಾಪುರ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕನಿಗೆ ಒಲಿದ ಗೌರವ

ಉಮೇಶ್‌ಗೆ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

ಸಾಂತೇನಹಳ್ಳಿ ಸಂದೇಶ್ ಗೌಡ Updated:

ಅಕ್ಷರ ಗಾತ್ರ : | |

Prajavani

ಹೊಳಲ್ಕೆರೆ: ತಾಲ್ಲೂಕಿನ ಅಮೃತಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಟಿ.ಪಿ. ಉಮೇಶ್ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಾಥಮಿಕ ಶಾಲಾ ವಿಭಾಗದಿಂದ 20 ಶಿಕ್ಷಕರನ್ನು ಆಯ್ಕೆ ಮಾಡಲಾಗಿದ್ದು, ಶಿಕ್ಷಕ ಉಮೇಶ್ ಅತಿ ಹೆಚ್ಚು ಅಂಕಗಳನ್ನು ಪಡೆಯುವ ಮೂಲಕ ಪ್ರಥಮ ಸ್ಥಾನ ಪಡೆದಿದ್ದಾರೆ. ಪ್ರಶಸ್ತಿಯು ₹ 10,000 ನಗದು ಹಾಗೂ ಶಾಲೆಯ ಅಭಿವೃದ್ಧಿಗೆ ₹ 50,000 ಅನುದಾನ ಒಳಗೊಂಡಿದೆ.

2004ರಲ್ಲಿ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲ್ಲೂಕಿನ ಚಿಕ್ಕ ಬಳ್ಳಾರಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕ ವೃತ್ತಿ ಆರಂಭಿಸಿದ ಇವರು, 2006ರಲ್ಲಿ ತಾಲ್ಲೂಕಿನ ಕೇಶವಾಪುರ ಶಾಲೆಗೆ ಬಂದರು. 2009ರಲ್ಲಿ ಅಮೃತಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವೃತ್ತಿ ಆರಂಭಿಸಿ ಶಾಲೆಯ ಪ್ರಗತಿಗೆ ಶ್ರಮಿಸಿದರು.

‘ನಾನು ಕುಗ್ರಾಮದ ಶಾಲೆಗೆ ಶಿಕ್ಷಕನಾಗಿ ಬಂದಾಗ ಕೇವಲ 39 ವಿದ್ಯಾರ್ಥಿಗಳು ಓದುತ್ತಿದ್ದರು. ದಾಖಲಾತಿ ಹೆಚ್ಚಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡೆವು. ಆಗ ಶಾಲೆಯ ಕಟ್ಟಡ ಶಿಥಿಲಗೊಂಡು ಬೀಳುವ ಹಂತದಲ್ಲಿತ್ತು. ಹಳೇ ಗೋಡೆಗಳಿಗೆ ಬಣ್ಣ ಬಳಿದು ಮಕ್ಕಳನ್ನು ಆಕರ್ಷಿಸಿದೆವು. ಪೋಷಕರಲ್ಲಿನ ಕಾನ್ವೆಂಟ್ ವ್ಯಾಮೋಹ ಬಿಡಿಸಲು ನಮ್ಮ ಶಾಲೆಯಲ್ಲೂ ಇಂಗ್ಲಿಷ್ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿದೆವು. ನನ್ನ ಸ್ವಂತ ಹಣದಿಂದ ಮಕ್ಕಳಿಗೆ ಕಾನ್ವೆಂಟ್‌ಗಳಲ್ಲಿ ಕೊಡುವಂತಹ ಸಮವಸ್ತ್ರ ಕೊಡಿಸಿದೆ. ದಾನಿಗಳ ನೆರವು ಪಡೆದು ಶಾಲೆಗೆ ಅಗತ್ಯವಾದ ಪೀಠೋಪಕರಣ, ಪಾಠೋಪಕರಣ ಒದಗಿಸಿದೆ. ಚಿಕ್ಕ ಮಕ್ಕಳಿಗೆ ಲ್ಯಾಪ್ ಟಾಪ್ ಬಳಸುವುದನ್ನು ಕಲಿಸಿದೆ. ಬರಬರುತ್ತ ದಾಖಲಾತಿ ಹೆಚ್ಚುತ್ತ ಹೋಯಿತು. ಈಗ 5 ತರಗತಿಗಳಲ್ಲಿ 79 ವಿದ್ಯಾರ್ಥಿಗಳು ಓದುತ್ತಿರುವುದು ನಮಗೆ ಹೆಮ್ಮೆ ತಂದಿದೆ’ ಎನ್ನುತ್ತಾರೆ ಶಿಕ್ಷಕ ಉಮೇಶ್.

ಶಿಕ್ಷಕ ಉಮೇಶ್ ಕೋವಿಡ್ ಸಂಕಷ್ಟದಲ್ಲೂ ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ಆದ್ಯತೆ ನೀಡಿದ್ದರು. ಗ್ರಾಮೀಣ ಭಾಗದಲ್ಲಿ ಬಡವರೇ ಹೆಚ್ಚಿರುವುದರಿಂದ ಎಲ್ಲರ ಹತ್ತಿರ ಸ್ಮಾರ್ಟ್‌ಫೋನ್ ಇರುವುದಿಲ್ಲ ಎಂದು ಕೀಪ್ಯಾಡ್ ಮೊಬೈಲ್ ಮೂಲಕ ‘ಮಿಸ್ಡ್‌ ಕಾಲ್‌ ಕೊಡಿ ಪಾಠ ಕೇಳಿ’ ಅಭಿಯಾನ ನಡೆಸಿದ್ದರು. ಪ್ರತಿಭಾವಂತ ಶಿಕ್ಷಕರಾಗಿರುವ ಇವರು ಚಿತ್ರದುರ್ಗ ಆಕಾಶವಾಣಿ ನಡೆಸುವ ‘ಚಿಗುರು’ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಶಾಲೆಯಲ್ಲಿ ವಿಜ್ಞಾನ ಪ್ರಯೋಗಾಲಯ ಆರಂಭಿಸಿದ್ದಾರೆ. ಶಿಕ್ಷಕ ಉಮೇಶ್ ಕವಿ, ಸಾಹಿತಿಯೂ ಆಗಿದ್ದಾರೆ. ‘ನನ್ನಯ ಸೈಕಲ್‌ ಟ್ರಿಣ್‌ ಟ್ರಿಣ್‌, ವಚನಾಂಜಲಿ, ವಚನವಾಣಿ, ಫೋಟೋಕ್ಕೊಂದು ಫ್ರೇಮು, ಅಪ್ಪನು ಕೊಡಿಸಿದ ಮೊದಲ ಪುಸ್ತಕ, ದೇವರಿಗೆ ಬೀಗ’ ಎಂಬ ಹಲವು ಕೃತಿಗಳನ್ನು ಪ್ರಕಟಿಸಿದ್ದಾರೆ. ಮೈಸೂರು ದಸರಾ ಕವಿಗೋಷ್ಠಿಯಲ್ಲಿ ತಮ್ಮ ಕವಿತೆಗಳನ್ನು ವಾಚನ ಮಾಡಿದ್ದಾರೆ. ಬೆಂಗಳೂರು ಆಕಾಶವಾಣಿಯಲ್ಲೂ ಇವರ ಹಲವು ಕಾರ್ಯಕ್ರಮಗಳು ಪ್ರಸಾರವಾಗಿವೆ.

ಮಕ್ಕಳಿಗೆ ಪ್ರಶಸ್ತಿ ಅರ್ಪಣೆ

‘ನನಗೆ ಬಂದಿರುವ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ನನ್ನ ಶಾಲೆಯ ವಿದ್ಯಾರ್ಥಿಗಳಿಗೆ ಅರ್ಪಿಸುತ್ತೇನೆ’ ಎಂದು ಶಿಕ್ಷಕ ಉಮೇಶ್ ಪ್ರತಿಕ್ರಿಯಿಸಿದರು.

‘ಮಕ್ಕಳೇ ನನಗೆ ದೇವರು. ನಾನು ತಾಲ್ಲೂಕಿನ ಶಿಕ್ಷಕರ ಬಳಗ, ಅಧಿಕಾರಿಗಳು, ಹಿರಿಯರ ಮಾರ್ಗದರ್ಶನ, ಪ್ರೇರಣೆಯಿಂದ ರೂಪುಗೊಂಡಿದ್ದೇನೆ. ಮುಖ್ಯಶಿಕ್ಷಕ ಸಿದ್ದಪ್ಪ, ಸಹಶಿಕ್ಷಕಿ ರೇಷ್ಮಾ ಸಹಕಾರ ನೀಡಿದ್ದಾರೆ. ಆದ್ದರಿಂದ ಪ್ರಶಸ್ತಿಯ ಕೀರ್ತಿ ಇವರೆಲ್ಲರಿಗೂ ಸಲ್ಲಬೇಕು. ಚಿಕ್ಕ ವಯಸ್ಸಿನಲ್ಲೇ ರಾಜ್ಯಮಟ್ಟದ ಪ್ರಶಸ್ತಿ ಬಂದಿರುವುದು ನನಗೆ ಹೆಚ್ಚು ಸಂತಸ ತಂದಿದೆ’ ಎಂದು ಅವರು ಸಂಭ್ರಮ ಹಂಚಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.