ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ವಿ.ವಿ.ಸಾಗರಕ್ಕೆ ಬರುತ್ತಿದೆ ಭದ್ರಾ ನೀರು

ನಾಲೆ ಮೂಲಕ ವೇದಾವತಿ ನದಿಗೆ ಹರಿಯುವ ಭದ್ರೆ
Last Updated 3 ಅಕ್ಟೋಬರ್ 2019, 13:18 IST
ಅಕ್ಷರ ಗಾತ್ರ

ಚಿತ್ರದುರ್ಗ: ಬಹುನಿರೀಕ್ಷಿತ ಭದ್ರಾ ಮೇಲ್ದಂಡೆ ಯೋಜನೆ ನಿರ್ಣಾಯಕ ಹಂತ ತಲುಪಿದ್ದು, ವಾಣಿ ವಿಲಾಸ ಜಲಾಶಯಕ್ಕೆ ಪ್ರಯೋಗಾರ್ಥವಾಗಿ ನೀರು ಹರಿಸುವುದಕ್ಕೆ ಕೊನೆಗೂ ಯಶಸ್ಸು ಸಿಕ್ಕಿದೆ. ಭದ್ರಾ ನದಿಯ ನೀರು ವಿ.ವಿ.ಸಾಗರ ತಲುಪಲು ಇನ್ನೆರಡು ದಿನ ಕಾಯಬೇಕಿದೆ.

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಬೆಟ್ಟದ ತಾವರೆಕೆರೆಯ ಪಂಪ್‌ಹೌಸಿನ ಒಂದು ಮೋಟಾರು ಗುರುವಾರ ಮಧ್ಯಾಹ್ನ ಪ್ರಾರಂಭವಾಗಿದೆ. ಸುಮಾರು 450 ಕ್ಯುಸೆಕ್‌ ನೀರು ನಾಲೆಯಲ್ಲಿ ಹರಿಯುತ್ತಿದ್ದು, ಅಜ್ಜಂಪುರ ಸಮೀಪದ ಏಳು ಕಿ.ಮೀ ಉದ್ದದ ಸುರಂಗ ಹಾಗೂ ರೈಲ್ವೆ ಹಳಿಯ ಸಮೀಪ ಅಳವಡಿಸಿದ ಕೊಳವೆಯನ್ನು ದಾಟಿ ವೇದಾವತಿ ನದಿಯತ್ತ ನೀರು ಹರಿಯುತ್ತಿದೆ.

‘ಯೋಜನೆಯ ಇತಿಹಾಸದಲ್ಲಿಯೇ ಇದೊಂದು ಮೈಲುಗಲ್ಲು. ಪ್ರಯೋಗ ಯಶಸ್ವಿಯಾಗಿರುವುದಕ್ಕೆ ಹರ್ಷವಾಗುತ್ತಿದೆ. ನಾಲ್ಕು ಮೋಟಾರುಗಳಲ್ಲಿ ಒಂದನ್ನು ಮಾತ್ರ ಪ್ರಾರಂಭಿಸಲಾಗಿದೆ. ಸದ್ಯ ನಾಲೆಯಲ್ಲಿ 450 ಕ್ಯುಸೆಕ್‌ ನೀರು ಹರಿಯುವ ಸಾಮರ್ಥ್ಯ ಇದೆ. ನೀರು ವಿ.ವಿ.ಸಾಗರ ತಲುಪಲು ಮೂರು ದಿನ ಬೇಕಾಗಬಹುದು’ ಎಂದು ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯ ಎಂಜಿನಿಯರ್‌ ಶಿವಕುಮಾರ್‌ ತಿಳಿಸಿದ್ದಾರೆ.

‘ಭದ್ರಾ ಜಲಾಶಯದಿಂದ ಹರಿಯುವ ನೀರನ್ನು ಶಾಂತಿಪುರದ ಸಮೀಪ ಪಂಪ್‌ ಮಾಡಲಾಗುತ್ತದೆ. ಅಲ್ಲಿಂದ ಹರಿಯುವ ನೀರು ಬೆಟ್ಟದತಾವರೆಕೆರೆ ಸಮೀಪ ಸಂಗ್ರಹವಾಗಲಿದೆ. ಭದ್ರಾ ಜಲಾಶಯದಿಂದ 46 ಕಿ.ಮೀ ದೂರದಲ್ಲಿರುವ ಬೆಟ್ಟದತಾವರೆಕೆರೆಯಿಂದ ಮತ್ತೊಂದು ಹಂತದಲ್ಲಿ ನೀರನ್ನು ಪಂಪ್‌ ಮಾಡಬೇಕಿದೆ. ಅಲ್ಲಿಂದ ಹರಿಯುವ ನೀರು 85 ಕಿ.ಮೀ ದೂರದ ವಿ.ವಿ.ಸಾಗರ ತಲುಪಲಿದೆ’ ಎಂದು ವಿವರಿಸಿದರು.

ಅಜ್ಜಂಪುರ ಸಮೀಪದ ರೈಲು ಹಳಿಯ ಕೆಳಭಾಗದಲ್ಲಿ ನಾಲೆ ನಿರ್ಮಾಣ ಕಾರ್ಯ ಬಾಕಿ ಇದೆ. 2020ರ ಮಾರ್ಚ್‌ ವೇಳೆಗೆ ನಾಲೆ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಅಲ್ಲಿಯವರೆಗೂ ಒಂದೇ ಮೋಟಾರು ನೀರನ್ನು ಪಂಪ್‌ ಮಾಡಲಿದೆ. ಮಾರ್ಚ್‌ ಬಳಿಕ ಎಲ್ಲ ನಾಲ್ಕು ಮೋಟಾರು ನೀರು ಪಂಪ್‌ ಮಾಡಿದರೆ, ವಿ.ವಿ.ಸಾಗರಕ್ಕೆ ಹರಿಯುವ ನೀರಿನ ಪ್ರಮಾಣ ಹೆಚ್ಚಾಗಲಿದೆ ಎಂದು ಭದ್ರಾ ಮೇಲ್ದಂಡೆ ಯೋಜನೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಿಹಿ ಹಂಚಿ ಸಂಭ್ರಮ:ಭದ್ರಾ ನೀರು ಚಿತ್ರದುರ್ಗ ಜಿಲ್ಲೆಯತ್ತ ಹರಿಯುತ್ತಿರುವುದನ್ನು ಕಂಡು ರೈತ ಮುಖಂಡರು ಹಾಗೂ ಹೋರಾಟಗಾರರು ಸಿಹಿ ಹಂಚಿ ಸಂಭ್ರಮಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ಭದ್ರಾ ಮೇಲ್ದಂಡೆ ಯೋಜನೆಯ ಕಚೇರಿಗೆ ಭೇಟಿ ನೀಡಿ ಎಂಜಿನಿಯರು ಹಾಗೂ ಸಿಬ್ಬಂದಿಗೆ ಸಿಹಿ ವಿತರಿಸಿ ಸಂತಸ ಹಂಚಿಕೊಂಡರು. ನೀರು ತರಲು ಶ್ರಮಿಸಿದ ಸಿಬ್ಬಂದಿಯನ್ನು ಅಭಿನಂದಿಸಿದರು.

‘ಎರಡು ವರ್ಷಗಳ ಹಿಂದೆಯೇ ನೀರು ಬಂದಿದ್ದರೆ ಜಿಲ್ಲೆಯ ಅಡಿಕೆ ಹಾಗೂ ತೆಂಗಿನ ತೋಟಗಳನ್ನು ಉಳಿಸಿಕೊಳ್ಳಲು ಸಾಧ್ಯವಿತ್ತು. ಇನ್ನಾದರೂ ಜಿಲ್ಲೆಯ ಎಲ್ಲ ಕೆರೆಗಳಿಗೆ ನೀರು ತುಂಬಿಸಬೇಕು. ವಿ.ವಿ.ಸಾಗರದಿಂದ ಮುಂದಕ್ಕೆ ನೀರು ಹರಿಸುವ ಕಾರ್ಯ ಚುರುಕಾಗಿ ನಡೆಯಬೇಕು’ ಎಂದು ರೈತ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ನುಲೇನೂರು ಶಂಕರಪ್ಪ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT