ಗುರುವಾರ , ಅಕ್ಟೋಬರ್ 17, 2019
21 °C

ಚಿತ್ರದುರ್ಗ: ದಶಕದ ಬಳಿಕ ಹರಿಯುವ ಭದ್ರೆ

Published:
Updated:
Prajavani

ಚಿತ್ರದುರ್ಗ: ಬಹುನಿರೀಕ್ಷಿತ ಭದ್ರಾ ಮೇಲ್ದಂಡೆ ಯೋಜನೆ ದಶಕದ ಬಳಿಕ ನಿರ್ಣಾಯಕ ಹಂತ ತಲುಪಿದೆ. ತುಂಗಾ ಮತ್ತು ಭದ್ರಾ ನೀರನ್ನು ಬರದನಾಡಿಗೆ ಹರಿಸುವ ಕನಸು ನನಸಾಗುವ ಕಾಲ ಕೂಡಿಬಂದಿದೆ.

ಚಿತ್ರದುರ್ಗದವರೇ ಆದ ಮಾಜಿ ಮುಖ್ಯಮಂತ್ರಿ ಎಸ್‌.ನಿಜಲಿಂಗಪ್ಪ ಅವರ ಕಾಲದಿಂದಲೂ ಭದ್ರಾ ನೀರನ್ನು ಹರಿಸಲು ಪ್ರಯತ್ನ ನಡೆಯುತ್ತಲೇ ಇತ್ತು. ಎರಡೂವರೆ ದಶಕದಿಂದ ಈಚೆಗೆ ಇದು ಚಳವಳಿಯ ರೂಪು ಪಡೆದುಕೊಂಡಿತು. ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರ 2009ರಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಚಾಲನೆ ನೀಡಿತ್ತು. ವಿ.ವಿ.ಸಾಗರಕ್ಕೆ ಭದ್ರಾ ನೀರು ಹರಿಸುವ ಪ್ರಯೋಗ ಯಶಸ್ವಿ ಆಗಿರುವುದನ್ನು ಕಂಡು ರೈತಸಮೂಹ ಹರ್ಷಗೊಂಡಿದೆ.

ಚಿತ್ರದುರ್ಗ, ಚಿಕ್ಕಮಗಳೂರು, ದಾವಣಗೆರೆ ಹಾಗೂ ತುಮಕೂರು ಜಿಲ್ಲೆಯ ಐದು ಲಕ್ಷಕ್ಕೂ ಹೆಚ್ಚು ಎಕರೆ ಭೂಮಿಗೆ ಭದ್ರೆ ನೀರುಣಿಸಲಿದೆ. ತುಂಗಾ ಜಲಾಶಯದಿಂದ ಪ್ರತಿ ವರ್ಷ ಜೂನ್‌ ತಿಂಗಳಿಂದ ಅಕ್ಟೋಬರ್‌ವರೆಗೆ 17.4 ಟಿಎಂಸಿ ಅಡಿ ನೀರನ್ನು ಮೇಲೆತ್ತಿ ಭದ್ರಾ ಜಲಾಶಯಕ್ಕೆ ಹರಿಸಲಾಗುತ್ತದೆ. ಭದ್ರಾ ಜಲಾಶಯದ 12 ಟಿಎಂಸಿ ಅಡಿ ನೀರು ಸೇರಿಸಿ ‘ಭದ್ರಾ ಮೇಲ್ದಂಡೆ’ಗೆ ಹಂಚಿಕೆ ಮಾಡುವ ವ್ಯವಸ್ಥೆ ರೂಪಿಸಲಾಗಿದೆ.

ಭದ್ರಾ ಜಲಾಶಯದಿಂದ 11 ಕಿ.ಮೀ ದೂರದಲ್ಲಿರುವ ಶಾಂತಿಪುರ ಹಾಗೂ 46 ಕಿ.ಮೀ ದೂರದಲ್ಲಿರುವ ಬೆಟ್ಟದ ತಾವರೆಕೆರೆ ಪಂಪ್‌ಹೌಸ್‌ ನಿರ್ಮಿಸಲಾಗಿದೆ. ಎರಡೂ ಕಡೆ ನೀರನ್ನು 45 ಮೀಟರ್‌ ಮೇಲೆತ್ತಿ ನಾಲೆಗೆ ಹರಿಸಲಾಗುತ್ತದೆ. ಪ್ರತಿ ಪಂಪ್‌ಹೌಸ್‌ನಲ್ಲಿ ನಾಲ್ಕು ಮೋಟಾರು ಅಳವಡಿಸಲಾಗಿದೆ. ಪ್ರತಿ ಮೋಟಾರು 750 ಕ್ಯುಸೆಕ್‌ ನೀರು ಮೇಲೆತ್ತುವ ಸಾಮರ್ಥ್ಯ ಹೊಂದಿದೆ. ಇದರಲ್ಲಿ ಒಂದು ಮೋಟಾರಿನಿಂದ 450 ಕ್ಯುಸೆಕ್‌ ನೀರನ್ನು ಮಾತ್ರ ಮೇಲೆತ್ತಿ 2020ರ ಮಾರ್ಚ್‌ವರೆಗೆ ನಾಲೆಗೆ ಹರಿಸಲಾಗುತ್ತಿದೆ. ಅಜ್ಜಂಪುರದ ಸಮೀಪ ಸುಮಾರು ಏಳು ಕಿ.ಮೀ ಉದ್ದದ ಸುರಂಗ ನಿರ್ಮಾಣ ಕಾರ್ಯ ವಿಳಂಬ ಆಗಿದ್ದರಿಂದ ಯೋಜನೆ ಕುಂಟುತ್ತ ಸಾಗಬೇಕಾಯಿತು. 2013ರಲ್ಲಿ ಆರಂಭವಾದ ಸುರಂಗ ಮಾರ್ಗ ನಿರ್ಮಾಣ ಕಾರ್ಯ ಸತತವಾಗಿ ಐದು ವರ್ಷ ಹಿಡಿಯಿತು. ಸಡಿಲವಾದ ಮಣ್ಣು ಸಿಕ್ಕಿದ್ದರಿಂದ ಕಾಲಮಿತಿಯಲ್ಲಿ ಯೋಜನೆ ಪೂರ್ಣಗೊಳಿಸಲು ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ಸಾಧ್ಯವಾಗಲಿಲ್ಲ.

ಉದ್ದೇಶಿತ ಯೋಜನೆಯ ಅರ್ಧಭಾಗದಷ್ಟೂ ಕೆಲಸ ಪೂರ್ಣಗೊಂಡಿಲ್ಲ. ಅಜ್ಜಂಪುರ ಸಮೀಪದ ರೈಲು ಹಳಿ ಕೆಳಗೆ ಸುರಂಗ ಮಾರ್ಗದಲ್ಲಿ ನಾಲೆ ನಿರ್ಮಾಣ ಮಾಡುವ ಕೆಲಸ ಇನ್ನೂ ಬಾಕಿ ಇದೆ. ತಾತ್ಕಾಲಿಕವಾಗಿ ಎರಡು ಮೀಟರ್‌ ವ್ಯಾಸದ ಕೊಳವೆಗಳನ್ನು ಮಾತ್ರ ಅಳವಡಿಸಲಾಗಿದೆ. ಬೆಟ್ಟದ ತಾವರೆಕೆರೆ ಪಂಪ್‌ಹೌಸ್‌ನಿಂದ ಹರಿಯುವ ನೀರು ಸುರಂಗವನ್ನು ದಾಟಿ ಹೆಬ್ಬೂರು ಹಳ್ಳ– ಕುಕ್ಕಸಮುದ್ರ ಕೆರೆಯ ಮೂಲಕ ವೇದಾವತಿ ನದಿ ತಲುಪಲಿದೆ. ಅಲ್ಲಿಂದ ವಿ.ವಿ.ಸಾಗರಕ್ಕೆ ನೀರು ಹರಿಯಲಿದೆ.

ತುಮಕೂರು, ಚಿತ್ರದುರ್ಗ, ಜಗಳೂರು ಶಾಖಾ ಕಾಲುವೆಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ಹನಿ ನೀರಾವರಿ ಪದ್ಧತಿಯ ಮೂಲಕ ನೀರು ಒದಗಿಸುವ ಯೋಜನೆ ಇದಾಗಿದ್ದು, ತರೀಕೆರೆ ತಾಲ್ಲೂಕಿನಲ್ಲಿ ಅಚ್ಚುಕಟ್ಟು ಪ್ರದೇಶದ ಸಮೀಕ್ಷೆ
ನಡೆಯುತ್ತಿದೆ. 

*
ನಾಲೆಯಲ್ಲಿ ನೀರು ಹರಿಸುವ ಪ್ರಯೋಗ ಯಶಸ್ವಿಯಾಗಿದೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಯೋಜನೆಗೆ ಚಾಲನೆ ನೀಡಲಿದ್ದಾರೆ. ನಾಲೆ ನಿರ್ಮಾಣ ಕಾರ್ಯ ಮುಂದುವರಿಯಲಿದೆ.
-ಶಿವಕುಮಾರ್‌, ಮುಖ್ಯ ಎಂಜಿನಿಯರ್‌ ಭದ್ರಾ ಮೇಲ್ದಂಡೆ ಯೋಜನೆ

Post Comments (+)