ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರಾ ಮೇಲ್ದಂಡೆ ಕಾಮಗಾರಿ ಪೂರ್ಣಗೊಳಿಸಲು ಒತ್ತಾಯ

ಯೋಜನೆ ಕಾಮಗಾರಿ ವೀಕ್ಷಿಸಿದ ಮಠಾಧೀಶರು
Last Updated 5 ಡಿಸೆಂಬರ್ 2019, 9:58 IST
ಅಕ್ಷರ ಗಾತ್ರ

ಹೊಸದುರ್ಗ: ತಾಲ್ಲೂಕಿನ ವಿವಿಧ ಮಠಾಧೀಶರು ಭದ್ರಾ ಮೇಲ್ದಂಡೆ ನೀರಾವರಿ ಯೋಜನೆ ಕಾಮಗಾರಿಯನ್ನು ಬುಧವಾರ ವೀಕ್ಷಿಸಿದರು.

ಬಯಲು ಸೀಮೆ ಹಾಗೂ ಬರದ ನಾಡಿನ ರೈತರ ಹಲವು ವರ್ಷಗಳ ಕನಸು ನನಸಾಗುವ ದಿನ ಸಮೀಪಿಸಿರುವುದು ಸಂತಸ ತಂದಿದೆ. ಕುಕ್ಕಸಮುದ್ರ ಕೆರೆಯ ಹಳ್ಳದ ಸಾಲಿನ ಮೂಲಕ ವೇದಾವತಿ ನದಿ ಪಾತ್ರದಲ್ಲಿ ಹರಿಯುತ್ತಿರುವ ಭದ್ರೆಯ ನೀರನ್ನು ಈಗಾಗಲೇ ತಾಲ್ಲೂಕಿನ ಜನರು ನೋಡಿ ಹರ್ಷ ವ್ಯಕ್ತಪಡಿಸಿದ್ದಾರೆ. ಇದೇ ರೀತಿ ನೀರು ಚಾನಲ್‌ನಲ್ಲಿ ಶಾಶ್ವತವಾಗಿ ಹಾಗೂ ನಿರಂತರವಾಗಿ ಹರಿಯಬೇಕಾದರೆ, ಸರ್ಕಾರ ಶೀಘ್ರ ಕಾಲುವೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಕುಂಚಿಟಿಗ ಮಹಾಸಂಸ್ಥಾನದ ಶಾಂತವೀರ ಸ್ವಾಮೀಜಿ ಒತ್ತಾಯಿಸಿದರು.

ಮಳೆ ನೀರಿಗೆ ಕೆಲವೆಡೆ ಭದ್ರಾ ಮೇಲ್ದಂಡೆ ಯೋಜನೆಯ ಕಾಲುವೆ ಕಾಮಗಾರಿ ಕುಸಿದಿದೆ ಎಂಬ ದೂರು ಕೇಳಿಬಂದಿದೆ. ಹಾಗಾಗಿ, ಕಾಮಗಾರಿ ಗುಣಮಟ್ಟ ಕಾಪಾಡಲು ಸರ್ಕಾರ ಮುಂದಾಗಬೇಕು. ಉಳಿದಿರುವ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು. ತುಂಗಾ ನದಿಯಿಂದ ಭದ್ರೆಗೆ ನೀರು ಹರಿಸಬೇಕು. ಆ ಮೂಲಕ ತಾಲ್ಲೂಕಿನ ಎಲ್ಲಾ ಕೆರೆಗಳನ್ನು ತುಂಬಿಸುವ ಕೆಲಸ ಮಾಡಬೇಕು ಎಂದು ಭಗೀರಥ ಗುರುಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ ಆಗ್ರಹಿಸಿದರು.

ಬಯಲು ಸೀಮೆಗೆ ಭದ್ರಾ ಮೇಲ್ದಂಡೆ ಯೋಜನೆಯ ಅನುಷ್ಠಾನದ ಬಹುದಿನದ ಕನಸು ಈಡೇರುತ್ತಿರುವುದು ಸಂತಸ ತಂದಿದೆ. ಈ ಭಾಗದ ಬರಡು ಭೂಮಿಯನ್ನು ಶಾಶ್ವತವಾಗಿ ಹಸಿರಾಗಿಸಬೇಕಾದರೆ ಕಾಲುವೆಯಲ್ಲಿ ನೀರು ಹರಿಸುವ ಮೂಲಕ ರೈತರ ಜಮೀನಿಗೆ ನೀರು ಕೊಡಬೇಕು. ಆ ಮೂಲಕ ಅನ್ನದಾತನ ಬದುಕು ಹಸನಾಗಿಸಲು ಮುಂದಾಗಬೇಕು. ಬಾಕಿ ಉಳಿದಿರುವ ಈ ಸಾವಿರಾರು ಕೋಟಿ ವೆಚ್ಚದ ಈ ನೀರಾವರಿ ಯೋಜನೆಯ ಈ ಕಾಮಗಾರಿಯನ್ನು ಬೇಗನೆ ಪೂರ್ಣಗೊಳಿಸಲು ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸರ್ಕಾರ ಕಾಳಜಿ ವಹಿಸಬೇಕು ಎಂದು ಕೆಲ್ಲೋಡು ಕಾಗಿನೆಲೆ ಕನಕಗುರುಪೀಠ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT