ಭದ್ರಾ ಮೇಲ್ದಂಡೆ ನಾಲೆಗೆ ರೈತರ ಒಪ್ಪಿಗೆ

ಮಂಗಳವಾರ, ಮೇ 21, 2019
24 °C

ಭದ್ರಾ ಮೇಲ್ದಂಡೆ ನಾಲೆಗೆ ರೈತರ ಒಪ್ಪಿಗೆ

Published:
Updated:
Prajavani

ಚಿತ್ರದುರ್ಗ: ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳುವುದಕ್ಕೂ ಮುನ್ನವೇ ಭದ್ರಾ ಮೇಲ್ದಂಡೆ ನಾಲೆ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿದ್ದರಿಂದ ಆತಂಕಗೊಂಡಿದ್ದ ರೈತರು, ಕಾಮಗಾರಿ ಮುಂದುವರಿಸಲು ಒಪ್ಪಿಗೆ ಸೂಚಿಸಿದರು. ಕಾಮಗಾರಿ ಸುಗಮವಾಗಿ ಸಾಗಲು ಅವಕಾಶ ಮಾಡಿಕೊಡುವುದಾಗಿ ಭರವಸೆ ನೀಡಿದರು.

ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ನೇತೃತ್ವದಲ್ಲಿ ರೈತರು ಹಾಗೂ ಭದ್ರಾ ಮೇಲ್ದಂಡೆ ಯೋಜನೆ ಅಧಿಕಾರಿಗಳ ನಡುವೆ ಗುರುವಾರ ನಡೆದ ಸಭೆ ಯಶಸ್ವಿಯಾಯಿತು. ‘ಭೂಮಿ ಹೋದರೂ ಸರಿ, ನೀರು ಬರಲಿ’ ಎಂದು ರೈತರು ಒಕ್ಕೊರಲಿನ ಅಭಿಪ್ರಾಯ ಮಂಡಿಸಿದರು.

ಭದ್ರಾ ಮೇಲ್ದಂಡೆ ನಾಲೆ ನಿರ್ಮಾಣದ ಮೊದಲ ಹಂತದ ಕಾಮಗಾರಿ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಹಿರಿಯೂರು, ಚಿತ್ರದುರ್ಗ, ಚಳ್ಳಕೆರೆ ತಾಲ್ಲೂಕಿನಲ್ಲಿ ನಾಲೆ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಯೋಜನೆಯ 10, 11 ಹಾಗೂ 12ನೇ ಪ್ಯಾಕೇಜ್‌ ವ್ಯಾಪ್ತಿಯಲ್ಲಿ ಏಪ್ರಿಲ್‌ ಮೊದಲ ವಾರದಲ್ಲಿ ಕಾಮಗಾರಿ ಆರಂಭವಾಗಿದೆ. ಇದು ರೈತರು ಹಾಗೂ ಅಧಿಕಾರಿಗಳ ಜಟಾಪಟಿಗೆ ಕಾರಣವಾಗಿತ್ತು.

ನಾಲೆಗೆ ಗುರುತಿಸಿದ ಜಮೀನಿನ ಭೂಸ್ವಾಧೀನ ಪ್ರಕ್ರಿಯೆ ಇನ್ನೂ ಬಾಕಿ ಇದೆ. ಭೂಮಿಗೆ ಬೆಲೆ ಕೂಡ ನಿಗದಿ ಮಾಡಿಲ್ಲ. ಏಕಾಏಕಿ ಕಾಮಗಾರಿ ಆರಂಭಿಸಿ, ಸ್ಥಳ ಗುರುತು ಮಾಡಿದ್ದು ಭೂಮಿ ಕಳೆದುಕೊಳ್ಳುವ ರೈತರಲ್ಲಿ ಆತಂಕ ಮೂಡಿಸಿತ್ತು. ಹೀಗಾಗಿ, ಕಾಮಗಾರಿಗೆ ಕೆಲವು ರೈತರು ಅಡ್ಡಿಪಡಿಸಿದ್ದರು.

ಹೆಚ್ಚು ಪರಿಹಾರಕ್ಕೆ ಪಟ್ಟು: ನಾಲೆಗೆ 40 ಮೀಟರ್‌ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಇದರಲ್ಲಿ 20 ಮೀಟರ್‌ ಅಗಲ ನಾಲೆ ನಿರ್ಮಿಸಲಾಗುತ್ತದೆ. ಉಳಿದ ಸ್ಥಳದಲ್ಲಿ ಎರಡು ಬದಿ ಸರ್ವಿಸ್‌ ರಸ್ತೆ ನಿರ್ಮಾಣ ಮಾಡಲಾಗುತ್ತದೆ. ಸಣ್ಣ ಹಿಡುವಳಿದಾರರು ಹೆಚ್ಚು ನಷ್ಟ ಅನುಭವಿಸಲಿದ್ದು, ಆತಂಕಗೊಂಡಿದ್ದಾರೆ.

ಭೂಮಿ ಕಳೆದುಕೊಳ್ಳುವ ರೈತರಿಗೆ ನೀಡುವ ಪರಿಹಾರದ ಮೊತ್ತವನ್ನು ವೈಜ್ಞಾನಿಕವಾಗಿ ನಿಗದಿ ಮಾಡುವಂತೆ ರೈತರು ಸಭೆಯಲ್ಲಿ ಮನವಿ ಮಾಡಿದರು. ಭೂಸ್ವಾಧೀನ ಹಾಗೂ ಪರಿಹಾರ ನಿಗದಿಪಡಿಸುವ ಹೊಣೆ ಕಂದಾಯ ಇಲಾಖೆಯ ವ್ಯಾಪ್ತಿಗೆ ಬರುತ್ತದೆ ಎಂಬುದನ್ನು ನೀರಾವರಿ ಇಲಾಖೆಯ ಅಧಿಕಾರಿಗಳು ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದರು.

ಎರಡು ವರ್ಷದಲ್ಲಿ ಪೂರ್ಣ: ಹಿರಿಯೂರಿನಿಂದ ಆರಂಭವಾಗುವ ಪ್ಯಾಕೇಜ್‌ 10ರ ನಾಲೆ ಪಾಲವ್ವನಹಳ್ಳಿಯ ಮೂಲಕ ಚಿತ್ರದುರ್ಗ ತಾಲ್ಲೂಕಿನ ದೊಡ್ಡಸಿದ್ದವ್ವನಹಳ್ಳಿವರೆಗೆ ಬರಲಿದೆ. ಅಲ್ಲಿಂದ ಕುಂಚಿನಗನಾಳ್‌, ಗೋನೂರು, ದ್ಯಾಮವ್ವನಹಳ್ಳಿ ಮಾರ್ಗವಾಗಿ ಸಾಗುವ 13 ಕಿ.ಮೀ ನಾಲೆಯ ನಿರ್ಮಾಣವನ್ನು ಪ್ಯಾಕೇಜ್‌ 11ರ ಅಡಿಯಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ. ನೀತಿ ಸಂಹಿತೆ ಮುಕ್ತಾಯವಾದ ಬಳಿಕ ಈ ಕಾಮಗಾರಿ ಆರಂಭವಾಗುವ ಸಾಧ್ಯತೆ ಇದೆ.

ಗೋನೂರು, ಕಲ್ಲೇನಹಳ್ಳಿ, ಬೆಳಗಟ್ಟ, ಹಾಯ್ಕಲ್‌, ರಾಮಜೋಗಿಹಳ್ಳಿ ಮೂಲಕ ದ್ಯಾಮವ್ವನಹಳ್ಳಿಗೆ ಸೇರುವ 17 ಕಿ.ಮೀ ಉದ್ದದ ನಾಲೆಯನ್ನು ಪ್ಯಾಕೇಜ್‌ 12 ಎಂದು ಗುರುತಿಸಲಾಗಿದೆ. ಈ ವ್ಯಾಪ್ತಿಯ ಕಾಮಗಾರಿ ಏಪ್ರಿಲ್‌ನಲ್ಲಿ ಆರಂಭವಾಗಿದೆ. ಮುಂದಿನ 24 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಸರ್ಕಾರ ಗಡುವು ನೀಡಿದೆ. ಮೂರು ಪ್ಯಾಕೇಜ್‌ ಕಾಮಗಾರಿ ಏಕಕಾಲಕ್ಕೆ ಪೂರ್ಣಗೊಂಡರೆ ಮಾತ್ರ ಎರಡು ವರ್ಷದಲ್ಲಿ ಚಿತ್ರದುರ್ಗ ತಾಲ್ಲೂಕಿಗೆ ನೀರು ಬರಲಿದೆ. 

‘ಮಠದ ಕೆರೆ ತುಂಬಿಸಿ’: ಭದ್ರಾ ಮೇಲ್ದಂಡೆ ಯೋಜನೆಯ 12.86 ಟಿಎಂಸಿ ಅಡಿ ನೀರನ್ನು ಚಿತ್ರದುರ್ಗ ಜಿಲ್ಲೆಗೆ ಮೀಸಲಿಡಲಾಗಿದೆ. ಒಟ್ಟು 365 ಕೆರೆಗಳನ್ನು ಅರ್ಧದಷ್ಟು ತುಂಬಿಸಲಾಗುತ್ತದೆ. ಇದರಲ್ಲಿ ಚಿತ್ರದುರ್ಗ ತಾಲ್ಲೂಕಿನ 9 ಕೆರೆಗಳು ಸೇರಿವೆ.

ಮುರುಘಾ ಮಠದ ಅಕ್ಕಪಕ್ಕದ ಎರಡು ಕೆರೆಗಳನ್ನು ಈ ಯೋಜನೆಯಿಂದ ಹೊರಗಿಡಲಾಗಿದೆ. ಇದಕ್ಕೆ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಸಭೆಯಲ್ಲಿ ಅಸಮಾಧಾನ ಹೊರಹಾಕಿದರು.

‘ಮಲ್ಲಾಪುರ, ದ್ಯಾಮವ್ವನಹಳ್ಳಿ, ಗೋನೂರು, ಕೆಂಪಣ್ಣನಾಯಕ, ಕಲ್ಲಳ್ಳಿ, ದೊಡ್ಡಘಟ್ಟ, ಮುದ್ದಾಪುರ, ಕಾತರಾಳು ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಮಲ್ಲಾಪುರ ಕೆರೆಯಿಂದ ಮಠದ ಕೆರೆಗಳಿಗೆ ನೀರು ತರಲು ಸಾಧ್ಯವಿದೆ. ಮಠದ ಕೆರೆಗಳಿಗೂ ಭದ್ರಾ ನೀರು ಹರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು’ ಎಂದು ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ತಿಳಿಸಿದರು.

ಅಚ್ಚುಕಟ್ಟು ಪ್ರದೇಶ ಸಮೀಕ್ಷೆ: ನಾಲೆಯ ಅಚ್ಚುಕಟ್ಟು ಪ್ರದೇಶವನ್ನು ಗುರುತಿಸಲು ನೀರಾವರಿ ಇಲಾಖೆ ಸಮೀಕ್ಷೆ ಕೈಗೆತ್ತಿಕೊಂಡಿದೆ. ತರೀಕರೆ ಹಾಗೂ ಹೊಸದುರ್ಗ ತಾಲ್ಲೂಕಿನಲ್ಲಿ ಈ ಸಮೀಕ್ಷೆ ಕಾರ್ಯ ನಡೆಯುತ್ತಿದೆ ಎಂದು ಭದ್ರಾ ಮೇಲ್ದಂಡೆ ಯೋಜನೆಯ ಚಿತ್ರದುರ್ಗ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ಪರಮೇಶ್ವರಪ್ಪ ಮಾಹಿತಿ ನೀಡಿದರು.

‘ನಾಲೆಯ ಎರಡು ಬದಿಯಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತದೆ. ಹನಿ ನೀರಾವರಿ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಜಾಕ್‌ವೆಲ್‌ ಮೂಲಕ ನೀರು ಪಂಪ್‌ ಮಾಡಿ ಜಮೀನಿಗೆ ನೀಡಲಾಗುತ್ತದೆ. ನಾಲೆ ನಿರ್ಮಾಣ ಕಾರ್ಯ ಪೂರ್ಣಗೊಂಡ ಬಳಿಕ ಚಿತ್ರದುರ್ಗ ಹಾಗೂ ಹಿರಿಯೂರು ತಾಲ್ಲೂಕಿನ ಅಚ್ಚುಕಟ್ಟು ಪ್ರದೇಶ ಗುರುತಿಸಲಾಗುವುದು’ ಎಂದು ವಿವರಿಸಿದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !