ಭದ್ರಾವತಿ: ‘ಇಂದು ನಾವು ಕಲಿಯುತ್ತಿರುವ ಇತಿಹಾಸ ರಾಜಕೀಯ ಪ್ರಭುಗಳ ಕೃಪಾಕಟಾಕ್ಷಕ್ಕಾಗಿ ಓಲೈಕೆಗಾಗಿ ತಿರುಚಿ ಬರೆದ ಇತಿಹಾಸ. ದೇಶದ ನೈಜ ಇತಿಹಾಸವನ್ನು ಇಂದಿನ ಪೀಳಿಗೆಗೆ ತಿಳಿಸಬೇಕಿದೆ’ ಎಂದು ಇತಿಹಾಸಕಾರ ಟಿ.ಎನ್. ಸ್ವಾಮಿ ಹೇಳಿದರು.
ನಗರದ ಗಾಂಧಿನಗರ ತರುಣ ಭಾರತಿ ಶಾಲೆಯಲ್ಲಿ ಪ್ರೇರಣಾ ಸಂಸ್ಥೆಯಿಂದ ಈಚೆಗೆ ಏರ್ಪಡಿಸಿದ್ದ ‘ಭಾರತ ದರ್ಶನ’ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
‘ಸನಾತನ ದೇಶದಲ್ಲಿ ಪ್ರತಿಯೊಂದು ವಸ್ತುಗಳು, ಸ್ಥಳಗಳು ಐತಿಹಾಸಿಕವಾಗಿ ತನ್ನದೇ ಆದ ಮಹತ್ವ ಹೊಂದಿದೆ. ಆದರೆ ಅದರ ಮಹತ್ವವನ್ನು ನೈಜವಾಗಿ ತಿಳಿಯದೆ, ವಿದೇಶಿಗರು ತಿಳಿಸಿದ ಮಾಹಿತಿಯನ್ನು ನಿಜವೆಂದು ನಂಬಿ, ಅದೇ ಪ್ರಾಮುಖ್ಯ ಎಂದು ಮಾನ್ಯ ಮಾಡಿ, ಅದನ್ನು ಅನುಸರಿಸುತ್ತಿರುವುದು ದೇಶದ ದೌರ್ಭಾಗ್ಯ’ ಎಂದರು.
‘ನಾವು ಧಾರ್ಮಿಕ ಕ್ಷೇತ್ರಗಳ ಪ್ರಾಮುಖ್ಯ ಅರಿಯದೆ ಪ್ರವಾಸೋದ್ಯಮ ಎಂದು ಪರಿಗಣಿಸುವ ಕಾರಣ ಭವಿಷ್ಯದಲ್ಲಿ ಅದರ ಮಹತ್ವ ನಶಿಸುತ್ತದೆ. ಇದಕ್ಕೆ ತಾಜಾ ಉದಾಹರಣೆ ಗೋವಾ, ಗೋಕರ್ಣ ಕ್ಷೇತ್ರಗಳು’ ಎಂದರು.
‘ನಮ್ಮ ಸಂತರು, ಋಷಿಮುನಿಗಳು, ಮಹರ್ಷಿಗಳು, ಆಚಾರ್ಯರು ನಾಡಿಗೆ ತಮ್ಮದೇ ಆದ ಸಂಶೋಧನೆಗಳು ಕೊಡುಗೆಗಳನ್ನು ನೀಡಿದ್ದಾರೆ. ಆದರೆ ಅವರ ಕೊಡುಗೆ ವೈಜ್ಞಾನಿಕ ಎಂದು ಪರಿಗಣಿಸಿದ ಕಾರಣ ವಿದೇಶಿ ಸರಕನ್ನೇ ಮಾನ್ಯ ಮಾಡುತ್ತಿದ್ದೇವೆ’ ಎಂದರು.
ಉಪನ್ಯಾಸಕರಾದ ಮಂಗಳ ಗೌರಿ, ಯೋಗೇಶ್, ತರಣ ಭಾರತಿ ವಿದ್ಯಾ ಕೇಂದ್ರದ ಕಾರ್ಯದರ್ಶಿಯಾದ ಗಿರೀಶ್, ಎಸ್.ಎನ್.ಸುಭಾಷ್, ಮಧುಕರ್, ರಾಮಚಂದ್ರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.