ಬಂದ್‌ಗೆ ಕೋಟೆನಾಡು ಚಿತ್ರದುರ್ಗ ಬಹುತೇಕ ಸ್ತಬ್ಧ

4
ಭಣಗುಡುತ್ತಿದ್ದ ಬಸ್‌ ನಿಲ್ದಾಣ * ಜನ, ವಾಹನ ದಟ್ಟಣೆ ವಿರಳ

ಬಂದ್‌ಗೆ ಕೋಟೆನಾಡು ಚಿತ್ರದುರ್ಗ ಬಹುತೇಕ ಸ್ತಬ್ಧ

Published:
Updated:
Deccan Herald

ಚಿತ್ರದುರ್ಗ: ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಏರಿಕೆಯನ್ನು ವಿರೋಧಿಸಿ ಕಾಂಗ್ರೆಸ್‌ ಸೋಮವಾರ ಕರೆ ನೀಡಿದ್ದ ಬಂದ್‌ಗೆ ಜನಸ್ಪಂದನೆ ಸಿಕ್ಕಿದ್ದು, ಜಿಲ್ಲೆ ಬಹುತೇಕ ಸ್ತಬ್ಧಗೊಂಡಿತ್ತು. ಆಟೊ ಸಂಚಾರ ಸ್ಥಗಿತಗೊಳಿಸಲು ಚಾಲಕರ ಮೇಲೆ ಪ್ರತಿಭಟನಾಕಾರರು ಒತ್ತಡ ಹೇರಿದ್ದನ್ನು ಹೊರತುಪಡಿಸಿ ಜಿಲ್ಲೆಯಲ್ಲಿ ಬಂದ್‌ ಶಾಂತಿಯುತವಾಗಿತ್ತು.

ಸಾರಿಗೆ ಹಾಗೂ ಖಾಸಗಿ ಬಸ್‌ಗಳು ಸಂಜೆಯವರೆಗೂ ರಸ್ತೆಗೆ ಇಳಿಯಲಿಲ್ಲ. ಸರಕು ಸಾಗಣೆ ವಾಹನಗಳು ಸಂಚಾರ ಸ್ಥಗಿತಗೊಳಿಸಿದ್ದವು. ಶಾಲಾ–ಕಾಲೇಜುಗಳು ಬಾಗಿಲು ಮುಚ್ಚಿದ್ದವು. ಸರ್ಕಾರಿ ಕಚೇರಿಗಳು ಬಾಗಿಲು ತೆರೆದಿದ್ದವಾದರೂ ಜನರಿಲ್ಲದೇ ಭಣಗುಡುತ್ತಿದ್ದವು. ರಸ್ತೆ ಬದಿಯ ಅಂಗಡಿಗಳನ್ನು ಹೊರತುಪಡಿಸಿ ಮಾರುಕಟ್ಟೆ ವಹಿವಾಟು ಬಹುತೇಕ ಸ್ಥಗಿತಗೊಂಡಿತ್ತು.

ಸಂತೆಪೇಟೆ, ಬಿ.ಡಿ.ರಸ್ತೆ, ಹೊಳಲ್ಕೆರೆ ರಸ್ತೆ ಸೇರಿದಂತೆ ನಗರದ ವಿವಿಧೆಡೆ ಅಂಗಡಿಗಳು ಬಾಗಿಲು ಮುಚ್ಚಿದ್ದವು. ಔಷಧ, ಹಾಲಿನ ಮಳಿಗೆಗಳು ಮಾತ್ರ ಅಲ್ಲಲ್ಲಿ ತೆರೆದಿದ್ದವು. ತರಕಾರಿ, ಹೂ ಹಾಗೂ ಹಣ್ಣಿನ ಮಾರಾಟಕ್ಕೆ ಅವಕಾಶ ನೀಡಲಾಗಿತ್ತು. ಗ್ರಾಹಕರಿಲ್ಲದೇ ಮಾರುಕಟ್ಟೆಯೂ ಭಣಗುಡುತ್ತಿತ್ತು. ವಾಹನ ಹಾಗೂ ಜನದಟ್ಟಣೆ ತೀರಾ ವಿರಳವಾಗಿತ್ತು. ಬೇರೆಡೆಯಿಂದ ನಗರಕ್ಕೆ ಬಂದ ಪ್ರಯಾಣಿಕರು ಬಸ್‌್ ಸೌಲಭ್ಯವಿಲ್ಲದೇ ಪರದಾಡಿದರು.

ಬಹುತೇಕ ಹೋಟೆಲುಗಳು ಬಾಗಿಲು ಮುಚ್ಚಿದ್ದವು. ಬೀದಿ ಬದಿಯ ಹೋಟೆಲುಗಳು ಮಾತ್ರ ಜನರಿಗೆ ಆಸರೆಯಾಗಿದ್ದವು. ನಗರದಲ್ಲಿರುವ ಎರಡು ‘ಇಂದಿರಾ ಕ್ಯಾಂಟೀನ್‌’ ಎಂದಿನಂತೆ ಕಾರ್ಯನಿರ್ವಹಿಸಿದವು. ಚಿತ್ರಮಂದಿರಗಳು ಬೆಳಗಿನ ಪ್ರದರ್ಶನವನ್ನು ರದ್ದುಗೊಳಿಸಿದ್ದವು. ಚಿತ್ರಮಂದಿರಗಳು ಮಧ್ಯಾಹ್ನ ಪುನರಾರಂಭಗೊಂಡರೂ ವೀಕ್ಷಕರ ಸಂಖ್ಯೆ ವಿರಳವಾಗಿತ್ತು.

ಕಾಂಗ್ರೆಸ್‌ ಕಾರ್ಯಕರ್ತರು ಬೆಳಿಗ್ಗೆ 6 ಗಂಟೆಗೆ ಬೀದಿಗೆ ಇಳಿದಿದ್ದರು. ಪಕ್ಷದ ಭಾವುಟಗಳನ್ನು ಹಿಡಿದು ದ್ವಿಚಕ್ರ ವಾಹನಗಳಲ್ಲಿ ಸಂಚರಿಸಿದರು. ಬಂದ್‌ ಬೆಂಬಲಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು. ಮುನ್ನೆಚ್ಚರಿಕೆಯ ಕ್ರಮವಾಗಿ ನಗರದ ಎಲ್ಲೆಡೆ ಪೊಲೀಸರನ್ನು ನಿಯೋಜಿಸಲಾಗಿತ್ತು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀನಾಥ್‌ ಎಂ.ಜೋಶಿ ಹಲವು ರಸ್ತೆಗಳಲ್ಲಿ ಕಾಲ್ನಡಿಗೆಯಲ್ಲಿ ಸಾಗಿ ಜನರಲ್ಲಿ ಧೈರ್ಯ ತುಂಬಿದರು.

ಸಂಚಾರ ಸ್ಥಗಿತಗೊಳಿಸಿದ ಸಾರಿಗೆ ಸಂಸ್ಥೆಯ ಬಸ್‌ಗಳು ಪೊಲೀಸರ ಭದ್ರತೆಯಲ್ಲಿ ಡಿಪೊಗಳಿಗೆ ತೆರಳಿದವು. ಹರತಾಳಕ್ಕೆ ಬೆಂಬಲ ಸೂಚಿಸಿದ ಖಾಸಗಿ ಬಸ್‌್ ಮಾಲೀಕರು, ಬೆಳಿಗ್ಗೆಯಿಂದಲೇ ಬಸ್‌ ಸಂಚಾರ ಮೊಟಕುಗೊಳಿಸಿದ್ದರು. ಭಾರಿ ವಾಹನಗಳು ನಗರ ಪ್ರವೇಶಿಸದಂತೆ ಪೊಲೀಸರು ನಿರ್ಬಂಧ ವಿಧಿಸಿದ್ದರು. ಕಾರು, ಆಟೊ ಹಾಗೂ ದ್ವಿಚಕ್ರ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು. ಸರ್ಕಾರಿ ಆಸ್ಪತ್ರೆ, ಖಾಸಗಿ ನರ್ಸಿಂಗ್‌ ಹೋಮ್‌ಗಳು ರೋಗಿಗಳಿಗೆ ಚಿಕಿತ್ಸೆ ನೀಡಿದವು. ಕ್ಲಿನಿಕ್‌ಗಳು ಮಾತ್ರ ಬಾಗಿಲು ಮುಚ್ಚಿದ್ದವು.

ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಎಂದಿನಂತಿತ್ತು. ವಾಹನ ತಡೆಯಲು ಪೊಲೀಸರು ಅವಕಾಶ ನೀಡಲಿಲ್ಲ. ಜೈಹಿಂದ್‌ ರಕ್ಷಣಾ ವೇದಿಕೆಯ ಕಾರ್ಯಕರ್ತರೊಬ್ಬರು ಪೊಲೀಸರ ಕಣ್ಣು ತಪ್ಪಿಸಿ ರಾಷ್ಟ್ರೀಯ ಹೆದ್ದಾರಿ–4ರಲ್ಲಿ ಟೈರಿಗೆ ಬೆಂಕಿ ಹಾಕಿದರು. ತಕ್ಷಣ ಜಾಗೃತರಾದ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಬೆಂಕಿ ನಂದಿಸಿದರು.

ಗಾಂಧಿ ವೃತ್ತದಲ್ಲಿ ಜಮಾಯಿಸಿದ ಕಾಂಗ್ರೆಸ್‌ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ‘ಮೋದಿ ಡೌನ್‌ ಡೌನ್‌’, ‘ಬಿಜೆಪಿ ತೊಲಗಿಸಿ’ ಎಂಬ ಘೋಷಣೆಗಳನ್ನು ಕೂಗಿದರು. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಫಾತ್ಯರಾಜನ್‌ ನೇತೃತ್ವದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಸಂಸದ ಬಿ.ಎನ್‌.ಚಂದ್ರಪ್ಪ ಹಾಗೂ ಮಾಜಿ ಸಚಿವ ಎಚ್‌.ಆಂಜನೇಯ ನೇತೃತ್ವದಲ್ಲಿ ಸಾಗುತ್ತಿದ್ದ ಮೆರವಣಿಗೆಯನ್ನು ಜೆಡಿಎಸ್ ಮುಖಂಡರು ಸೇರಿಕೊಂಡರು. ಬಿ.ಡಿ.ರಸ್ತೆಯಲ್ಲಿ ಸಾಗಿದ ಮೆರವಣಿಗೆ ಪ್ರವಾಸಿ ಮಂದಿರದ ಮೂಲಕ ಜಿಲ್ಲಾಧಿಕಾರಿ ಕಚೇರಿ ವೃತ್ತ ತಲುಪಿತು. ಮಾನವ ಸರಪಳಿ ನಿರ್ಮಿಸಿ ತೈಲ ಬೆಲೆ ಏರಿಕೆಯನ್ನು ಒಕ್ಕೋರಲಿನಿಂದ ವಿರೋಧಿಸಿದರು. ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಕಾಂತರಾಜ್‌ ಆಟೊ ಓಡಿಸುವ ಮೂಲಕ ಗಮನ ಸೆಳೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !