ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಜಲಿಂಗಪ್ಪ ಹೋರಾಟಕ್ಕೆ ಬಲತುಂಬಿದ ‘ಭೀಮ’

ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಈಚಲು ಮರದ ಚಳವಳಿ
Last Updated 13 ಆಗಸ್ಟ್ 2022, 3:47 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಆಗಷ್ಟೇ ನಾನು ಪ್ರೌಢಶಾಲೆಯ ಮೆಟ್ಟಿಲು ತುಳಿದಿದ್ದೆ. ಈಚಲು ಮರದ ವಿರುದ್ಧ ತುರುವನೂರು ಸುತ್ತ ಚಳವಳಿ ಭುಗಿಲೆದ್ದಿತು. ಎಸ್‌.ನಿಜಲಿಂಗಪ್ಪ ಅವರ ಮಾತುಗಳು ಹೋರಾಟದತ್ತ ಆಕರ್ಷಿಸಿದವು. ಸೆರೆವಾಸ, ಗಡಿಪಾರು ಶಿಕ್ಷೆ ಕೂಡ ನನ್ನೊಳಗಿನ ಸ್ವಾತಂತ್ರ್ಯದ ಕನಸನ್ನು ಹೊಸಕಿಹಾಕಲು ಸಾಧ್ಯವಾಗಲಿಲ್ಲ..’

ಹೀಗೆ ಸ್ವಾತಂತ್ರ್ಯಹೋರಾಟದ ನೆನಪಿನ ಪುಟಗಳನ್ನು ತಿರುವಿ ಹಾಕಿದವರು ಕೂನಬೇವು ಗ್ರಾಮದ ಎನ್‌.ಭೀಮಪ್ಪ. 94 ವರ್ಷದ ಭೀಮಪ್ಪ ಸ್ವಾತಂತ್ರ್ಯ ಚಳವಳಿಗೆ ಧುಮುಕಿದಾಗ 16 ವರ್ಷದ ಬಾಲಕ. ಭೌತವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಪದವಿಪೂರ್ವ ಕಾಲೇಜು ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ.

‘ಕ್ವಿಟ್‌ ಇಂಡಿಯಾ’ ಚಳವಳಿಗೆ ಮಹಾತ್ಮ ಗಾಂಧೀಜಿ ಕರೆ ನೀಡುತ್ತಿದ್ದಂತೆ ದೇಶದ ಎಲ್ಲೆಡೆ ಬ್ರಿಟಿಷರ ವಿರುದ್ಧ ಆಕ್ರೋಶ ಕಟ್ಟೆಯೊಡೆಯಿತು. ಅಲ್ಲಲ್ಲಿ ಹೋರಾಟಗಳು ಭುಗಿಲೆದ್ದವು. ಚಿತ್ರದುರ್ಗ ತಾಲ್ಲೂಕಿನ ತುರುವನೂರು ಸುತ್ತ ಈಚಲು ಮರ ಕಡಿದುಹಾಕಲು ಜನರು ದಂಗೆ ಎದ್ದರು. ಹೆಂಡದ ವಿರುದ್ಧದ ಚಳವಳಿಯ ನೇತೃತ್ವ ವಹಿಸಿದವರಲ್ಲಿ ಎಸ್‌.ನಿಜಲಿಂಗಪ್ಪ ಪ್ರಮುಖರು. ಅವರ ಭಾಷಣ, ಹೋರಾಟದ ಬದ್ಧತೆ ಎನ್‌. ಭೀಮಪ್ಪ ಅವರನ್ನು ಸೆಳೆಯಿತು.

‘ಮಾಧ್ಯಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ನಿಜಲಿಂಗಪ್ಪ ಅವರು ತುರುವನೂರಿಗೆ ಭೇಟಿ ನೀಡಿದ್ದರು. ಆಂಜನೇಯಸ್ವಾಮಿ ದೇಗುಲದ ಬಳಿ ಭಾಷಣ ಮಾಡಿದರು. ಅದೂವರೆಗೂ ದೇಶದ ವಿದ್ಯಮಾನಗಳ ಬಗ್ಗೆ ಅಷ್ಟಾಗಿ ಅರಿವಿರಲಿಲ್ಲ. ಅವರ ಭಾಷಣ ಕೇಳಿದ ಬಳಿಕ ಬ್ರಿಟಿಷರ ವಿರುದ್ಧ ಹೋರಾಟ ಮಾಡುವ ಸಂಕಲ್ಪ ಮಾಡಿದೆ. ಸಹಪಾಠಿಗಳೆಲ್ಲ ನಿಜಲಿಂಗಪ್ಪ ಅವರ ಬೆಂಬಲಕ್ಕೆ ನಿಂತೆವು’ ಎಂದು ಸ್ಮರಿಸಿಕೊಂಡರು ಭೀಮಪ್ಪ.

‘ಅರಣ್ಯ ಸತ್ಯಾಗ್ರಹಕ್ಕೆ ಕರೆ ನೀಡಲಾಯಿತು. ದೊಡ್ಡಘಟ್ಟದ ಬಳಿ ಈಚಲು ಮರಗಳನ್ನು ಕಡಿದುಹಾಕಿದೆವು. ಪೊಲೀಸರು ಧಾವಿಸಿ ಪ್ರಮುಖ ನಾಯಕರನ್ನು ಬಂಧಿಸಿ ಜೈಲಿಗೆ ಕಳುಹಿಸಿದರು. ಅಪ್ರಾಪ್ತರಾಗಿದ್ದ ಕಾರಣಕ್ಕೆ ನನ್ನನ್ನೂ ಸೇರಿದಂತೆ ಇನ್ನೂ ಕೆಲವರನ್ನು ಠಾಣೆಯಲ್ಲಿ ಇಟ್ಟುಕೊಂಡು. ಒಂದು ದಿನ ಲಾಕಪ್‌ಗೆ ಹಾಕಿ ಮರುದಿನ ಬಿಡುಗಡೆ ಮಾಡಿದರು’ ಎಂದು ನೆನಪಿಸಿಕೊಂಡರು.

ಲಾಕಪ್‌ನಿಂದ ಬಿಡುಗಡೆ ಮಾಡುವಂತೆ ಭೀಮಪ್ಪ ಅವರು ಉಪವಾಸ ಸತ್ಯಾಗ್ರಹ ಮಾಡಿದ್ದರು. ಲಾಠಿ ಏಟು ನೀಡಿದರೂ ಚಳವಳಿಯ ಬಗೆಗಿನ ಬದ್ಧತೆ ತೊಡೆದುಹಾಕಲು ಪೊಲೀಸರಿಗೆ ಸಾಧ್ಯವಾಗಲಿಲ್ಲ. ಕೂನಬೇವಿಗೆ ಮರಳಿ ಜನರನ್ನು ಒಗ್ಗೂಡಿಸಿದರು. ನಿಜಲಿಂಗಪ್ಪ ಅವರು ಮಾಡಿದ ಭಾಷಣದಿಂದ ಸ್ಫೂರ್ತಿಗೆ ಒಳಗಾದ ಜನರು, ಈಚಲು ಮರದ ಹನನಕ್ಕೆ ಮತ್ತೆ ಮುಂದಾದರು. ಆಗ ದಾಳಿ ನಡೆಸಿದ ಪೊಲೀಸರು ಮತ್ತೆ ಬಂಧಿಸಿದರು. ಇದರಿಂದ ಕುಪಿತಗೊಂಡ ಜನರು ತುರುವನೂರು ಠಾಣೆಗೆ ಬೆಂಕಿ ಹಾಕಿದರು. ಬ್ರಿಟಿಷರ ವಿರುದ್ಧ ಮಹಿಳೆಯರು ಆಕ್ರೋಶಗೊಂಡ ಪರಿಕಂಡು ಪೊಲೀಸರು ಅಸಹಾಯಕರಾಗಿದ್ದರು.

‘ಚಿತ್ರದುರ್ಗದಲ್ಲಿ ಧ್ವಜ ಸತ್ಯಾಗ್ರಹ ನಡೆಸುತ್ತಿದ್ದಾಗ ಪೊಲೀಸರು ಗೋಲಿಬಾರ್‌ ಮಾಡಿದರು. ಆಗ ಒಬ್ಬ ಹೋರಾಟಗಾರ ಹುತಾತ್ಮರಾದರು. ನಮ್ಮನ್ನು ಬಂಧಿಸಿ ಪಾವಗಡಕ್ಕೆ ಗಡಿಪಾರು ಮಾಡಲಾಯಿತು. ಅಲ್ಲಿಂದ ಪರಶುರಾಂಪುರ ಮಾರ್ಗವಾಗಿ ಊರಿಗೆ ಮರಳುವಾಗ ಜನರಲ್ಲಿ ಸ್ವಾತಂತ್ರ್ಯದ ಕಿಡಿ ಹೊತ್ತಿಸಿದೆವು. ಪರಶುರಾಂಪುರ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದೆವು. ಚಳ್ಳಕೆರೆ ತಾಲ್ಲೂಕು ಕಚೇರಿಯ ಮೇಲೆ ತ್ರಿವರ್ಣ ಧ್ವಜ ಹಾರಿಸಿ ಮತ್ತೆ ಪೊಲೀಸರಿಗೆ ಸೆರೆಯಾದೆವು’ ಎನ್ನುವಾಗ ಅವರ ಕಣ್ಣುಗಳಲ್ಲಿ ಸ್ವಾತಂತ್ರ್ಯದ ಕಿಚ್ಚು ಇಣುಕುತ್ತಿತ್ತು.

‘ಚಿತ್ರದುರ್ಗ ಜೈಲಿನಲ್ಲಿ ಸ್ಥಳಾವಕಾಶ ಇರದಿರುವ ಕಾರಣಕ್ಕೆ ಎಂಟು ದಿನ ಠಾಣೆಯ ಲಾಕಪ್‌ನಲ್ಲೇ ಇಡಲಾಯಿತು. ವಾರದ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಅಪ್ರಾಪ್ತನಾಗಿದ್ದ ನನ್ನನ್ನು ಕಂಡು ನ್ಯಾಯಾಧೀಶರು ಮನೆಗೆ ತೆರಳುವಂತೆ ಸೂಚಿಸಿ, ಉಳಿದವರನ್ನು ಜೈಲಿಗೆ ಕಳುಹಿಸುವುದಾಗಿ ಹೇಳಿದರು. ನಾನು ಮನೆಗೆ ಮರಳುವುದಿಲ್ಲವೆಂದು ಸ್ಪಷ್ಟವಾಗಿ ಹೇಳಿದಾಗ ನನ್ನನ್ನೂ ಜೈಲಿಗೆ ಹಾಕಲಾಯಿತು. ಸೆರೆಮನೆ ಸೇರಿದ ಮೂರು ತಿಂಗಳ ಬಳಿಕ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು. ನಾನು ಮನೆಗೆ ಮರಳಿ ಶಿಕ್ಷಣ ಮುಂದುವರಿಸಿದೆ’ ಎಂದು ಭಾವೋದ್ವೇಗಕ್ಕೆ ಒಳಗಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT