ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಎಂದರೆ ಗ್ಯಾರಂಟಿ: ಬಿಎಸ್‌ವೈ

ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ರೋಡ್ ಶೋ
Last Updated 21 ಮಾರ್ಚ್ 2023, 5:34 IST
ಅಕ್ಷರ ಗಾತ್ರ

ಹಿರಿಯೂರು: ‘ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೆ 10 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ನೀಡಲಾಗುವುದು. ಬಿಜೆಪಿ ಎಂದರೆ ಗ್ಯಾರಂಟಿ, ಗ್ಯಾರಂಟಿ ಎಂದರೆ ಬಿಜೆಪಿ’ ಎಂದು ಪಕ್ಷದ ಸಂಸದೀಯ ಮಂಡಳಿಯ ಸದಸ್ಯ ಬಿ.ಎಸ್. ಯಡಿಯೂರಪ್ಪ ಹೇಳಿದರು.

ನಗರದಲ್ಲಿ ಸೋಮವಾರ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ರೋಡ್ ಶೋನಲ್ಲಿ ಭಾಗವಹಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ಬಿಜೆಪಿ ರೈತರ ಸರ್ಕಾರವಾಗಿದ್ದು, ಪ್ರತಿ ರೈತರಿಗೆ ₹ 5 ಲಕ್ಷದವರೆಗೆ ಸಾಲ ನೀಡಲಾಗುವುದು. ಮನೆ ಮನೆಗೆ ಉಚಿತ ನೀರು, ಉಜ್ವಲ ಗ್ಯಾಸ್ ಯೋಜನೆ, ಶೌಚಾಲಯ, ರಸ್ತೆಗಳ ಅಭಿವೃದ್ಧಿ ಕೆಲಸಗಳನ್ನು ಈಗಾಗಲೇ ಮಾಡಲಾಗಿದೆ. ಹಿರಿಯೂರು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿರುವ ಪಕ್ಷದ ಅಭ್ಯರ್ಥಿ ಪೂರ್ಣಿಮಾ ಶ್ರೀನಿವಾಸ ಅವರನ್ನು ಗೆಲ್ಲಿಸಿ’ ಎಂದರು.

ಕಾಂಗ್ರೆಸ್‌ನಿಂದ ಅನ್ಯಾಯ: ಬಿಎಎಸ್‌ವೈ ನೇತೃತ್ವದ ಬಿಜೆಪಿ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಯಿಂದ ವಾಣಿ ವಿಲಾಸ ಸಾಗರಕ್ಕೆ 5 ಟಿಎಂಸಿ ಅಡಿ ನೀರನ್ನು ಹಂಚಿಕೆ ಮಾಡಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಇದನ್ನು ಬರೀ ಎರಡು ಟಿಎಂಸಿ ಅಡಿ ನೀರಿಗೆ ಇಳಿಸಿ ತಾಲ್ಲೂಕಿನ ಜನತೆಗೆ ಅನ್ಯಾಯ ಮಾಡಿದೆ’ ಎಂದು ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ವಾಗ್ದಾಳಿ ನಡೆಸಿದರು.

‘ಕ್ಷೇತ್ರದಲ್ಲಿ ಐದು ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಕೈಗೊಂಡು ಮತದಾರರ ಋಣ ತೀರಿಸಿದ್ದೇನೆ. ₹ 25 ಕೋಟಿ ವೆಚ್ಚದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ, ಐತಿಹಾಸಿಕ ಧರ್ಮಪುರ ಕೆರೆ ಸೇರಿದಂತೆ ಹೋಬಳಿಯ 7 ಕೆರೆಗಳಿಗೆ ನೀರು ತುಂಬಿಸುವ ಯೋಜನೆ, ಹುಳಿಯಾರು ರಸ್ತೆ ವಿಸ್ತರಣೆ, ಬಸ್ ಡಿಪೊ, ಚೆಕ್ ಡ್ಯಾಂ ನಿರ್ಮಾಣ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ’ ಎಂದರು.

‘ರಾಜ್ಯ ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಮತ ಕೇಳಲು ಬಂದಿದ್ದೇವೆ. ಕಿಸಾನ್ ಸಮ್ಮಾನ್ ಯೋಜನೆಯ ಅಡಿ 10,000 ಅನುದಾನ ನೀಡಲಾಗಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ₹ 5,300 ಕೋಟಿ ಅನುದಾನ ನೀಡಲಾಗಿದೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.

‘ಯಾವ ಕ್ಷೇತ್ರ, ಯಾರಿಗೆ ಎನ್ನುವ ಗ್ಯಾರಂಟಿ ಇಲ್ಲದ ಕಾಂಗ್ರೆಸ್ಸಿವರು ಜನರಿಗೆ ಗ್ಯಾರಂಟಿ ಕಾರ್ಡ್ ಕೊಡಲು ಹೊರಟಿದ್ದಾರೆ’ ಎಂದು ವ್ಯಂಗ್ಯವಾಡಿದರು.

ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ, ಮುಖಂಡರಾದ ಸಿದ್ದೇಶ್ ಯಾದವ್, ಎನ್.ಆರ್. ಲಕ್ಷ್ಮೀಕಾಂತ್, ಬಿಜೆಪಿ ಜಿಲ್ಲಾಧ್ಯಕ್ಷ ಎ. ಮುರಳಿ, ಎಸ್. ಲಿಂಗಮೂರ್ತಿ, ಡಿ.ಟಿ. ಶ್ರೀನಿವಾಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT