ಶುಕ್ರವಾರ, ಸೆಪ್ಟೆಂಬರ್ 17, 2021
22 °C
ಸ್ವಾವಲಂಬಿಗಳಾದರೆ ನಿಮ್ಮನ್ನು ಯಾರು ಕೀಳಾಗಿ ಕಾಣಲಾರರು: ಸಚಿವ ಎ.ನಾರಾಯಣಸ್ವಾಮಿ

ಚಿತ್ರದುರ್ಗ: ತೃತೀಯ ಲಿಂಗಿಗಳಿಗೆ ಬಿಜೆಪಿಯಿಂದ ಬಾಗಿನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಬಿಜೆಪಿ ಮಹಿಳಾ ಜಿಲ್ಲಾ ಘಟಕದ ಕಾರ್ಯಕರ್ತೆಯರು ಗುರುವಾರ ತೃತೀಯ ಲಿಂಗಿಗಳಿಗೆ ಬಾಗಿನ ಸಮರ್ಪಿಸಿದರು.

ಪಕ್ಷದ ಜಿಲ್ಲಾ ಘಟಕದ ಕಚೇರಿ ಆವರಣದಲ್ಲಿ ಗೌರಿ ಗಣೇಶ ಹಬ್ಬದ ಅಂಗವಾಗಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ತೃತೀಯ ಲಿಂಗಿಗಳು ಬಹು ಉತ್ಸಾಹದಿಂದಲೇ ಭಾಗವಹಿಸಿದ್ದರು.

ಕಾಯಕದ ಮಹತ್ವಕ್ಕೆ ಹೆಚ್ಚು ಒತ್ತು ನೀಡಿ ದುಡಿದು ಬದುಕುವುದನ್ನು ಮೈಗೂಡಿಸಿಕೊಂಡರೆ ಯಾರೂ ನಿಮ್ಮನ್ನು ಕೀಳಾಗಿ ಕಾಣಲು ಸಾಧ್ಯವಿಲ್ಲ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಸಲಹೆ ನೀಡಿದರು.

‘ತೃತೀಯ ಲಿಂಗಿಗಳಿಗೆ ಭಿಕ್ಷಾಟನೆ ಎಂಬುದು ಮುಖ್ಯ ವೃತ್ತಿಯಲ್ಲ. ಜೀವನಕ್ಕೆ ಪರ್ಯಾಯ ಮಾರ್ಗವೂ ಅಲ್ಲ. ಸ್ವ-ಉದ್ಯೋಗ ಮಾಡಲು ಇಚ್ಛಿಸಿದರೆ ತರಬೇತಿ ಜತೆಗೆ ಸಾಲ ಮತ್ತು ಮೂಲಸೌಲಭ್ಯ ಸರ್ಕಾರದಿಂದ ಒದಗಿಸುತ್ತೇವೆ’ ಎಂದ ಅವರು, ‘ವಸತಿ ಸೌಲಭ್ಯಕ್ಕಾಗಿ ಬೇಡಿಕೆ ಇಟ್ಟಿದ್ದೀರಿ. ಪಟ್ಟಿ ಸಿದ್ಧಪಡಿಸಿ ಜಿಲ್ಲಾಧಿಕಾರಿಗೆ ಸಲ್ಲಿಸಿ. ಸೂಕ್ತ ಜಾಗ ಗುರುತಿಸಿ ಮನೆಗಳನ್ನು ನಿರ್ಮಿಸಿಕೊಡಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ’ ಎಂದು ಭರವಸೆ ನೀಡಿದರು.

‘ತೃತೀಯ ಲಿಂಗಿಗಳಿಗೆ ಉತ್ತಮ ಪ್ರಶಸ್ತಿ ನೀಡಿ ಗೌರವಿಸುವುದರ ಜತೆಗೆ ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಬಿಜೆಪಿ ನೇತೃತ್ವದ ಸರ್ಕಾರ ಮಾಡುತ್ತಿದೆ. ಬಾಗಿನ ಅರ್ಪಿಸುವುದು ಕೂಡ ಇದರ ಒಂದು ಭಾಗ. ಎಲ್ಲಾ ವರ್ಗಕ್ಕೂ ಸಮಾನತೆ ಸಿಗಬೇಕು ಎಂಬುದು ಪಕ್ಷದ ಧ್ಯೇಯವಾಗಿದೆ’ ಎಂದು ಪಕ್ಷದ ರಾಜ್ಯ ಕಾರ್ಯದರ್ಶಿ ಕೆ.ಎಸ್.ನವೀನ್ ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎ.ಮುರಳಿ, ಮುಖಂಡರಾದ ರಾಜೇಶ್ ಬುರುಡೆಕಟ್ಟೆ, ಜೈಪಾಲ್, ಸುರೇಶ್ ಸಿದ್ದಾಪುರ, ಶೈಲಜಾರೆಡ್ಡಿ, ಡಾ.ಸಿದ್ದಾರ್ಥ ಗುಂಡಾರ್ಪಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.