ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ, ಧರ್ಮದ ಹೆಸರಿನಲ್ಲಿ ಮತ ಕೇಳುವ ಬಿಜೆಪಿ: ಡಿ.ಕೆ.ಶಿವಕುಮಾರ್

ಹಿರಿಯೂರಿನಲ್ಲಿ ನಡೆದ ‘ಪ್ರಜಾಧ್ವನಿ’ ಯಾತ್ರೆಯಲ್ಲಿ ಡಿ.ಕೆ.ಶಿವಕುಮಾರ್ ಆರೋಪ
Last Updated 7 ಫೆಬ್ರುವರಿ 2023, 3:19 IST
ಅಕ್ಷರ ಗಾತ್ರ

ಹಿರಿಯೂರು: ಬಿಜೆಪಿಯು ಜಾತಿ, ಧರ್ಮದ ಹೆಸರಿನಲ್ಲಿ ಮತ ಕೇಳುವ ಮೂಲಕ ಸಮಾಜದ ಶಾಂತಿ ನೆಮ್ಮದಿಯನ್ನು ಹಾಳುಗೆಡವುವ ಕೆಲಸ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದರು.

ನಗರದ ನೆಹರೂ ಮೈದಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರಜಾಧ್ವನಿ ಯಾತ್ರೆ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಮೂರೂವರೆ ವರ್ಷದಿಂದ ಆಡಳಿತ ನಡೆಸುತ್ತಿರುವುದು ಸ್ವಂತ ಶಕ್ತಿಯ ಬಿಜೆಪಿಯಲ್ಲ. ಆಪರೇಷನ್ ಕಮಲ ಬಿಜೆಪಿ ಸರ್ಕಾರ. ಈ ಸರ್ಕಾರ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಬಿಜೆಪಿ ಶಾಸಕಿ
ಕೆ. ಪೂರ್ಣಿಮಾ ಅವರ ರಕ್ತದಲ್ಲಿ ಕಾಂಗ್ರೆಸ್ ಇದೆ. ಇವತ್ತೋ, ನಾಳೆಯೋ ಮಂತ್ರಿ ಆಗ್ತೀನಿ ಅಂತ ಕಾಯ್ತಾ
ಇದ್ದರು. ಸಚಿವ ಸ್ಥಾನ ನೀಡದೆ ಬಿಜೆಪಿಯವರು ಗೊಲ್ಲ ಜನಾಂಗವನ್ನು ಕಡೆಗಣಿಸಿದ್ದಾರೆ. ಆದರೆ, ಕಾಂಗ್ರೆಸ್ ನಾಗರಾಜ್ ಯಾದವ್ ಅವರನ್ನು ವಿಧಾನಪರಿಷತ್‌ ಸದಸ್ಯರಾಗಿ ಮಾಡಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್, ಸರ್ವರಿಗೂ ಸಮಪಾಲು, ಸಮಬಾಳು ತತ್ವ ಹೊಂದಿರುವ ಪಕ್ಷವಾಗಿದೆ. ಎಲ್ಲ ವರ್ಗಗಳ ಜನರ ಹಿತಚಿಂತನೆ ಮಾಡುತ್ತದೆ ಎಂದು ಹೇಳಿದರು.

ಎಸ್‌ಸಿ, ಎಸ್‌ಟಿ ಸಮುದಾಯದವರಿಗೆ ಮೀಸಲಾತಿ ಹೆಚ್ಚಿಸಲಾಗಿದೆ ಎಂದು ಡಬಲ್ ಎಂಜಿನ್ ಸರ್ಕಾರ ಹೇಳಿಕೊಂಡು ಬರುತ್ತಿದೆ. ಆದರೆ, ಮೀಸಲಾತಿ ಹೆಚ್ಚಳಕ್ಕೆ ಕೇಂದ್ರದಲ್ಲಿ ಒಪ್ಪಿಗೆ ಸಿಕ್ಕಿಲ್ಲ. ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಮತ ಕೇಳುವ ಅರ್ಹತೆ ಕಳೆದುಕೊಂಡಿದ್ದಾರೆ ಎಂದು ಶಿವಕುಮಾರ್ ಹರಿಹಾಯ್ದರು.

ಜೂನ್‌ನಿಂದಲೇ ಜಾರಿ: ‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವ ಜೊತೆಗೆ ಪ್ರತಿ ಮನೆ ಒಡತಿಯ ಖಾತೆಗೆ ₹ 2 ಸಾವಿರವನ್ನು ಜೂನ್‌ನಿಂದಲೇ ನೀಡುತ್ತೇವೆ. ಈ ಬಗ್ಗೆ ಪಕ್ಷದಿಂದ ಗ್ಯಾರಂಟಿ ಚೆಕ್ ನೀಡುತ್ತೇವೆ’ ಎಂದು ಶಿವಕುಮಾರ್ ಘೋಷಿಸಿದರು.

‘ಬಿಜೆಪಿ ಸರ್ಕಾರ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ, ಶೂ, ಸಮವಸ್ತ್ರವನ್ನು ತೆಗೆದು ಹಾಕಿರುವುದು ಅಕ್ಷಮ್ಯ. ಹಿಂದೆ ಶೋಭಕ್ಕನ ಕಾಲದಲ್ಲಿ ಸೈಕಲ್, ಸೀರೆ ಕೊಡುತ್ತಿದ್ದರು. ಈಗ ಎಲ್ಲವೂ ಬಂದ್ ಆಗಿದೆ. ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಭದ್ರಾ ಯೋಜನೆಯಲ್ಲಿ ಅಕ್ರಮ ನಡೆದಿದೆ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಶೇ 40 ಕಮಿಷನ್‌ ಆರೋಪ, ಬಿಜೆಪಿ ವಿಧಾನಪರಿಷತ್‌ ಸದಸ್ಯ ಎಚ್. ವಿಶ್ವನಾಥ್ ಶೇ 20 ಲಂಚದ ಬಗ್ಗೆ ಮಾತಾಡಿದ್ದಾರೆ. ಇನ್ನಾದರೂ ಶೇ 40 ಲಂಚದ ವ್ಯವಹಾರ ನಿಲ್ಲಿಸಬೇಕು’ ಎಂದು ಶಿವಕುಮಾರ್ ವಾಗ್ದಾಳಿ ಮಾಡಿದರು.

ಸಭೆಯಲ್ಲಿ ಮಾಜಿ ಸಚಿವರಾದ ಎಚ್. ಆಂಜನೇಯ, ಡಿ. ಸುಧಾಕರ್, ಪರಮೇಶ್ವರ್ ನಾಯ್ಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್, ಕೆಪಿಸಿಸಿ ಕಾರ್ಮಿಕ ವಿಭಾಗದ ಅಧ್ಯಕ್ಷ ಜಿ.ಎಸ್. ಮಂಜುನಾಥ್, ಮಾತನಾಡಿದರು.

ಹಿರಿಯೂರು ಕ್ಷೇತ್ರದಿಂದ ಸ್ಪರ್ಧಿಸಲು ಅರ್ಜಿ ಸಲ್ಲಿಸಿದ್ದ ಡಿ. ಸುಧಾಕರ್, ಬಿ. ಸೋಮಶೇಖರ್, ಸಿ.ಬಿ. ಪಾಪಣ್ಣ, ವೀರಭದ್ರಬಾಬು, ಜಯರಾಮಯ್ಯ, ನಂದಿಹಳ್ಳಿ ಪಾತಯ್ಯ ಅವರನ್ನು ಶಿವಕುಮಾರ್ ವೇದಿಕೆ ಮುಂಭಾಗಕ್ಕೆ ಕರೆದು ಕೈ ಎತ್ತಿಸುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದರು.

ಮಾಜಿ ಸಚಿವರಾದ ಟಿ.ಬಿ ಜಯಚಂದ್ರ, ಎಚ್‌.ಸಿ.ಮಹದೇವಪ್ಪ, ವಿ.ಎಸ್. ಉಗ್ರಪ್ಪ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ. ತಾಜ್‌ಪೀರ್, ಮಹಿಳಾ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷೆ ಗೀತಾನಂದಿನಿಗೌಡ, ಖಾದಿ ರಮೇಶ್, ಈರಲಿಂಗೇಗೌಡ, ಆರ್. ನಾಗೇಂದ್ರನಾಯ್ಕ್, ಅಮೃತೇಶ್ವರಸ್ವಾಮಿ, ಕಂದಿಕೆರೆ ಸುರೇಶ್ ಬಾಬು, ಬಿ.ಎಚ್. ಮಂಜುನಾಥ್, ಸುಜಾತಾ ಅವರೂ ಇದ್ದರು.

ಕುಮಾರಸ್ವಾಮಿಗೆ ಟಾಂಗ್ ನೀಡಿದ ಡಿಕೆಶಿ

‘ಜೆಡಿಎಸ್ ಅಧಿಕಾರಕ್ಕೆ ಬರದಿದ್ದರೆ ರಾಜಕೀಯ ನಿವೃತ್ತಿ ಘೋಷಿಸುವುದಾಗಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಆದರೆ, ಅವರು ಚುನಾವಣೆವರೆಗೆ ಕಾಯುವುದು ಬೇಡ. ರಾಜ್ಯದಲ್ಲಿ ಜೆಡಿಎಸ್‌ ಖಂಡಿತವಾಗಿ ಅಧಿಕಾರಕ್ಕೆ ಬರುವುದಿಲ್ಲ. ಜೆಡಿಎಸ್ ಕಾರ್ಯಕರ್ತರೆಲ್ಲರೂ ಕಾಂಗ್ರೆಸ್‌ಗೆ ಬನ್ನಿ’ ಎಂದು ಡಿ.ಕೆ. ಶಿವಕುಮಾರ್‌ ಆಹ್ವಾನ ನೀಡಿದರು.

‘ವಿಧಾನಸೌಧದ ಯಾವುದೇ ಕಂಬ ಬಡಿದರೂ ಶೇ 40 ಲಂಚ ಎನ್ನುತ್ತವೆ. ಎಚ್‌ಎಎಲ್‌ ಕಾರ್ಖಾನೆಗೆ 2016ರಲ್ಲಿ ಅಡಿಗಲ್ಲು ಹಾಕುವಾಗ ಪ್ರಧಾನಿ ಮೋದಿ ಅವರು ಎರಡು ವರ್ಷದಲ್ಲಿ ಹೆಲಿಕಾಪ್ಟರ್ ಹಾರುತ್ತದೆ ಎಂದಿದ್ದರು. ಆದರೆ, ಈಗ ಫ್ಯಾಕ್ಟರಿ ಉದ್ಘಾಟನೆಗೆ ಬಂದಿದ್ದಾರೆ. ಉದ್ಯೋಗಗಳನ್ನು ಸೃಷ್ಟಿಸುವ ಅವರ ಭರವಸೆ ಹುಸಿಯಾಗಿದೆ’ ಎಂದು ಮಾಜಿ ಮುಖ್ಯಮಂತ್ರಿ ಜಿ.ಪರಮೇಶ್ವರ್ ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT