ಬುಧವಾರ, ನವೆಂಬರ್ 20, 2019
20 °C
ಸದಸ್ಯತ್ವ ಅಭಿಯಾನ ಕಾರ್ಯಾಗಾರದಲ್ಲಿ ಶಾಸಕ ಸುನೀಲ್‌ ಕುಮಾರ್‌

ಯುವಸಮೂಹ ಸೆಳೆಯಲು ಬಿಜೆಪಿ ಸಜ್ಜು

Published:
Updated:
Prajavani

ಚಿತ್ರದುರ್ಗ: ಯುವ ಸಮೂಹವನ್ನು ಸೆಳೆಯುವ ಮೂಲಕ ಸದಸ್ಯತ್ವ ಅಭಿಯಾನ ಯಶಸ್ವಿಗೊಳಿಸಿ ಪಕ್ಷವನ್ನು ಇನ್ನಷ್ಟು ಬಲಪಡಿಸಬೇಕು ಎಂದು ಶಾಸಕ ಸುನೀಲ್‍ಕುಮಾರ್ ಸಲಹೆ ನೀಡಿದರು.

ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಸಂಘಟನಾ ಪರ್ವ ಸದಸ್ಯತ್ವ ಅಭಿಯಾನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಸದಸ್ಯತ್ವ ಅಭಿಯಾನದ ಮೂಲಕ ಎಲ್ಲ ವರ್ಗದ ಜನರನ್ನು ತಲುಪಬೇಕು. ಸಾಮಾಜಿಕ ಜಾಲತಾಣದ ನಿರ್ವಹಣೆಗೆ ತಂಡಗಳನ್ನು ರಚಿಸಬೇಕು. ಕಾಲೇಜು ವಿದ್ಯಾರ್ಥಿಗಳನ್ನು ಸೆಳೆಯಲು ಕವನ ರಚನೆ, ವಿಚಾರ ಸಂಕಿರಣದಂತಹ ಕಾರ್ಯಕ್ರಮಗಳನ್ನು ಆಯೋಜಿಸಬೇಕು’ ಎಂದು ಸಲಹೆ ನೀಡಿದರು.

‘2013–14ರಲ್ಲಿ ನಡೆದ ಅಭಿಯಾನದಲ್ಲಿ 11 ಕೋಟಿ ಸದಸ್ಯತ್ವ ನೋಂದಾಯಿಸಿಕೊಳ್ಳುವ ಮೂಲಕ ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷ ಎಂಬ ಹೆಗ್ಗಳಿಕೆಗೆ ಬಿಜೆಪಿ ಪಾತ್ರವಾಗಿದೆ. 17ನೇ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 303 ಸ್ಥಾನ ಗೆಲ್ಲಲು ಈ ಅಭಿಯಾನವೇ ಕಾರಣ. ಈ ಬಾರಿ ಸದಸ್ಯತ್ವದ ಸಂಖ್ಯೆ ಇನ್ನಷ್ಟು ಹೆಚ್ಚಾಗಬೇಕು’ ಎಂದು ಸೂಚನೆ ನೀಡಿದರು.

‘ಪಂಚಾಯಿತಿಕಟ್ಟೆ, ಸಮುದಾಯ ಭವನಗಳಲ್ಲಿ ಸಭೆ ನಡೆಸಬೇಕು. ಬೀದಿನಾಟಕ, ಸಾರ್ವಜನಿಕ ಸ್ಥಳಗಳಲ್ಲಿ ಸಮಾರಂಭಗಳನ್ನು ಏರ್ಪಡಿಸಬೇಕು. ಸಮಾಜದ ಗಣ್ಯರು, ತಾರಾ ವರ್ಚಸ್ಸು ಹೊಂದಿದವರನ್ನು ಪಕ್ಷಕ್ಕೆ ಕರೆತರಬೇಕು. ಸಾಮಾಜಿಕ ಗುಂಪುಗಳು ಹಾಗೂ ಸರ್ಕಾರೇತರ ಸಂಸ್ಥೆಗಳು ಪಕ್ಷಕ್ಕೆ ಸೇರ್ಪಡೆಯಾಗುವಂತೆ ಪ್ರೇರೇಪಿಸಬೇಕು’ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್.ನವೀನ್, ‘ಜುಲೈ 6 ರಿಂದ ಆ.11 ರವರೆಗೆ ಜಿಲ್ಲೆಯಲ್ಲಿ ಸಂಘಟನಾ ಪರ್ವ ಸದಸ್ಯತ್ವ ಅಭಿಯಾನ ಕೈಗೆತ್ತಿಕೊಳ್ಳಲಾಗಿದೆ. ನವೀಕರಣ ಹಾಗೂ ನೂತನ ಸದಸ್ಯತ್ವ ಪಡೆಯಲು ಅವಕಾಶವಿದೆ. ಐದು ಬೂತ್‍ಗೆ ಒಬ್ಬರು ಅಭಿಯಾನ ವಿಸ್ತಾರಕರನ್ನು ನೇಮಕ ಮಾಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.

‘ಸದಸ್ಯತ್ವ ಅಭಿಯಾನಕ್ಕೆ ಜಿಲ್ಲೆಯಲ್ಲಿ 400ಕ್ಕೂ ಹೆಚ್ಚು ಕಾರ್ಯಕರ್ತರು ಕೆಲಸ ಮಾಡಲಿದ್ದಾರೆ. ಪ್ರತಿ ಬೂತ್‌ ಮಟ್ಟದಲ್ಲಿ ಕನಿಷ್ಠ 200 ಜನರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಗುರಿ ಇಟ್ಟುಕೊಳ್ಳಲಾಗಿದೆ. ಯುವಕರು, ಮಹಿಳೆಯರು ಸೇರಿ 2.7 ಲಕ್ಷ ಸದಸ್ಯರನ್ನು ನೋಂದಾಯಿಸಿಕೊಳ್ಳಲಾಗುವುದು’ ಎಂದರು.

ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ, ಮುಖಂಡರಾದ ಜಿ.ಎಂ.ಸುರೇಶ್, ಸಿದ್ದೇಶ್‍ ಯಾದವ್, ಮಲ್ಲಿಕಾರ್ಜುನ್, ಮುರಳಿ, ರತ್ನಮ್ಮ, ವಕ್ತಾರ ನಾಗರಾಜ್‍ ಬೇದ್ರೆ, ಮಾಧ್ಯಮ ವಕ್ತಾರ ದಗ್ಗೆ ಶಿವಪ್ರಕಾಶ್, ಸುರೇಶ್‍ ಸಿದ್ದಾಪುರ, ವೆಂಕಟೇಶ್‍ ಯಾದವ್ ಇದ್ದರು.

ಪ್ರತಿಕ್ರಿಯಿಸಿ (+)