ಸೋಮವಾರ, ಆಗಸ್ಟ್ 8, 2022
22 °C
ಕಪ್ಪು ಶಿಲೀಂಧ್ರ ಆರೈಕೆಗೆ ಜಿಲ್ಲಾ ಆಸ್ಪತ್ರೆ, ಬಡವರಿಗೆ ಹೊರೆಯಾದ ಚಿಕಿತ್ಸೆ

ಶಸ್ತ್ರಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ಶಿಫಾರಸು

ಜಿ.ಬಿ. ನಾಗರಾಜ್‌ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಕಪ್ಪು ಶಿಲೀಂಧ್ರ ಕಾಣಿಸಿಕೊಂಡ ರೋಗಿಗಳಿಗೆ ಸರ್ಕಾರ ಉಚಿತ ಚಿಕಿತ್ಸೆ ನೀಡುವುದಾಗಿ ಘೋಷಣೆ ಮಾಡಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿಯೂ ಪ್ರತ್ಯೇಕ ವಾರ್ಡ್‌ ಮೀಸಲಿಡಲಾಗಿದೆ. ಆದರೆ, ಗಂಭೀರ ಸ್ವರೂಪದ ಸಮಸ್ಯೆ ಎದುರಿಸುತ್ತಿರುವ ರೋಗಿಗಳು ಶಸ್ತ್ರಚಿಕಿತ್ಸೆಗೆ ಖಾಸಗಿ ಆಸ್ಪತ್ರೆ ಆಶ್ರಯಿಸಬೇಕಾದ ಸ್ಥಿತಿ ಇದೆ.

ಜಿಲ್ಲೆಯಲ್ಲಿ ಈವರೆಗೆ 93 ಜನರಲ್ಲಿ ಕಪ್ಪು ಶಿಲೀಂದ್ರ ಕಾಣಿಸಿಕೊಂಡಿದೆ. ಇದರಲ್ಲಿ 61 ಪ್ರಕರಣಗಳು ಖಚಿತವಾಗಿದ್ದು, 48 ಜನರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಬಹುತೇಕ ಶಸ್ತ್ರಚಿಕಿತ್ಸೆಗಳು ಖಾಸಗಿ ಆಸ್ಪತ್ರೆಯಲ್ಲಿ ನಡೆದಿರುವುದು ಗಮನಾರ್ಹ.

ಜಿಲ್ಲೆಯಲ್ಲಿ ಕಪ್ಪು ಶಿಲೀಂಧ್ರ ಪ್ರಕರಣಗಳು ಪತ್ತೆಯಾದಾಗ ಖಾಸಗಿ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿತ್ತು. ಸರ್ಕಾರ ಉಚಿತ ಚಿಕಿತ್ಸೆ ಘೋಷಣೆ ಮಾಡಿದ ಬಳಿಕ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್‌ ಮೀಸಲಿಡಲಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಹೊರೆಯಾದ ಪರಿಣಾಮ ಬಹುತೇಕರು ಜಿಲ್ಲಾ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ.

ಚಳ್ಳಕೆರೆ ತಾಲ್ಲೂಕಿನ 56 ವರ್ಷದ ವ್ಯಕ್ತಿಯೊಬ್ಬರಿಗೆ ಜೂನ್‌ 5ರಂದು ಕಪ್ಪು ಶಿಲೀಂಧ್ರ ಪತ್ತೆಯಾಗಿತ್ತು. ಖಾಸಗಿ ಆಸ್ಪತ್ರೆಯ ವೆಚ್ಚ ಭರಿಸುವ ಶಕ್ತಿ ಇಲ್ಲದ ಪರಿಣಾಮ ಅವರು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ರೋಗದ ತೀವ್ರತೆ ಹೆಚ್ಚಿದ್ದರಿಂದ ಶಸ್ತ್ರಚಿಕಿತ್ಸೆಗೆ ವೈದ್ಯರು ಸಲಹೆ ನೀಡಿದ್ದರು. ಎರಡು ದಿನ ಕಳೆದರೂ ರೋಗಿಯ ಶಸ್ತ್ರಚಿಕಿತ್ಸೆ ಸಾಧ್ಯವಾಗಲಿಲ್ಲ. ಹೆಚ್ಚಿನ ಚಿಕಿತ್ಸೆಗಾಗಿ ಅವರು ಬಳ್ಳಾರಿಗೆ ತೆರಳಿ ವಿಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ.

‘ಕಪ್ಪು ಶಿಲೀಂಧ್ರ ಕಾಣಿಸಿಕೊಂಡಿದ್ದು ಖಚಿತವಾದ ತಕ್ಷಣ ಜಿಲ್ಲಾ ಆಸ್ಪತ್ರೆಗೆ ದಾಖಲಾದೆವು. ಆದರೆ, ಅಲ್ಲಿ ಶಸ್ತ್ರಚಿಕಿತ್ಸೆ ಸಕಾಲಕ್ಕೆ ಸಿಗುವುದು ಅನುಮಾನವೆನಿಸಿತು. ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದರು. ಇದಕ್ಕೆ ಅಂದಾಜು ₹ 2 ಲಕ್ಷ ರೂಪಾಯಿ ಖರ್ಚಾಗುತ್ತದೆ. ಇಷ್ಟು ಹಣವನ್ನು ಭರಿಸುವ ಶಕ್ತಿ ನಮ್ಮಲ್ಲಿಲ್ಲ’ ಎಂದು ಅಳಲು ತೋಡಿಕೊಂಡರು ರೋಗಿಯ ಸಂಬಂಧಿ.

ಅಪರೂಪದ ಈ ಕಾಯಿಲೆಯ ಚಿಕಿತ್ಸಾ ವೆಚ್ಚ ತುಂಬಾ ದುಬಾರಿಯಾಗಿದೆ. ಔಷಧ, ಶಸ್ತ್ರಚಿಕಿತ್ಸೆಗೆ ಬಳಕೆ ಮಾಡುವ ಕೆಲ ಉಪಕರಣ ಸಾಮಾನ್ಯರ ಕೈಗೆಟಕುವ ದರದಲ್ಲಿ ಇಲ್ಲ. ಜಿಲ್ಲಾ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಅಗತ್ಯ ಇರುವ ಉಪಕರಣಗಳ ಕೊರತೆ ಇದೆ. ಹೀಗಾಗಿ, ರೋಗಿಗಳು ಖಾಸಗಿ ಆಸ್ಪತ್ರೆ ಅವಲಂಬಿಸುವುದು ಅನಿವಾರ್ಯವಾಗಿದೆ’ ಎನ್ನುತ್ತಾರೆ ವೈದ್ಯರು.

ಆಯುಷ್ಮಾನ್‌ ಭಾರತ ಆರೋಗ್ಯ ಕರ್ನಾಟಕದ (ಎಬಿಎಆರ್‌ಕೆ) ವ್ಯಾಪ್ತಿಯಲ್ಲಿ ಕಪ್ಪು ಶಿಲೀಂಧ್ರ ಸೇರ್ಪಡೆ ಆಗದಿರುವ ಪರಿಣಾಮವಾಗಿ ಖಾಸಗಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಸಿಗುತ್ತಿಲ್ಲ. ಶಸ್ತ್ರಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡುವ ಶಕ್ತಿ ಬಹುತೇಕ ರೋಗಿಗಳಲ್ಲಿ ಇಲ್ಲ. ಕೆಲ ರೋಗಿಗಳು ದಾವಣಗೆರೆ ಹಾಗೂ ಬೆಂಗಳೂರಿಗೆ ತೆರಳಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ
ದಾಖಲಾಗಿದ್ದಾರೆ.

ಔಷಧ ಕೊರತೆ

ಕಪ್ಪು ಶಿಲೀಂಧ್ರ ಸೋಂಕಿತರ ಚಿಕಿತ್ಸೆಗೆ ಅಗತ್ಯವಿರುವ ‘ಲೈಪೋಸೋಮಲ್‌ ಆಂಪೊಟೆರಿಸಿನ್‌ ಬಿ’ ಔಷಧ ಬೇಡಿಕೆಗೆ ತಕ್ಕಷ್ಟು ಪೂರೈಕೆ ಆಗುತ್ತಿಲ್ಲ. ಇದರಿಂದ ರೋಗಿಗಳು ಸಕಾಲದಲ್ಲಿ ಗುಣಮುಖರಾಗಲು ಸಾಧ್ಯವಾಗುತ್ತಿಲ್ಲ ಎಂದು ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ.

‘ವ್ಯಕ್ತಿಯ ದೇಹದ ತೂಕವನ್ನು ಆಧರಿಸಿ ಔಷಧ ನೀಡಲಾಗುತ್ತದೆ. 70 ಕೆ.ಜಿ. ತೂಕದ ವ್ಯಕ್ತಿಯೊಬ್ಬರಿಗೆ ನಿತ್ಯ 50 ಎಂ.ಜಿಯ ಏಳು ವಯಲ್‌ ಅಗತ್ಯವಿದೆ. ಇಂತಹ ವ್ಯಕ್ತಿಗೆ ಸರಾಸರಿ ಒಂದು ಅಥವಾ ಎರಡು ವಯಲ್‌ ಮಾತ್ರ ಲಭ್ಯ ಆಗುತ್ತಿದೆ’ ಎಂದು ವೈದ್ಯರು ಬೇಸರ ವ್ಯಕ್ತಪಡಿಸಿದರು.

.........

ಶಸ್ತ್ರಚಿಕಿತ್ಸೆಗೆ ಅಗತ್ಯವಿರುವ ಉಪಕರಣಗಳ ಕೊರತೆ ಇತ್ತು. ಈ ವ್ಯವಸ್ಥೆ ರೂಪುಗೊಳ್ಳಲು ಸಮಯ ಹಿಡಿಯಿತು. ಜೂನ್‌ 10ರಿಂದ ಜಿಲ್ಲಾ ಆಸ್ಪತ್ರೆಯಲ್ಲಿಯೂ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ.

-ಡಾ.ರಂಗನಾಥ್‌, ಜಿಲ್ಲಾ ಸರ್ವೇಕ್ಷಣಾಧಿಕಾರಿ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು