ಗುರುವಾರ , ಡಿಸೆಂಬರ್ 5, 2019
22 °C
ಜಿಲ್ಲಾ ಪಶುಸಂಗೋಪನೆ ಉಪನಿರ್ದೇಶಕ ಡಾ.ಕೃಷ್ಣಪ್ಪ ಭರವಸೆ

ನೀಲಿ ನಾಲಗೆ ರೋಗ ನಿಯಂತ್ರಣಕ್ಕೆ ಅಗತ್ಯ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಾಯಕನಹಟ್ಟಿ: ಹೋಬಳಿಯಾದ್ಯಂತ ಕುರಿಗಳಿಗೆ ವ್ಯಾಪಿಸಿರುವ ನೀಲಿನಾಲಗೆ ರೋಗದ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಶುಸಂಗೋಪನೆ ಉಪನಿರ್ದೇಶಕ ಡಾ.ಕೃಷ್ಣಪ್ಪ ಹೇಳಿದರು.

ಪಟ್ಟಣದ ಪಶು ಆರೋಗ್ಯ ಕೇಂದ್ರಕ್ಕೆ ಸೋಮವಾರ ವೈದ್ಯರ ತಂಡದೊಂದಿಗೆ ಬಂದ ಅವರು ಸತ್ತಕುರಿಗಳನ್ನು ಪರಿಶೀಲಿಸಿ ರೈತರಿಂದ ಅಹವಾಲನ್ನು ಸ್ವೀಕರಿಸಿ ಮಾತನಾಡಿದರು.

‘ಸರ್ಕಾರದಿಂದ ಸೋಮವಾರ ಚಿತ್ರದುರ್ಗ ಜಿಲ್ಲೆಗೆ 50 ಸಾವಿರ ಲಸಿಕೆಗಳನ್ನು ಸರಬರಾಜು ಮಾಡಲಾಗಿದೆ. ಮಂಗಳವಾರದಿಂದಲೇ ಎಲ್ಲ ರೈತರ ರಾಸುಗಳಿಗೆ, ಕುರಿ–ಮೇಕೆಗಳಿಗೆ ಲಸಿಕೆ ಹಾಕುವ, ತಜ್ಞ ವೈದ್ಯರಿಂದ ರಾಸುಗಳ ತಪಾಸಣಾ ಅಭಿಯಾನ ಕೈಗೊಳ್ಳಲಾಗುವುದು. ಜತೆಗೆ ನಮ್ಮ ಇಲಾಖೆಯ ಎಲ್ಲ ಯೋಜನೆಗಳು, ಸೌಲಭ್ಯಗಳನ್ನು ರೈತರಿಗೆ ತಲುಪಿಸಲು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಇಲಾಖೆಯ ಯಾವ ವೈದ್ಯರೂ ರಾಸುಗಳ ಚಿಕಿತ್ಸೆಗಾಗಿ ಹೊರಗಡೆ ಔಷಧ ಅಂಗಡಿಗಳಿಗೆ ಚೀಟಿ ಕೊಡಬಾರದು ಎಂದು ಆದೇಶಿಸಿದ್ದೇನೆ’ ಎಂದು ಹೇಳಿದರು.

‘ಯಾವ ರೈತರೂ ಕಂಗಾಲಾಗಬಾರದು. ಮೃತಪಟ್ಟ ರಾಸುಗಳು, ಕುರಿ ಮೇಕೆಗಳಿಗೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಹಾಗೆಯೇ ಸತ್ತ ಕುರಿಗಳನ್ನು ಸೂಕ್ತ ರೀತಿಯಲ್ಲಿ ಸಂಸ್ಕಾರ ಮಾಡಬೇಕು’ ಎಂದು ರೈತರಿಗೆ ಕಿವಿಮಾತು ಹೇಳಿದರು.

‘ಜಿಲ್ಲೆಯಲ್ಲಿ 17 ಲಕ್ಷ ಕುರಿ ಮತ್ತು ಮೇಕೆಗಳು ಇವೆ. ಇದರಲ್ಲಿ ಸುಮಾರು 40 ಸಾವಿರ ಕುರಿಗಳು ನಾಯಕನಹಟ್ಟಿ ಹೋಬಳಿಯಲ್ಲಿವೆ. ಈ ಭಾಗದ ರೈತರು ಉಪಕಸುಬಾಗಿ ಕುರಿ ಸಾಕಣೆಯನ್ನು ಅವಲಂಬಿಸಿದ್ದಾರೆ’ ಎಂದು ಹೇಳಿದರು.

‘ರೋಗ ಪತ್ತೆಯಾದ ತಕ್ಷಣ ರೋಗ ನಿಯಂತ್ರಣಕ್ಕೆ ಇಲಾಖೆ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಆದರೆ ರೈತರ ಅಸಹಕಾರದಿಂದ ಕುರಿಗಳ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಇಲಾಖೆಯಲ್ಲಿ 26 ವೈದ್ಯರ ಕೊರತೆ ಇದೆ. ಇದರಿಂದ ರೋಗ ನಿಯಂತ್ರಿಸಲು ಸಾಧ್ಯವಾಗಲಿಲ್ಲ. ರೈತರು ಸಹ ಇಲಾಖೆಯ ಸಿಬ್ಬಂದಿ ನೀಡುವ ಸೂಚನೆಯನ್ನು ಚಾಚೂ ತಪ್ಪದೇ ಪಾಲಿಸಿದರೆ ರೋಗವನ್ನು ನಿಯಂತ್ರಿಸಬಹುದು’ ಎಂದು ಹೇಳಿದರು.

ಭೇಟಿಯ ವೇಳೆ ಜಿಲ್ಲಾ ಕುರಿ ಅಭಿವೃದ್ಧಿ ಮಂಡಳಿಯ ಸಹಾಯಕ ನಿರ್ದೇಶಕ ಡಾ.ತಿಪ್ಪೇಸ್ವಾಮಿ, ತಾಲ್ಲೂಕು ಪಶು ಸಂಗೋಪನೆ ಸಹಾಯಕ ನಿರ್ದೇಶಕ ಡಾ.ರವಿ, ವೈದ್ಯ ಡಾ.ಸುಮಂತ್‌ ನಾಯ್ಕ್, ಭಾರತೀಯ ಕಿಸಾನ್‌ ಸಂಘದ ಅಧ್ಯಕ್ಷ ಪಂಚಾಕ್ಷರಿಸ್ವಾಮಿ, ಎತ್ತಿನಹಟ್ಟಿ ಓಬಳೇಶ್, ತಿಪ್ಪೇಸ್ವಾಮಿ ಇದ್ದರು.

ಪ್ರತಿಕ್ರಿಯಿಸಿ (+)