ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಳೀಯ ಅರಸರ ಸಂಶೋಧನೆಗೆ ಪ್ರೇರಣೆ

ಪ್ರಾಧ್ಯಾಪಕ ಡಾ.ಡಿ.ವಿ.ಪರಮಶಿವಮೂರ್ತಿ ಅಭಿಮತ
Last Updated 4 ಆಗಸ್ಟ್ 2019, 12:57 IST
ಅಕ್ಷರ ಗಾತ್ರ

ಚಿತ್ರದುರ್ಗ: ವಸಾಹತಶಾಹಿ ಪ್ರಭಾವಕ್ಕೆ ಮಣಿದು ಪ್ರಮುಖ ಅರಸರ ಸಂಶೋಧನೆಗೆ ಇತಿಹಾಸ ಸೀಮಿತವಾಗಿದೆ. ಆದರೆ, ‘ಉಚ್ಚಂಗಿ ಪಾಂಡ್ಯರು’ ಕೃತಿ ಸ್ಥಳೀಯ ರಾಜರ ಸಂಶೋಧನೆಗೆ ಪ್ರೇರಣೆ ಹಾಗೂ ಮಾದರಿಯಾಗಿ ರೂಪುಗೊಂಡಿದೆ ಎಂದು ತುಮಕೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಡಾ.ಡಿ.ವಿ.ಪರಮಶಿವಮೂರ್ತಿ ಅಭಿಪ್ರಾಯಪಟ್ಟರು.

ಗೆಳೆಯರ ಬಳಗ ಇಲ್ಲಿನ ಕ್ರೀಡಾಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಡಿವೈಪಿಸಿ ಸಿ.ಎಂ.ತಿಪ್ಪೇಸ್ವಾಮಿ ಅವರ ‘ಉಚ್ಚಂಗಿ ಪಾಂಡ್ಯರು’ ಸಂಶೋಧನಾ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಸ್ಥಳೀಯತೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಸ್ಥಳೀಯತೆಗೆ ಒತ್ತು ಕೊಡುವುದನ್ನು ವಿಘಟನೆ ಅಂತಲೂ ಆರೋಪಿಸಲಾಗಿದೆ. ಈ ತಪ್ಪು ಕಲ್ಪನೆ ಸಂಶೋಧನೆಯ ಮೇಲೂ ಪ್ರಭಾವ ಬೀರಿದೆ. ಸಾಮಂತ ರಾಜರ ಶೌರ್ಯ, ತ್ಯಾಗ, ಅಭಿವೃದ್ಧಿ ದೊಡ್ಡ ಅರಸರ ಆಳ್ವಿಕೆಗೆ ಸಹಕಾರಿಯಾಗಿತ್ತು. ಇಂಥ ರಾಜ ಮನೆತನಗಳ ಮೇಲೆ ಬೆಳಕು ಚೆಲ್ಲಿದರೆ ಇತಿಹಾಸಕ್ಕೆ ಹೊಸ ಹೊಳವು ಸಿಗುತ್ತದೆ’ ಎಂದು ಪ್ರತಿಪಾದಿಸಿದರು.

‘ಗ್ರಾಮೀಣರ ಮಾತಿನಲ್ಲಿ ಉಳಿದಿರುವ ಮೌಖಿಕ ಇತಿಹಾಸಕ್ಕೆ ನಿರೀಕ್ಷಿತ ಮನ್ನಣೆ ಸಿಕ್ಕಿಲ್ಲ. ಹಳ್ಳಿ ಜನರ ಹೃದಯಗಳಲ್ಲಿ ಕೂಡ ಚರಿತ್ರೆ ಅಡಗಿದೆ. ಸ್ಮಾರಕಗಳ ಜೊತೆ ಭಾವನಾತ್ಮಕವಾಗಿಯೂ ಜನರು ಬೆಳೆಯುತ್ತಾರೆ. ಮೌಖಿಕ ಇತಿಹಾಸದ ವಿನ್ಯಾಸದ ಸ್ವರೂಪ ತುಸು ಭಿನ್ನವಾಗಿರುತ್ತದೆ. ಇದನ್ನು ಗೌರವಿಸುವ ಹಾಗೂ ಹುಡುಕಿ ತೆಗೆದು ಸ್ಪಷ್ಟ ರೂಪ ಕೊಡುವ ಕಾರ್ಯ ಆಗಬೇಕಿದೆ’ ಎಂದು ಸಲಹೆ ನೀಡಿದರು.

‘ಸಂಶೋಧನಾ ಕೃತಿಗಳು ದೈಹಿಕ ಶ್ರಮ ಬೇಡುತ್ತವೆ. ಹೀಗಾಗಿ, ಸಂಶೋಧನಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿದೆ. ದಿಢೀರ್‌ ಹಣ ಗಳಿಸುವ ಮನಸ್ಥಿತಿ ಸಾಹಿತ್ಯ ಕ್ಷೇತ್ರಕ್ಕೂ ಕಾಲಿಟ್ಟಿದೆ. ತಾಳ್ಮೆ ಕಳೆದುಕೊಳ್ಳುತ್ತಿರುವ ಸಮಾಜದಲ್ಲಿ ಸೌಜನ್ಯಯುತ ನಡವಳಿಕೆ ನಿರೀಕ್ಷಿಸುವುದು ತಪ್ಪಾಗುತ್ತದೆ. ಆದರೂ, ಲೇಖಕರು ಹಳೆಯ ಸಂಶೋಧನೆಗಳನ್ನು ಸಾರಾಸಗಟಾಗಿ ತಿರಸ್ಕರಿಸಿಲ್ಲ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಾಧ್ಯಾಪಕ ಡಾ.ಕರಿಯಪ್ಪ ಮಾಳಿಗೆ, ‘ಇತಿಹಾಸವನ್ನು ವರ್ತಮಾನಕ್ಕೆ ಅನ್ವಯಿಸಿ ಮರುಚಿಂತನೆ ಮಾಡುವ ಅಗತ್ಯವಿದೆ. ‘ಉಚ್ಚಂಗಿ ಪಾಂಡ್ಯರು’ ಕೃತಿ ಇತಿಹಾಸಕ್ಕೆ ಮಾತ್ರ ಸೀಮಿತವಾಗಿಲ್ಲ. ಸಮಾಜಶಾಸ್ತ್ರೀಯ ಅಧ್ಯಯನದ ಮಹತ್ವ ಪಡೆದಿದೆ. ಶಾಸನಗಳಲ್ಲಿ ಉಲ್ಲೇಖವಾಗಿರುವ ಅಜ್ಞಾತ ವಿಷಯಗಳ ಕಡೆ ಗಮನ ಹರಿಸಿರುವುದು ಶ್ಲಾಘನೀಯ. ಶಾಸನಗಳ ಅಧ್ಯಯನ ರಾಜಕೀಯ ಹಾಗೂ ಇತಿಹಾಸಕ್ಕೆ ಮಾತ್ರ ಸೀಮಿತವಾಗಬಾರದು’ ಎಂದರು.

ಲೇಖಕ ಸಿ.ಎಂ.ತಿಪ್ಪೇಸ್ವಾಮಿ ಮಾತನಾಡಿ, ‘ಶಾಸನಗಳನ್ನು ರಾಜರು ಬೀದಿಗಳಲ್ಲಿ ಹಾಕಿದ್ದರು. ಇವು ಸಾರ್ವಜನಿಕರಿಗೆ ಸುಲಭವಾಗಿ ಸಿಗುತ್ತಿದ್ದವು. ಕೊಂಚ ಉತ್ಪೇಕ್ಷ ಇರಬಹುದು. ಆದರೆ, ತಪ್ಪು ಮಾಹಿತಿ ನೀಡುವುದಿಲ್ಲ. ಇಂತಹ ಶಾಸನಗಳ ಎದುರು ನಿಂತಾಗ ರೋಮಾಂಚನ ಉಂಟಾಗಿದೆ’ ಎಂದು ಅನುಭವ ಹಂಚಿಕೊಂಡರು.

‘ರಾಜರ ಕಾಲದ ದೇಗುಲಗಳು ಶಿಥಿಲಾವಸ್ಥೆಯಲ್ಲಿವೆ. ಆದರೆ, ಹೊಸ ದೇಗುಲಗಳಿಗೆ ಅನುದಾನ ಹರಿದು ಬರುತ್ತಿರುವುದು ವಿಪರ್ಯಾಸ. ಗ್ರಾಮೀಣ ಪ್ರದೇಶದಲ್ಲಿ ಶಾಸನಗಳ ಮಹತ್ವದ ಬಗ್ಗೆ ಅರಿವಿಲ್ಲ. ಕುರಿ, ಮೇಕೆ, ಹಸುಗಳನ್ನು ಕಟ್ಟಿಹಾಕಲು ಶಾಸನದ ಕಲ್ಲುಗಳು ಬಳಕೆಯಾಗುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಎಂ.ರೇವಣಸಿದ್ದಪ್ಪ, ಸರ್ಕಾರಿ ಕಲಾ ಕಾಲೇಜು ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಎಚ್‌.ಗುಡ್ಡದೇಶ್ವರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT