ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಶೋಧನೆಯತ್ತ ಒಲವು ಬೆಳೆಯಲಿ

ಆರ್ಥಿಕ ವಿಶ್ಲೇಷಕ ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ ಸಲಹೆ
Last Updated 22 ಫೆಬ್ರುವರಿ 2021, 15:39 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಲೇಖಕರ ಭಾಷೆ ಸರಳ ಮತ್ತು ನೇರವಾಗಿರಬೇಕು. ಸಂಶೋಧನೆಯತ್ತ ಒಲವು ಬೆಳೆಯಲು ಪ್ರೇರೇಪಿಸುವಂತೆ ಇರಬೇಕು’ ಎಂದು ಆರ್ಥಿಕ ವಿಶ್ಲೇಷಕ ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ ಸಲಹೆ ನೀಡಿದರು.

ವಾಸವಿ ವಿದ್ಯಾಸಂಸ್ಥೆ ಆವರಣದಲ್ಲಿ ಚಿನ್ಮೂಲಾದ್ರಿ ಕನ್ನಡ ಬಳಗದಿಂದ ಈಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ.ಎಚ್.ಎಲ್. ಪ್ರವೀಣ್‌ಕುಮಾರ್ ಅವರ ‘ಕೊರೊನಾ ಮತ್ತು ಆರ್ಥಿಕ ಭಾರತ’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.

‘ಲೇಖಕರ ಈ ಪುಸ್ತಕ ಕೋವಿಡ್‌ ಸಂದಿಗ್ಧ ಪರಿಸ್ಥಿತಿಯಲ್ಲಿ ದೇಶದೊಳಗೆ ಉಂಟಾದ ತಲ್ಲಣ ಹಾಗೂ ಸರ್ಕಾರ ಕೈಗೊಂಡ ಕ್ರಮಗಳನ್ನು ವಿವರಿಸಿದೆ. ಆತ್ಮನಿರ್ಭರ ಭಾರತ ಅಭಿಯಾನದ ಬೇರುಗಳು ಹೇಗೆ ಗಾಂಧಿ, ಅಂಬೇಡ್ಕರ್ ಮತ್ತು ಜಾಗತಿಕ ಆರ್ಥಿಕ ತಜ್ಞರ ಜ್ಞಾನ ನೆಲೆಯಲ್ಲಿ ಹರಡಿಕೊಂಡಿದೆ ಎಂಬುದರ ಚಿತ್ರಣವೂ ಇದರಲ್ಲಿದೆ. ಹೀಗಾಗಿ, ವಿದ್ಯಾರ್ಥಿಗಳಿಗೆ ಆಕರ ಗ್ರಂಥವಾಗಿ, ಸ್ಪರ್ಧಾತ್ಮಕ ಪರೀಕ್ಷೆಗಳ ಅಭ್ಯರ್ಥಿಗಳಿಗೂ ಉಪಯುಕ್ತವಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ಸಮಸ್ಯೆಗಳ ವಿಶ್ಲೇಷಣೆ ಮತ್ತು ಪರಿಹಾರಗಳನ್ನು ಕ್ರಿಯಾಶೀಲ ಬರಹಗಾರ ಸೂಚಿಸಬಲ್ಲ. ಆ ಕೆಲಸವನ್ನು ಪುಸ್ತಕ ರೂಪದಲ್ಲಿ ಬರಹಗಾರ ಮಾಡಿದ್ದಾರೆ. ಶಿಕ್ಷಕರ ಬೋಧನೆ ಹೇಗೆ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿಕೊಳ್ಳಲು ಪ್ರೇರಣೆಯಾಗುವುದೋ ಆ ನಿಟ್ಟಿನ ಪ್ರಯತ್ನ ಇಲ್ಲಿ ನಡೆದಿದೆ’ ಎಂದರು.

ವಾಸವಿ ವಿದ್ಯಾಸಂಸ್ಥೆ ಅಧ್ಯಕ್ಷ ಪಿ.ಎಲ್. ಸುರೇಶ್‌ರಾಜು, ‘ಪುಸ್ತಕಗಳು ಜ್ಞಾನದ ಕಣಜ. ಓದು ಆ ಜ್ಞಾನವನ್ನು ಬದುಕಿನ ಉದ್ದೇಶಗಳ ಈಡೇರಿಕೆಗಾಗಿ ಬಳಸಿಕೊಳ್ಳುವ ಸಾಧನ. ಅದು ಬರೀ ಶಿಕ್ಷಣ ವಲಯಕ್ಕಷ್ಟೇ ಸೀಮಿತವಾಗದೆ, ಎಲ್ಲಾ ವಯಸ್ಸಿನ ಮತ್ತು ವರ್ಗದ ಜನ ಇದರಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಅಭಿಪ್ರಾಯಪಟ್ಟರು.

ಪ್ರೊ.ಎಚ್. ಲಿಂಗಪ್ಪ, ‘ಸಂಶೋಧನಾ ವಿದ್ಯಾರ್ಥಿಗಳಿಗೆ ಈ ಪುಸ್ತಕ ಬಹಳ ಉಪಯುಕ್ತ ಮಾದರಿಯಂತಿದೆ. ಲಾಕ್‌ಡೌನ್ ವೇಳೆ ದೇಶದಲ್ಲಿ ಆರ್ಥಿಕ ವ್ಯವಸ್ಥೆಯ ಸ್ಥಿತ್ಯಂತರ ಕುರಿತು ಈ ಕೃತಿ ಕಟ್ಟಿಕೊಟ್ಟಿದೆ. ಅಂಕಿ–ಅಂಶಗಳ ಮೂಲಕ ಅನೇಕ ಸಂಗತಿಗಳಿಗೆ ಕನ್ನಡಿ ಹಿಡಿಯಲಾಗಿದೆ’ ಎಂದರು.

ಚಿನ್ಮೂಲಾದ್ರಿ ಕನ್ನಡ ಬಳಗ ಅಧ್ಯಕ್ಷ ರಾಮಲಿಂಗಶ್ರೇಷ್ಠಿ, ಲೇಖಕ ಡಾ.ಎಚ್.ಎಲ್. ಪ್ರವೀಣ್ ಕುಮಾರ್, ರೇವಣಸಿದ್ದಪ್ಪ, ಗೋವಿಂದಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT