ಮನೋಲ್ಲಾಸ ಜ್ಞಾನ ವಿಕಾಸವೇ ಕಾದಂಬರಿ: ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ

7
ಅಂತರ ಕಾದಂಬರಿ ಬಿಡುಗಡೆ

ಮನೋಲ್ಲಾಸ ಜ್ಞಾನ ವಿಕಾಸವೇ ಕಾದಂಬರಿ: ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ

Published:
Updated:
Deccan Herald

ಚಿತ್ರದುರ್ಗ: ಮನೋಲ್ಲಾಸ ಜ್ಞಾನ ವಿಕಾಸಕ್ಕೆ ದಾರಿ ಉಂಟು ಮಾಡುವ ಸಾಹಿತ್ಯ ಪ್ರಕಾರವೇ ಕಾದಂಬರಿ ಎಂದು ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ ತಿಳಿಸಿದರು.

ಇಲ್ಲಿನ ಪತ್ರಿಕಾ ಭವನದಲ್ಲಿ ಭಾನುವಾರ ಜಿಲ್ಲಾ ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ, ಚುಟುಕು ಸಾಹಿತ್ಯ ಪರಿಷತ್‌ನಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಎಂ.ಎಸ್.ಮಂಜುಳಾ ಡಾ.ಸ್ವಾಮಿ ಅವರ ಅಂತರ ಕಾದಂಬರಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ಹತ್ತೊಂಬತ್ತನೇ ಶತಮಾನದ ಮಧ್ಯ ಭಾಗದಿಂದೀಚೆಗೆ ಕಾದಂಬರಿ ಸಾಹಿತ್ಯ ಪ್ರಕಾರ ಕಾಣಿಸಿಕೊಂಡಿತು. 20ನೇ ಶತಮಾನ ಎಂದರೆ ಅದು ಕಾದಂಬರಿ ಯುಗ ಎನ್ನುವಷ್ಟರ ಮಟ್ಟಿಗೆ ಜನಪ್ರಿಯತೆ ಗಳಿಸಿತು. ಪ್ರಥಮ ಸ್ಥಾನ ಪಡೆಯುವಲ್ಲಿ ಕನ್ನಡ ಸಾಹಿತಿಗಳು ಆ ಸಂದರ್ಭದಲ್ಲಿ ಕಾದಂಬರಿ ರಚಿಸುವ ಕೆಲಸ ಮಾಡಿದರು ಎಂದರು.

‘ಮೊಟ್ಟಮೊದಲು ಕಾದಂಬರಿ ಆರಂಭ ಮಾಡಿದವರು ಬಂಗಾಳಿ ಸಾಹಿತಿಗಳು. ಬಂಕಿಮಚಂದ್ರ ಚಟರ್ಜಿ ಸೇರಿ ಕೆಲವರು ಬರೆಯಲು ಆರಂಭಿಸಿದರು. ಆ ಕಾದಂಬರಿಗಳನ್ನು ಅನೇಕರು ಕನ್ನಡಕ್ಕೆ ಅನುವಾದ ಮಾಡಿದರು. ನಂತರ ವಿವಿಧ ರೀತಿಯ ಕಾದಂಬರಿ ಹುಟ್ಟಲಿಕ್ಕೆ ಕಾರಣವಾಯಿತು’ ಎಂದು ತಿಳಿಸಿದರು.

‘ಕಾದಂಬರಿ ಕರತಲ ರಂಗಭೂಮಿ ಎಂದು ನಮ್ಮ ಸಾಹಿತ್ಯ ಮೀಮಾಂಸೆಯಲ್ಲಿ ಹೆಸರು ಕೊಟ್ಟಿದ್ದಾರೆ. ಮಹಾಕಾವ್ಯಗಳು ಹಿಂದೆ ಯಾವ ಸ್ಥಾನ ಆಕ್ರಮಿಸಿಕೊಂಡಿದ್ದವೊ ಅದೇ ಸ್ಥಾನವನ್ನು ಕಾದಂಬರಿ ಆಕ್ರಮಿಸಿಕೊಂಡಿವೆ. ಸಾಹಿತ್ಯ ಪ್ರಕಾರಗಳಲ್ಲಿ ಕಾದಂಬರಿಯಷ್ಟು ಹೆಚ್ಚು ಪ್ರಮಾಣದ ಸಾಹಿತ್ಯ ಯಾವುದೂ ಬರಲಿಲ್ಲ. ಬಹಳ ವಿಸ್ತಾರವಾಗಿ ಬಂದಿದ್ದೇ ಕಾದಂಬರಿ’ ಎಂದು ಬಣ್ಣಿಸಿದರು.

‘ಸಾಮಾಜಿಕ, ಐತಿಹಾಸಿಕ, ಮನೊ ವಿಶ್ಲೇಷಣಾತ್ಮಕ, ವೈಜ್ಞಾನಿಕ ಕಾದಂಬರಿಗಳಿವೆ. ಅದರಲ್ಲಿ ವಿವಿಧ ರೀತಿಯ ಅನ್ವೇಷಣೆಗಳು ಇನ್ನೂ ನಡೆಯುತ್ತಿವೆ. ನವ್ಯ ಕಾದಂಬರಿಗಳಲ್ಲಿ ಇವತ್ತಿಗೂ ಪೂರ್ಣ ಅರ್ಥವಾಗದ ಕಾದಂಬರಿಗಳು ಕೂಡ ಇವೆ. ಅವು ಹೊಸ ಪ್ರಯೋಗ, ಆವಿಷ್ಕಾರಗಳಾಗಿ ಕಾಣಿಸಿಕೊಳ್ಳುತ್ತಿವೆ’ ಎಂದು ಹೇಳಿದರು.

‘ಮಂಜುಳಾ ಡಾ.ಸ್ವಾಮಿ ಬರೆದಿರುವ ಅಂತರ ಕಾದಂಬರಿ ಕೆಲ ದಶಕಗಳ ಹಿಂದೆ ಇದ್ದಂತಹ ಮಧ್ಯಮ ವರ್ಗದ ಕುಟುಂಬದ ಕಥೆ. ಬಹಳ ಅಚ್ಚುಕಟ್ಟಾಗಿದೆ. ಸಹಜ ಅರಿವಿನಿಂದ ಸಾಗಿರುವ ಇದು ಸರಳ ವಸ್ತು, ನಿರೂಪಣೆಯಿಂದ ಕೂಡಿದೆ’ ಎಂದು ಬಣ್ಣಿಸಿದರು.

ಚಿತ್ರದುರ್ಗ ಆಕಾಶವಾಣಿ ಮುಖ್ಯಸ್ಥ ಎಂ.ಜಿ.ವೇದಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಡಾ.ಕೆ.ಆರ್.ಆನಂದ ಋಗ್ವೇದಿ, ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಎಸ್. ಉಮಾಶಂಕರ್ ಕೊಂಡ್ಲಹಳ್ಳಿ, ಜಿಲ್ಲಾ ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಅಧ್ಯಕ್ಷೆ ದಯಾ ಪುತ್ತೂರ್ಕರ್, ಕಥೆಗಾರ ಎಚ್.ಬಿ. ಇಂದ್ರಕುಮಾರ್, ಲೇಖಕಿ ಎಂ.ಎಸ್. ಮಂಜುಳಾ ಡಾ.ಸ್ವಾಮಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !