ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳ್ಳಕೆರೆ| ಬೇಸಿಗೆ ಶೇಂಗಾ ಬೆಳೆಗೆ ಕರಿಜೀಡೆ ಕೀಟಬಾಧೆ

ಹಿಂಗಾರು ಹಂಗಾಮಿನ ಶೇಂಗಾಗೆ ರೋಗ: ರೈತರಲ್ಲಿ ಆತಂಕ
Last Updated 5 ಫೆಬ್ರುವರಿ 2023, 7:00 IST
ಅಕ್ಷರ ಗಾತ್ರ

ಚಳ್ಳಕೆರೆ: ಮುಂಗಾರು ಹಂಗಾಮಿಗೆ ಬಿತ್ತನೆ ಬೀಜ ಪೂರೈಸುವ ಉದ್ದೇಶದಿಂದ ನೀರಾವರಿ ಪ್ರದೇಶದಲ್ಲಿ ಬೆಳೆದಿರುವ ಹಿಂಗಾರು ಹಂಗಾಮಿನ ಶೇಂಗಾ ಬೆಳೆಗೆ ಕರಿಜೀಡೆ ಕೀಟಬಾಧೆ ಕಾಣಿಸಿಕೊಂಡಿದ್ದು, ರೈತರಲ್ಲಿ ಆತಂಕ ಎದುರಾಗಿದೆ.

ತಾಲ್ಲೂಕಿನ ರಾಮಜೋಗಿಹಳ್ಳಿ, ನನ್ನಿವಾಳ, ಸೋಮಗುದ್ದು, ಸಾಣಿಕೆರೆ, ದೊಡ್ಡಉಳ್ಳಾರ್ತಿ, ಬುಡ್ನಹಟ್ಟಿ, ನೇರಲಗುಂಟೆ, ಚಿಕ್ಕೇನಹಳ್ಳಿ, ಗೋಪನಹಳ್ಳಿ, ದೇವರಮರಿಕುಂಟೆ, ಗೋಸಿಕೆರೆ, ಚನ್ನಮ್ಮನಾಗತಿಹಳ್ಳಿ,
ತಳಕು ಮುಂತಾದ ಗ್ರಾಮ ಸೇರಿ ತಾಲ್ಲೂಕಿನಲ್ಲಿ ಒಟ್ಟು 115 ಹೆಕ್ಟೇರ್‌ ನೀರಾವರಿ ಪ್ರದೇಶದಲ್ಲಿ ಶೇಂಗಾ ಬಿತ್ತನೆ ಮಾಡಲಾಗಿದೆ. ಬಿತ್ತನೆ ಮಾಡಿರುವ ಬಹುತೇಕ ಶೇಂಗಾ ಗಿಡಗಳು ಹೂವು ಕಟ್ಟುತ್ತಿವೆ. ಫಸಲು ಉತ್ತಮ ಇಳುವರಿಯಲ್ಲಿ ಬರುತ್ತದೆ ಎಂದು ರೈತರು, ಎಡೆಕುಂಟೆ ಬೇಸಾಯದ ಮೂಲಕ ಶೇಂಗಾ ಬೆಳೆಯ ಮಧ್ಯೆ ಬೆಳೆದಿರುವ ಕಳೆ (ಹುಲ್ಲು) ಕೀಳುವುದರಲ್ಲಿ
ತೊಡಗಿಸಿಕೊಂಡಿದ್ದಾರೆ.

ಈ ಮಧ್ಯೆ ಬೆಳೆಗೆ ಕಾಣಿಸಿಕೊಂಡಿರುವ ಕರಿಜೀಡಿಗೆಯ ಕೀಟಗಳು, ಶೇಂಗಾ ಗಿಡದ ಹೂವು ಮತ್ತು ಹಸಿರೆಲೆಯನ್ನು ತಿಂದು ಹಾಕುತ್ತಿವೆ. ಕೀಟಬಾಧೆ ಹತೋಟಿಗೆ ಬರದಿದ್ದರೆ ಫಸಲಿಗೆ ಹಾಕಿದ ಬಿಡಿಗಾಸು ದೊರೆಯುವುದಿಲ್ಲ.

‘ಮುಂಗಾರು ಹಂಗಾಮಿನಲ್ಲಿ ಬಿದ್ದ ಮಳೆಯ ಹೆಚ್ಚಳದಿಂದ ಶೇಂಗಾ ಬೆಳೆ ಸಂಪೂರ್ಣ ನಷ್ಟವಾಗಿತ್ತು. ಬೇಸಿಗೆಯಲ್ಲಾದರೂ ಉತ್ತಮ ಆದಾಯ ಪಡೆಯುವ ನಿರೀಕ್ಷೆಯೊಂದಿಗೆ ಭೂಮಿಯನ್ನು ಹದಗೊಳಿಸಿ, ಕೊಟ್ಟಿಗೆ ಗೊಬ್ಬರ ಹಾಕಲಾಗಿತ್ತು. ಬೆಳೆಗೆ ಕೀಟಬಾಧೆ ಎದುರಾಗಿರುವುದರಿಂದ ನಷ್ಟದ ಭೀತಿ ಎದುರಾಗಿದೆ ಎಂದು ಬಂಡೆಹಟ್ಟಿ ಗ್ರಾಮದ ರೈತ ಜಯಣ್ಣ ತಿಳಿಸಿದರು.

‘ಎರಡು ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದೇನೆ. ಉತ್ತಮ ಇಳುವರಿ ಬಂದಿದೆ. ಕೀಟಬಾಧೆ ನಿಯಂತ್ರಣವಾದರೆ ಎಕರೆಗೆ ಕನಿಷ್ಠ 30 ಚೀಲ ಶೇಂಗಾ ಬರುವ ನಿರೀಕ್ಷೆ ಇದೆ. ಹಾಗಾಗಿ ವಾರಕ್ಕೆ ಎರಡು ಸಲ ಬೆಳೆಗೆ ತಪ್ಪದೇ ನೀರು ಹಾಯಿಸುತ್ತಿದ್ದೇನೆ’ ಎಂದರು.

ಉಷ್ಣಾಂಶ ಹೆಚ್ಚಳದಿಂದ ಕೀಟಬಾಧೆ

ಬೇಸಿಗೆಯಲ್ಲಿ ಉಷ್ಣತೆ ಹೆಚ್ಚಾಗುವುದರಿಂದ ಶೇಂಗಾ ಬೆಳೆಗೆ ಸಹಜವಾಗಿ ಕರಿಜೀಡಿಗೆ ಕೀಟಬಾಧೆ ಕಾಣಿಸಿಕೊಳ್ಳುತ್ತದೆ. ಅಲ್ಪ-ಸ್ವಲ್ಪ ಮಳೆಬಿದ್ದರೂ ಅಥವಾ ಬೇವಿನ ಎಣ್ಣೆ ಮಿಶ್ರಣದ ನೀರನ್ನು ಗಿಡಕ್ಕೆ ಸಿಂಪಡಣೆ ಮಾಡಿದರೆ ರೋಗ ನಿವಾರಣೆಯಾಗುತ್ತದೆ. 2 ಎಂ.ಎಲ್ ಪ್ಲೊರಪಸ್ ಅನ್ನು ಲೀಟರ್ ನೀರಿನೊಂದಿಗೆ ಮಿಶ್ರಣ ಮಾಡಿ ಸಿಂಪಡಣೆ ಮಾಡಿದರೆ ಕೀಟಬಾಧೆ ಹತೋಟಿಗೆ ಬರುತ್ತದೆ ಎಂದು ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ರವಿ ರೈತರಿಗೆ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT