ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಳಕಾಲ್ಮುರು: ಪ್ರಾಣದೇವರ ವೈಭವದ ಬ್ರಹ್ಮ ರಥೋತ್ಸವ

Last Updated 6 ಫೆಬ್ರುವರಿ 2023, 5:31 IST
ಅಕ್ಷರ ಗಾತ್ರ

ಮೊಳಕಾಲ್ಮುರು: ತಾಲ್ಲೂಕಿನ ಐತಿಹಾಸಿಕ ಬಾಂಡ್ರಾವಿಯ ಆಂಜನೇಯ ಸ್ವಾಮಿ ಮುಖ್ಯ ಪ್ರಾಣದೇವರ ಬ್ರಹ್ಮರಥೋತ್ಸವ ಭಾನುವಾರ ವೈಭವದಿಂದ ನಡೆಯಿತು.

ಪ್ರತಿವರ್ಷ ಭರತ ಹುಣ್ಣಿಮೆಯಂದು ಈ ಬ್ರಹ್ಮ ರಥೋತ್ಸವ ನಡೆಸಿಕೊಂಡು ಬರುವುದು ವಾಡಿಕೆ. ಈ ಪುರಾತನ ದೇವಸ್ಥಾನದಲ್ಲಿ 700 ವರ್ಷಗಳ ಹಿಂದೆ ಪ್ರತಿಷ್ಠಾಪನೆ ಮಾಡಿರುವ ನಾರಾಯಣ ರೂಪಿ ರಾಮ, ಸೀತೆ, ಭರತ ಮತ್ತು ಆಂಜನೇಯ ಸ್ವಾಮಿ ವಿಗ್ರಹಗಳಿವೆ. ಹಂಪಿಯ ಪ್ರಸನ್ನರಾಮ ಯಥಿಗಳು ಇವುಗಳನ್ನು ಪ್ರತಿಷ್ಠಾಪನೆ ಮಾಡಿರುವ ಹಿನ್ನೆಲೆ ಹೊಂದಿದೆ.

ಆಂಜನೇಯ ಸ್ವಾಮಿಯು ಮಹಾಭಾರತ ಸಂಬಂಧ ಹೊಂದಿದ್ದು, ಮಹಾಭಾರತ ಮುಕ್ತಾಯ ಸಮಯದಲ್ಲಿ ಇಲ್ಲಿ ಅರ್ಜುನನ ಮೊಮ್ಮಗ ಜಗಮೇಜಯ ರಾಜ ಪ್ರಾಣವಾಯು ಆಂಜನೇಯ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿಸಿದನು ಎನ್ನಲಾಗಿದೆ. ಹಂಪಿಯ ವ್ಯಾಸರಾಯರು ಕುಂಭಾಭಿಷೇಕ ಮಾಡಿದ್ದು, ಕಲಿಯುಗ ಆರಂಭದಲ್ಲಿ ಪೂರ್ವಿಕರಿಗೆ ಮೋಕ್ಷ ಸಿಗಲಿ ಎಂದು ಧ್ಯಾನ ಮಾಡುವಾಗ ಉದ್ಭವವಾಗಿರುವ ಮೂರ್ತಿ ಎಂಬ ಐತಿಹ್ಯವಿದೆ.

‘ನಮ್ಮ ದೇಶದಲ್ಲಿ ಮಹಾಭಾರತ ಕಾಲದ ಏಳು ವಿಗ್ರಹಗಳಿದ್ದು, ಇದರಲ್ಲಿ ಇದೂ ಒಂದಾಗಿದೆ. ಆಂಜನೇಯನನ್ನು ಪ್ರಾಣದೇವರು, ಭೀಮಸೇನ ದೇವರು, ಆಚಾರ್ಯ ಎಂಬ ಮೂರು ರೂಪಗಳಲ್ಲಿ ಕಾಣಬಹುದು’ ಎಂದು ದೇವಸ್ಥಾನದ ಅರ್ಚಕ ವೇಣುಗೋಪಾಲ್ ಹೇಳಿದರು.

ರಥೋತ್ಸವ ಅಂಗವಾಗಿ ಶನಿವಾರ ಬೆಳಿಗ್ಗೆ ರಾಘವೇಂದ್ರ ಅಷ್ಟೋತ್ತರ ಪಾರಾಯಣ, ಗೋಪೋಜೆ, ಪಂಚಾಮೃತ ಅಭಿಷೇಕ, ವಾಸ್ತುಸ್ತುತಿ ಪುನಚ್ಛರಣೆ, ಸೀತಾರಾಮಚಂದ್ರ ಕಲ್ಯಾಣೋತ್ಸವ, ದುರ್ಗಾಪೂಜೆ ನಡೆಸಲಾಯಿತು.

ಭಾನುವಾರ ನಿರ್ಮಾಲ್ಯ, ವಿಷ್ಣು ಸಹಸ್ರನಾಮ, ಅಲಂಕಾರ, ಬ್ರಹ್ಮರಥೋತ್ಸವ ಸಿದ್ಧತೆ, ಮಹಾಮಂಗಳಾರತಿ ನಡೆಸಿದ ನಂತರ ಸಂಜೆ 4 ಗಂಟೆಗೆ ಬ್ರಹ್ಮ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ಸೋಮವಾರ ಹಲವು ಧಾರ್ಮಿಕ ಕಾರ್ಯಕ್ರಮಗಳ ನಂತರ ರಥೋತ್ಸವಕ್ಕೆ ತೆರೆಬೀಳಲಿದೆ. ಚಿತ್ರದುರ್ಗ, ಬಳ್ಳಾರಿ, ವಿಜಯನಗರ ಜಿಲ್ಲೆಗಳಿಂದ ಸಹಸ್ರಾರು ಭಕ್ತರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT