ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯೂರು: ವಾಣಿವಿಲಾಸ ಜಲಾಶಯದ ಕೋಡಿಗೆ ಸೇತುವೆ

ಮೂರೂವರೆ ತಿಂಗಳ ನಂತರ ಬಸ್ ಸಂಚಾರ ಆರಂಭ
Last Updated 17 ಜನವರಿ 2023, 5:05 IST
ಅಕ್ಷರ ಗಾತ್ರ

ಹಿರಿಯೂರು: ತಾಲ್ಲೂಕಿನ ವಾಣಿವಿಲಾಸ ಜಲಾಶಯದ ಕೋಡಿಗೆ ತಾತ್ಕಾಲಿಕ ಸೇತುವೆ ನಿರ್ಮಿಸುವ ಕಾಮಗಾರಿ ಪೂರ್ಣಗೊಂಡಿದ್ದು, ಸೋಮವಾರ ಖಾಸಗಿ ಬಸ್‌ಗಳು ಕೋಡಿ ರಸ್ತೆಯ ಮೂಲಕ ಹೊಸದುರ್ಗ–ಹಿರಿಯೂರು ನಡುವೆ ಸಂಚರಿಸಿದವು.

ತಾಲ್ಲೂಕು ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಜಬೀವುಲ್ಲಾ, ಹೊಸದುರ್ಗ ಮಾರ್ಗದಲ್ಲಿ ಸಂಚರಿಸುವ ಎಸ್ ಎಲ್‌ಎನ್‌ಎಸ್ ಬಸ್ ಮಾಲೀಕರು ಹಾಗೂ ವಾಣಿವಿಲಾಸಪುರ ಗ್ರಾಮಸ್ಥರ ಸಹಕಾರದೊಂದಿಗೆ ಸೇತುವೆ ನಿರ್ಮಿಸಲಾಗಿದೆ.

ಕೋಡಿಯ ನೀರು ಹರಿದು ಹೋಗಲು ದೊಡ್ಡ ಗಾತ್ರದ ಪೈಪ್ ಅಳವಡಿಸಿದ ನಂತರ, ನೀರಿನ ಹರಿವಿನಿಂದ ಹಾಳಾಗಿದ್ದ ರಸ್ತೆಯ ಅಂಚಿಗೆ ಮಣ್ಣು ತುಂಬಿಸಲಾಯಿತು. ಭಾನುವಾರ ಪ್ರಯೋಗಾತ್ಮಕವಾಗಿ ಕಾರು, ಟಾಟಾ ಏಸ್, ಟೆಂಪೊ ಟ್ರಾವೆಲರ್ ವಾಹನಗಳನ್ನು ಓಡಿಸಲಾಗಿತ್ತು. ತಾತ್ಕಾಲಿಕ ರಸ್ತೆ ವಾಹನಗಳ ಓಡಾಟಕ್ಕೆ ಸುರಕ್ಷಿತ ಎನಿಸಿದ ಮೇಲೆ ಸೋಮವಾರ ಬಸ್‌ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಮೂರೂವರೆ ತಿಂಗಳ ನಂತರ ಈ ರಸ್ತೆಯಲ್ಲಿ ವಾಹನಗಳ ಓಡಾಟ ಆರಂಭಗೊಂಡಂತೆ ಆಗಿದೆ.

‘ಖಾಸಗಿ ಬಸ್ ನಡೆಸುವುದು ಸುಲಭವಲ್ಲ. ಮಾರ್ಗದ ಪರವಾನಗಿ ಪಡೆಯಲು, ಪರವಾನಗಿ ನವೀಕರಣ, ಎಫ್‌ಸಿ ಮಾಡಿಸಲು ಬಸ್ ಮಾಲೀಕರು ಅನುಭವಿಸುವ ಕಷ್ಟ ಹೇಳತೀರದು. ಬಸ್ ಖರೀದಿ ದರ ಹೆಚ್ಚಿದೆ. ಇಂಧನ ಬೆಲೆ, ಚಾಲಕ–ನಿರ್ವಾಹಕರಿಗೆ ಕೊಡುವ ವೇತನ, ನಿಲ್ದಾಣದ ಏಜೆಂಟರಿಗೆ ಕೊಡುವ ಕಮೀಷನ್ ಲೆಕ್ಕ ಹಾಕಿದರೆ ಇದರ ಸಹವಾಸವೇ ಬೇಡ ಎನಿಸುತ್ತದೆ. ಕೋವಿಡ್ ಸಮಯದಲ್ಲಿ ಪಟ್ಟ ಕಷ್ಟ ಹೇಳತೀರದು’ ಎಂದು ಬಸ್ ಮಾಲೀಕರ ಸಂಘದ ಅಧ್ಯಕ್ಷ ಜಬೀವುಲ್ಲಾ ಹೇಳಿದರು.

‘ಖಾಸಗಿ ಬಸ್ ಗಳು ಹಿರಿಯೂರು–ಹೊಸದುರ್ಗ–ಚಳ್ಳಕೆರೆ– ಪಾವಗಡ ಮಾರ್ಗದಲ್ಲಿ ಹೆಚ್ಚು ಸಂಚರಿಸುತ್ತವೆ. ಹಿರಿಯೂರು–ಹೊಸದುರ್ಗ ನಡುವೆ ಬಸ್ ಓಡಾಟ ಹೆಚ್ಚಿದೆ. ನಿತ್ಯ 10 ಕಿ.ಮೀ. ಸುತ್ತಿಕೊಂಡು ಹೋಗುವುದು ಆರ್ಥಿಕವಾಗಿ ಹೊರೆಯಾಗಿತ್ತು. ವಾಣಿವಿಲಾಸಪುರ ಗ್ರಾಮಸ್ಥರು ತಾತ್ಕಾಲಿಕ ರಸ್ತೆ ನಿರ್ಮಾಣಕ್ಕೆ ಸಹಕಾರ ನೀಡುವ ಭರವಸೆ ನೀಡಿದ್ದರಿಂದ ನಾನು ಮತ್ತು ಎಸ್ಎಲ್ಎನ್ ಬಸ್ ಮಾಲೀಕರು ಹಣ ತೊಡಗಿಸಿದೆವು. ₹70,000 ಖರ್ಚು ಆಗಿದೆ. ಸರ್ಕಾರ ಶಾಶ್ವತ ರಸ್ತೆ ನಿರ್ಮಿಸಬೇಕು’ ಎಂದು ಅವರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT