ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯಕದಿಂದಲೇ ಬಲಿಷ್ಠ ರಾಷ್ಟ್ರ ನಿರ್ಮಿಸಿ: ಶಿವಮೂರ್ತಿ ಮುರುಘಾ ಶರಣರು

‘ನಿತ್ಯ ಕಲ್ಯಾಣ’ ಕಾರ್ಯಕ್ರಮದಲ್ಲಿ ಶಿವಮೂರ್ತಿ ಮುರುಘಾ ಶರಣರು
Last Updated 12 ಆಗಸ್ಟ್ 2021, 6:27 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ನಿತ್ಯ ಮಾಡುವ ಕ್ರಿಯೆಯೇ ಪೂಜೆಯಾಗಬೇಕು. ಕಾಯಕವೇ ಕೈಲಾಸ ಎಂದುಕೊಂಡಾಗ ಮಾತ್ರ ಬಸವಾದಿ ಶರಣರ ಹಿತನುಡಿ ಸಾರ್ಥಕವಾಗುತ್ತದೆ. ಇದರಿಂದಲೇ ಬಲಿಷ್ಠ ರಾಷ್ಟ್ರ ನಿರ್ಮಿಸಬೇಕಿದೆ’ ಎಂದು ಶಿವಮೂರ್ತಿ ಮುರುಘಾ ಶರಣರು ಸಲಹೆ ನೀಡಿದರು.

ತಾಲ್ಲೂಕಿನ ಗೋನೂರಿನಲ್ಲಿ ಇರುವ ‘ಭೂ’ವನ ನರ್ಸರಿಯಲ್ಲಿ ನಡೆದ ‘ನಿತ್ಯ ಕಲ್ಯಾಣ’ ಎರಡನೇ ದಿನದ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು.

‘ಶರಣ ಪರಂಪರೆಯದ್ದು, ಅಧ್ಯಾತ್ಮ ಸಹಿತ ಅಭಿವೃದ್ಧಿ ಆಗಿದೆ. ಕಾಯಕ ಸಂಸ್ಕೃತಿಯ ಮಹತ್ವ ಸಾರುವ ಮೂಲಕ ಸುಖೀ ಸಂಸಾರದ ಕುರಿತು ಜಾಗೃತಿ ಮೂಡಿಸಿದರು. ಅಂತಃಕರಣ ಆಗಿರುವ ಅಧ್ಯಾತ್ಮದಿಂದ ಅಭಿವೃದ್ಧಿಗೆ ನಾಂದಿ ಹಾಡಿದರು’ ಎಂದರು.

ಸರ್ವಜ್ಞ ಯಾವುದೇ ಪದವಿ ಪಡೆದವರಲ್ಲ. ಆದರೂ ಜ್ಞಾನಿಯಾದರು. ಸ್ವಾಮಿ ವಿವೇಕಾನಂದರು ವಿಶ್ವಕ್ಕೆ ತತ್ವಜ್ಞಾನ ಸಾರಿದರು. ಗಾಂಧೀಜಿ ಶಾಂತಿ
ಮಂತ್ರ ಪಠಿಸಿದರು. ಇವೆಲ್ಲವೂ ಉತ್ತಮಸಮಾಜ ನಿರ್ಮಿಸುವ ನಿಟ್ಟಿನಲ್ಲಿ ನಡೆದ ಪ್ರಯತ್ನಗಳು. ಆದರೆ, ಇಂದು ಉನ್ನತ ಪದವಿ ಪಡೆದರು ಅನೇಕರಿಗೆ ಲೋಕಜ್ಞಾನವಾಗಲಿ, ತಿಳಿವಳಿಕೆಯಾಗಲಿ ಇಲ್ಲ. ಆದ್ದರಿಂದ ಲೋಕಜ್ಞಾನದ ಅರಿವು ಮೂಡಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.

ಬಸವನಾಗಿದೇವ ಸ್ವಾಮೀಜಿ, ‘ಬಸವಣ್ಣ ಅವರ ಪರಂಪರೆ ನಶಿಸಬಾರದು ಎಂಬ ಕಾರಣಕ್ಕೆ ಮುರುಘಾ ಶರಣರು ಎಲ್ಲ ಸಮುದಾಯದವರಿಗೆ ದೀಕ್ಷೆ ನೀಡಿ ಸಮಾಜಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಸಮಸಮಾಜ ನಿರ್ಮಿಸುವ ಗುರಿ ಹೊಂದಿದ್ದಾರೆ’ ಎಂದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಕೆ. ಚೋಳರಾಜಪ್ಪ, ‘ರೈತರು ಕೃಷಿಗೆ ಯೋಗ್ಯವಲ್ಲದ ಜಾಗದಲ್ಲಿ ಜೈವಿಕ ಇಂಧನದ ಗಿಡಗಳನ್ನು ಬೆಳೆಸಬಹುದು. ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಅಡಿ 3 ವರ್ಷಗಳ ಕಾಲ ಅನುದಾನ ಪಡೆದು ಸ್ವಾವಲಂಬಿ ಆಗಬಹುದು’ ಎಂದು ಹೇಳಿದರು.

ಇದೇ ವೇಳೆ ಜಿಲ್ಲಾ ಜೈವಿಕ ಇಂಧನ ಉಸ್ತುವಾರಿ ಸಮಿತಿ, ಜೈವಿಕ ಇಂಧನ ಸಂಶೋಧನೆ, ಮಾಹಿತಿ ಮತ್ತು ಪ್ರಾತ್ಯಕ್ಷಿಕಾ ಕೇಂದ್ರ, ಎಸ್‌ಜೆಎಂಐಟಿ ಹಾಗೂ ಜಿಲ್ಲಾ ಜೈವಿಕ ಇಂಧನ ಮುಂದಾಳು ಸ್ಪೀಚ್ ಸಂಸ್ಥೆಯಿಂದ ಅಂತರರಾಷ್ಟ್ರೀಯ ಜೈವಿಕ ಇಂಧನ ದಿನಾಚರಣೆ ನಡೆಯಿತು.

ಗೋನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ, ನಬಾರ್ಡ್‌ನ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಕವಿತಾ ಶಶಿಧರ್, ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ, ಜೆಎಂಐಟಿ ಪ್ರಾಂಶುಪಾಲ ಡಾ.ಬಿ.ಸಿ. ಶಾಂತಪ್ಪ, ಪಿಡಿಒ ಯರ್ರಿಸ್ವಾಮಿ, ಜೈವಿಕ ಇಂಧನ ಮುಖ್ಯ ಸಂಯೋಜಕ ಡಾ.ಪಿ.ಬಿ. ಭರತ್, ಎಚ್.ಸಿ. ನಿರಂಜನಮೂರ್ತಿ, ಎಚ್‌.ಶೇಷಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT