ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಗಿತಗೊಂಡ ಸಾರಿಗೆ ಸೇವೆ: ವಿದ್ಯಾರ್ಥಿಗಳ ಅಳಲು

ಸಾರಿಗೆ ಸಚಿವರ ಕ್ಷೇತ್ರದಲ್ಲಿ ಸಮಸ್ಯೆ; 8 ಕಿ.ಮೀ ನಡೆಯಬೇಕಾದ ಅನಿವಾರ್ಯತೆ
Last Updated 23 ಸೆಪ್ಟೆಂಬರ್ 2021, 4:02 IST
ಅಕ್ಷರ ಗಾತ್ರ

ಮೊಳಕಾಲ್ಮುರು: ತಾಲ್ಲೂಕಿನ ಕೋನಾಪುರಕ್ಕೆ ಸಾರಿಗೆ ಸೌಲಭ್ಯ ಸ್ಥಗಿತವಾಗಿರುವ ಪರಿಣಾಮವಾಗಿ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ದೇವಸಮುದ್ರ ಹೋಬಳಿಯ ಆಂಧ್ರ ಗಡಿಭಾಗದಲ್ಲಿರುವ ಕೋನಾಪುರ ಪರಿಶಿಷ್ಟ ಜಾತಿ, ಪಂಗಡ, ಕೂಲಿ ಕಾರ್ಮಿಕರು ಹೆಚ್ಚಾಗಿರುವ ಕುಗ್ರಾಮ. ಇಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಸೌಲಭ್ಯವಿದೆ. ಪ್ರೌಢಶಿಕ್ಷಣ, ಕಾಲೇಜು ಶಿಕ್ಷಣಕ್ಕೆ ರಾಂಪುರ, ತಮ್ಮೇನಹಳ್ಳಿ, ಬಳ್ಳಾರಿಗೆ ಹೋಗಬೇಕಾಗಿದೆ.

ರಾಂಪುರದಿಂದ ಬಳ್ಳಾರಿಗೆ ಹೋಗುವಾಗ ಮಧ್ಯದಲ್ಲಿ ಕೋನಾಪುರ ಕ್ರಾಸ್ ಬರುತ್ತದೆ. ಇಲ್ಲಿಂದ 4 ಕಿ.ಮೀ ನಡೆದು ವಿದ್ಯಾರ್ಥಿಗಳು ಗ್ರಾಮಕ್ಕೆ ಹೋಗಬೇಕಿದೆ.ಫೆ. 21ರಂದು ಕೋನಾಪುರದಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನೀಕೇರಿ ಗ್ರಾಮ ವಾಸ್ತವ್ಯ ಹೂಡಿದ್ದರು. ಈ ವೇಳೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಪ್ರಮುಖ ಬೇಡಿಕೆ ಬಂದಿತ್ತು. ಸ್ಪಂದಿಸಿದ ಜಿಲ್ಲಾಧಿಕಾರಿ ಬಳ್ಳಾರಿ ಡಿಪೊದ ಒಂದು ಬಸ್‌ ದಿನಕ್ಕೆ ನಾಲ್ಕು ಸಾರಿ ಬಂದು ಹೋಗುವ ವ್ಯವಸ್ಥೆ ಮಾಡಲಾಗಿತ್ತು. ಸಾಮಾಜಿಕ ಜಾಲ ತಾಣಗಳಲ್ಲಿ ಇದಕ್ಕೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿತ್ತು.

ಆದರೆ 15-20 ದಿನ ಬಸ್ ಸಂಚಾರದ ನಂತರ ಕೋವಿಡ್ ಲಾಕ್‌ಡೌನ್ ಎದುರಾಗಿ ಶಾಲೆ-ಕಾಲೇಜು ಸ್ಥಗಿತವಾದವು. ಬಸ್ ಸಂಚಾರವೂ ಸ್ಥಗಿತವಾಯಿತು.ಈಗ ಮತ್ತೆ ಶಾಲೆ-ಕಾಲೇಜು ಆರಂಭವಾಗಿದೆ. ಆದರೆ ಬಸ್ ಸೇವೆ ಮಾತ್ರ ಆರಂಭವಾಗಿಲ್ಲ. ಪರಿಣಾಮ ನಿತ್ಯ ಒಟ್ಟು 8 ಕಿ.ಮೀ ನಡೆದು ಶಾಲೆಗೆ ಹೋಗಿ ಬರಬೇಕಾಗಿದೆ. ಈಚೆಗೆ ಈ ಭಾಗದಲ್ಲಿ ಬಾರ್‌ಗಳು ಆರಂಭವಾಗಿದ್ದು, ಆಂಧ್ರದಿಂದ ಸಾಕಷ್ಟು ಜನರು ಮದ್ಯಸೇವನೆಗೆ ಬರುತ್ತಾರೆ. ಇದೇ ದಾರಿಯಲ್ಲಿ ಅವರು ಓಡಾಡುತ್ತಾರೆ. ಇದರಿಂದ ಓಡಾಡಲು ಭಯವಾಗುತ್ತಿದೆ ಎಂದು ವಿದ್ಯಾರ್ಥಿನಿಯರು
ದೂರಿದ್ದಾರೆ.

ಗ್ರಾಮದ ವಕೀಲ ಜಿ. ಕುಮಾರಗೌಡ ಮಾತನಾಡಿ, ‘ಜಿಲ್ಲಾಧಿಕಾರಿ ಗ್ರಾಮವಾಸ್ತವ್ಯದ ಸಮಯದಲ್ಲಿ ಸಚಿವ ಬಿ. ಶ್ರೀರಾಮುಲು ಸಹ ಗ್ರಾಮಕ್ಕೆ ಭೇಟಿ ನೀಡಿ ಅಹವಾಲು ಆಲಿಸಿದ್ದರು. ಬಸ್ ವ್ಯವಸ್ಥೆ ಸಹ ಮಾಡಿದ್ದರು. ಈಗ ಮರು ಆರಂಭವಾಗದ ಪರಿಣಾಮವಾಗಿ ವಿದ್ಯಾರ್ಥಿಗಳಿಗೆ, ಬಳ್ಳಾರಿ, ರಾಂಪುರಕ್ಕೆ ನಿತ್ಯ ಹೋಗಿ ಬರುವ ಕೂಲಿ ಕಾರ್ಮಿಕರಿಗೆ ತೊಂದರೆಯಾಗಿದೆ. ತಕ್ಷಣವೇ ಬಸ್ ಆರಂಭಿಸಬೇಕು’ ಎಂದು ಮನವಿ
ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT