ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾಣೆಯಾಗಿವೆ’ ಪ್ರಯಾಣಿಕರ ತಂಗುದಾಣ

ಜಿಲ್ಲಾ ಕೇಂದ್ರದಲ್ಲಿ ರಸ್ತೆಯಲ್ಲೇ ನಿಲ್ಲುವ ಜನತೆ – ಬಸ್‌ಗೆ ಕಾಯುವವರ ಸ್ಥಿತಿ ಅಯೋಮಯ
Last Updated 8 ಆಗಸ್ಟ್ 2022, 5:21 IST
ಅಕ್ಷರ ಗಾತ್ರ

ಚಿತ್ರದುರ್ಗ: ಇತಿಹಾಸದಲ್ಲಿ ಮಹತ್ತರ ಮೌಲ್ಯ ಹೊಂದಿರುವ ಚಿತ್ರದುರ್ಗ ಜಿಲ್ಲೆ ಪ್ರಸ್ತುತ ದಿನದಲ್ಲೂ ಕನಿಷ್ಠ ಮೂಲಸೌಕರ್ಯಗಳಿಂದ ವಂಚಿತವಾಗಿದೆ. ಕೆಲ ವರ್ಷಗಳ ಹಿಂದೆ ಜಿಲ್ಲಾ ಕೇಂದ್ರಗಳಾಗಿ ಘೋಷಣೆಯಾದ ನಗರಗಳು ಜಿಂಕೆಯ ವೇಗದಲ್ಲಿ ಅಭಿವೃದ್ಧಿ ಹೊಂದುತ್ತಿದ್ದರೂ ಇಲ್ಲಿಯ ಜನತೆ ಮಾತ್ರ ‘ಪ್ರಯಾಣಿಕರ ತಂಗುದಾಣಗಳನ್ನು ಹುಡುಕಿಕೊಡಿ’ ಎನ್ನುತ್ತಿದ್ದಾರೆ.

ಗ್ರಾಮೀಣ ಪ್ರದೇಶಗಳ ಜೊತೆಗೆ ಜಿಲ್ಲಾ ಕೇಂದ್ರದಲ್ಲೂ ಪ್ರಯಾಣಿಕರ ತಂಗುದಾಣಗಳು ಕಾಣದಂತಾಗಿವೆ. ವಿವಿಧೆಡೆ ಇದ್ದೂ ಇಲ್ಲದಂತಹ ಶೋಚನೀಯ ಸ್ಥಿತಿಯಲ್ಲಿವೆ. ಚಾವಣಿಯಂತಿದ್ದ ಸ್ಟೀಲ್ ಶೀಟ್‌ಗಳು ಹಾರಿ ಹೋಗಿವೆ. ಕುಳಿತುಕೊಳ್ಳುವ ಆಸನಗಳೂ ಸರಿ ಇಲ್ಲ. ಸ್ವಚ್ಛತೆಯೂ ಇಲ್ಲದೇ, ನಿರ್ವಹಣೆ ಕೊರತೆಯಿಂದಾಗಿ ಸಂಪೂರ್ಣ ಹಾಳಾಗಿವೆ.

ನಗರ ಸಾರಿಗೆ ಆರಂಭಕ್ಕೂ ಮುನ್ನ ಜಿಲ್ಲಾ ಆಸ್ಪತ್ರೆ ಮುಂಭಾಗ, ತಿಪ್ಪಜ್ಜಿ ವೃತ್ತದಲ್ಲಿ ತಂಗುದಾಣಗಳಿದ್ದವು. ನಗರದಲ್ಲಿ ಮೊದಲ ಬಾರಿಗೆ ನಗರ ಸಾರಿಗೆ ಆರಂಭವಾದಾಗ ಮುಖ್ಯಮಂತ್ರಿಯ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಅನುದಾನದಡಿ 2009– 10ನೇ ಸಾಲಿನಲ್ಲಿ ಹಾಗೂ ಬಿಆರ್‌ಜಿಎಫ್‌ 2007–08ನೇ ಸಾಲಿನ ಅನುದಾನದಡಿ ಪ್ರಯಾಣಿಕರ ಅನುಕೂಲಕ್ಕಾಗಿ ಕೆಲವೆಡೆ ಬಸ್‌ ತಂಗುದಾಣಗಳನ್ನು ನಿರ್ಮಿಸಲಾಯಿತು.

ಕೆಲ ದಿನಕ್ಕೆ ಬಸ್‌ ಸಂಚಾರ ಸ್ಥಗಿತಗೊಂಡ ಕಾರಣ ಬಹುತೇಕ ಕಡೆ ಸಮರ್ಪಕ ನಿರ್ವಹಣೆ ಇಲ್ಲದೆ ಹಾಳಾದವು. ಪ್ರಸ್ತುತ ಮಳೆಗಾಲದಲ್ಲಿ ಅವುಗಳು ಉಪಯೋಗಕ್ಕೆ ಬರದಂತಾಗಿವೆ. ಬೇಸಿಗೆ ಅವಧಿಯಲ್ಲಂತೂ ಪ್ರಯಾಣಿಕರ ಸ್ಥಿತಿ ಹೇಳ ತೀರದಾಗಿದೆ.

ನಗರದಲ್ಲಿ ಸಿ.ಸಿ ರಸ್ತೆ ಕಾಮಗಾರಿ ಆರಂಭಿಸಿದ ದಿನದಿಂದ ಜಿಲ್ಲಾ ಆಸ್ಪತ್ರೆ, ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು, ಚಳ್ಳಕೆರೆ ಗೇಟ್‌, ಜೆಸಿಆರ್‌ ಮುಖ್ಯ ರಸ್ತೆ ಸೇರಿದಂತೆ ವಿವಿಧೆಡೆ ಶಾಸಕರು, ಸಂಸದರು ಹಾಗೂ ವಿವಿಧ ಅಭಿವೃದ್ಧಿ ಯೋಜನೆಯ ಅಡಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ್ದ ತಂಗುದಾಣಗಳನ್ನು ಕಾಮಗಾರಿ ನೆಪದಲ್ಲಿ ತೆರವುಗೊಳಿಸಲಾಗಿದೆ. ಇದರ ನಡುವೆಯೂ ಜೋಗಿಮಟ್ಟಿ ರಸ್ತೆ, ಜಿಲ್ಲಾ ಪಂಚಾಯಿತಿ ಮುಂಭಾಗ, ಐಯುಡಿಪಿ ಲೇಔಟ್‌ ರಸ್ತೆ, ಮೇದೆಹಳ್ಳಿ ರಸ್ತೆ, ತುರುವನೂರು ರಸ್ತೆಯಲ್ಲಿ ತಂಗುದಾಣಗಳು ಹೆಸರಿಗೆ ಮಾತ್ರ ಉಳಿದುಕೊಂಡಿವೆ.

ನಗರದಲ್ಲಿ ಖಾಸಗಿ ಹಾಗೂ ಸರ್ಕಾರಿ
ಬಸ್‌ಗಳು ಸಂಚಾರ ನಡೆಸುವುದರಿಂದ ಜಿಲ್ಲಾ ಆಸ್ಪತ್ರೆ ಮುಂಭಾಗ, ತಿಪ್ಪಜ್ಜಿ ವೃತ್ತ, ಹೊಳಲ್ಕೆರೆ ರಸ್ತೆ, ಚಳ್ಳಕೆರೆ ಗೇಟ್‌, ತುರವನೂರು ರಸ್ತೆಯಲ್ಲಿ ಪ್ರಯಾಣಿಕರು ಬಸ್‌ಗಳಿಗೆ ಕಾಯುತ್ತಾರೆ. ತಿಂಗಳಿನಿಂದ ಮಳೆ ಪ್ರಾರಂಭವಾದ ಕಾರಣ ನಿತ್ಯವೂ ನೂರಾರು ಜನ ಸೂಕ್ತ ವ್ಯವಸ್ಥೆಯಿಲ್ಲದ ಕಾರಣ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ.

ಪ್ರಯಾಣಿಕರ ಅನುಕೂಲಕ್ಕಾಗಿ ಬಸ್‌ಗಳಿದ್ದರೂ ತಂಗುದಾಣ ನಿರ್ಮಾಣ ಮಾಡಿಲ್ಲ. ಕೆಲವೆಡೆ ಇದ್ದರೂ ಇಲ್ಲದಂತಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಹೊಸದಾಗಿ ನಿರ್ಮಿಸಿ, ಇಲ್ಲವೇ ದುರಸ್ತಿ ಪಡಿಸಿ ಎನ್ನುತ್ತಾರೆ ಸಾರ್ವಜನಿಕರು.

ರಸ್ತೆ ಕಾಮಗಾರಿ ಆರಂಭಕ್ಕೂ ಮುನ್ನ ನಗರದ ವಿವಿಧೆಡೆ ಸಂಚರಿಸಲು ನಗರಸಾರಿಗೆ ಬಸ್‌ಗಳ ಸೌಲಭ್ಯವಿತ್ತು. ಆದರೆ, ಇವು ಸಂಚರಿಸುವ ಬಹುತೇಕ ಮಾರ್ಗಗಳಲ್ಲಿ ಬಸ್‌ ಶೆಲ್ಟರ್‌ಗಳು ಇರಲಿಲ್ಲ.
ಮುಖ್ಯ ರಸ್ತೆಯಲ್ಲಿ ಎಲ್ಲ ಬಸ್‌ಗಳು ಸಂಚರಿಸುವುದರಿಂದ ಪ್ರಯಾಣಿಕರು ಮಳೆ, ಬಿಸಿಲಿನಿಂದ
ತಪ್ಪಿಸಿಕೊಳ್ಳಲು ವಿವಿಧೆಡೆಗಳಲ್ಲಿ ಅಂಗಡಿ, ಮಳಿಗೆ ಆಶ್ರಯಿಸುವಂತಹ ಪರಿಸ್ಥಿತಿಯೂ ನಿರ್ಮಾಣವಾಗಿದೆ.

ಸೂಕ್ತ ಸ್ಥಳಗಳಲ್ಲಿ ತಂಗುದಾಣ
ಗಳಿಲ್ಲದ ಕಾರಣ ಬಸ್‌ಗಾಗಿ ಮಳೆ, ಬಿಸಿಲಿನಲ್ಲಿ ಕಾಯಲು ಸಾಧ್ಯವಾಗುತ್ತಿಲ್ಲ. ಬಸ್‌ ಶೆಲ್ಟರ್ ನಿರ್ಮಾಣ ಮಾಡಿದರೆ, ಬಸ್ ಬರುವವರೆಗಾದರೂ ಅದರಲ್ಲಿ ಕೆಲ ಹೊತ್ತು ಕುಳಿತುಕೊಳ್ಳಬಹುದಾಗಿದೆ. ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರ ಅನುಕೂಲಕ್ಕಾಗಿ
ಉತ್ತಮ ತಂಗುದಾಣಗಳ ಅಗತ್ಯವಿದೆ. ಕೂಡಲೇ ಜಿಲ್ಲಾಡಳಿತ ಈ ಬಗ್ಗೆ ಕ್ರಮವಹಿಸಬೇಕು ಎಂಬ ಕೂಗು ಪ್ರಯಾಣಿಕರಿಂದ ಕೇಳಿ ಬರುತ್ತಿದೆ.

......

ಚಿತ್ರದುರ್ಗ ನಗರದಲ್ಲಿ ರಸ್ತೆ ವಿಸ್ತರಣೆ ಕಾಮಗಾರಿ ಕಾರಣಕ್ಕೆ ತಂಗುದಾಣಗಳನ್ನು ತೆರವುಗೊಳಿಸಲಾಗಿದೆ. ಶೀಘ್ರದಲ್ಲೇ ಪೊಲೀಸ್‌ ಇಲಾಖೆ ಜತೆ ಚರ್ಚೆ ನಡೆಸಿ ಸ್ಥಳಗಳನ್ನು ಗುರುತಿಸಿ ತಂಗುದಾಣ ನಿರ್ಮಿಸಲಾಗುವುದು.

-ಹನುಮಂತರಾಜು, ನಗರಸಭೆ ಪೌರಾಯುಕ್ತ

ಕೊಂಡಾಪುರ ಹಾಗೂ ಕಡಿವಾಣ ಕಟ್ಟೆಯ ಪ್ರಯಾಣಿಕರ ಅನುಕೂಲಕ್ಕಾಗಿ ಕೊಂಡಾಪುರದಲ್ಲಿ ಪ್ರಾರಂಭಿಸಿದ ಪ್ರಯಾಣಿಕರ ತಂಗುದಾಣದ ನಿರ್ಮಾಣ ಕಾಮಗಾರಿ ಅಪೂರ್ಣಗೊಂಡಿದೆ. ಇದರಿಂದಾಗಿ ಜನತೆಗೆ ಯಾವುದೇ ಪ್ರಯೋಜನವಾಗಿಲ್ಲ.

ಶ್ರೀನಿವಾಸ, ಗೊಲ್ಲರಹಟ್ಟಿ

ಹೊಸದುರ್ಗ ತಾಲ್ಲೂಕಿನ ಸಣ್ಣ ಕಿಟ್ಟದಹಳ್ಳಿ ಗೊಲ್ಲರಹಟ್ಟಿ, ದೊಡ್ಡ ಕಿಟ್ಟದಳ್ಳಿ ಹಾಗೂ ಸಣ್ಣ ಕಿಟ್ಟದಹಳ್ಳಿ ಸೇರಿದಂತೆ ಸುತ್ತಲಿನ ಗ್ರಾಮಸ್ಥರು ಬಸ್ ಸೌಲಭ್ಯಕ್ಕಾಗಿ ದೊಡ್ಡ ಕಿಟ್ಟೆಲ್ ಹಳ್ಳಿಗೆ ಬರುತ್ತಾರೆ. ಆದರೆ ಇಲ್ಲಿ ಪ್ರಯಾಣಿಕರ ತಂಗುದಾಣವಿಲ್ಲ. ಮಳೆ ಬಂದಾಗ ನಿಲ್ಲಲು ತುಂಬಾ ತೊಂದರೆಯಾಗುತ್ತದೆ.

- ಮಾನಸ ಬಸವರಾಜ್‌, ತುಂಬಿನಕೆರೆ

ತಂಗುದಾಣದಲ್ಲಿ ನಡೆಯುತ್ತಿರುವ ಟೀ-ಸ್ಟಾಲ್ ಹಾಗೂ ತಿಂಡಿ ಅಂಗಡಿಯನ್ನು ಕೂಡಲೇ ತೆರವುಗೊಳಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು.

- ಓ.ಟಿ. ತಿಪ್ಪೇಸ್ವಾಮಿ, ಬಾಲೇನಹಳ್ಳಿ

ಎದುರಾಗಿದೆ ನಿರ್ವಹಣೆ ಕೊರತೆ

ಶ್ವೇತಾ.ಜಿ

ಹೊಸದುರ್ಗ: ತಾಲ್ಲೂಕಿನ ಬಹುತೇಕ ಕಡೆ ತಂಗುದಾಣಗಳಿಲ್ಲದ ಕಾರಣ ಮಳೆ, ಗಾಳಿ, ಬಿಸಿಲು, ಚಳಿಗೆ ಪ್ರಯಾಣಿಕರು ತತ್ತರಿಸುವಂತಾಗಿದೆ. ಕೆಲವೆಡೆ ತಂಗುದಾಣಗಳು ನಿರ್ವಹಣೆ ಕೊರತೆ ಎದುರಿಸುತ್ತಿವೆ.

ಪ್ರತಿ ಗ್ರಾಮಗಳ ಹೊರಗೆ ಅಥವಾ ಕ್ರಾಸ್‌ಗಳಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ತಂಗುದಾಣಗಳನ್ನು ಸರ್ಕಾರ ಅಥವಾ ಖಾಸಗಿ ಸಂಘ ಸಂಸ್ಥೆಯವರು ನಿರ್ಮಿಸಿಕೊಂಡಿರುತ್ತಾರೆ. ಆದರೆ, ತಾಲ್ಲೂಕಿನಲ್ಲಿ ಮಾತ್ರ ಅಂತಹ ವ್ಯವಸ್ಥೆ ಕಾಣದಂತಾಗಿದೆ.

ಮಾವಿನಕಟ್ಟೆ, ಜೋಡಿ ತುಂಬಿನಕೆರೆ, ನಾಗರಕಟ್ಟೆ, ಬೀಸನಹಳ್ಳಿ, ಬೀಸನಹಳ್ಳಿ ಲಂಬಾಣಿಹಟ್ಟಿ ಗ್ರಾಮದ ಜನತೆ ಬಸ್ ಸೌಲಭ್ಯಕ್ಕಾಗಿ ಮಾವಿನಕಟ್ಟೆಗೆ ಬರುತ್ತಾರೆ. ಸುಸಜ್ಜಿತ ತಂಗುದಾಣವಿಲ್ಲದ ಕಾರಣ ಅಲ್ಲೇ ಅಂಗಡಿಗಳಲ್ಲಿ ಕಾಯಬೇಕಾಗುತ್ತದೆ. ಮಹಿಳೆಯರು ಮಳೆ ಬಂದಾಗ ಎಲ್ಲಿ ನಿಲ್ಲುವುದು ಎಂದು ತೋಚದೆ ಪರದಾಡುವಂತಾಗಿದೆ.

ಪಟ್ಟಣದ ಖಾಸಗಿ ಬಸ್ ನಿಲ್ದಾಣವು ಮಳೆಯಿಂದಾಗಿ ಸೋರುತ್ತಿದೆ. ಬಾಯಾರಿ ಬಂದವರಿಗೆ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ. ಸ್ವಚ್ಛತೆ ದೂರದ ಮಾತಾಗಿದೆ. ತಾಲ್ಲೂಕಿನ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಸಕಲ ಮೂಲಸೌಕರ್ಯಗಳನ್ನು ಒಳಗೊಂಡ ಪ್ರಯಾಣಿಕರ ತಂಗುದಾಣ ನಿರ್ಮಿಸಿದರೆ ಒಳಿತಾಗುತ್ತದೆ ಎಂಬುದು ಸ್ಥಳೀಯರ ಅಭಿಪ್ರಾಯ.

......

ಟೀ ಸ್ಟಾಲ್‌ಗಳಾದ ತಂಗುದಾಣಗಳು

ಶಿವಗಂಗಾ ಚಿತ್ತಯ್ಯ

ಚಳ್ಳಕೆರೆ: ಪ್ರಯಾಣಿಕರ ಅನುಕೂಲಕ್ಕಾಗಿ ಗ್ರಾಮೀಣ ಪ್ರದೇಶದಲ್ಲಿ ನಿರ್ಮಿಸಿದ್ದ ತಂಗುದಾಣಗಳು ಜನರ ನಿರ್ಲಕ್ಷ್ಯದಿಂದಾಗಿ ಶಿಥಿಲಾವಸ್ಥೆಗೆ ತಲುಪಿವೆ. ತಾಲ್ಲೂಕಿನ ದೊಡ್ಡೇರಿ, ಜುಂಜರಗುಂಟೆ, ಚಿತ್ರನಾಯಕನಹಳ್ಳಿ, ಬಾಲೇನಹಳ್ಳಿ, ಕುರುಡಿಹಳ್ಳಿ ಗ್ರಾಮದ ಗೇಟ್‌ ಬಳಿ ನಿರ್ಮಿಸಿದ್ದ ತಂಗುದಾಣಗಳು ಟೀ ಸ್ಟಾಲ್ ಹಾಗೂ ತಿಂಡಿ ಅಂಗಡಿಗಳಾಗಿ ಪರಿವರ್ತನೆಯಾಗಿವೆ.

ಜನರು ಸ್ವಂತವಾಗಿ ಬಳಕೆ ಮಾಡಿಕೊಂಡ ಕಾರಣ ಬಿಸಿಲು, ಮಳೆ, ಗಾಳಿ, ಗುಡುಗು–ಮಿಂಚಿನ ಸಂದರ್ಭದಲ್ಲಿ ತಂಗುದಾಣದಲ್ಲಿ ನಿಂತುಕೊಳ್ಳಲಿಕ್ಕೆ ಜಾಗವಿಲ್ಲದಂತಾಗಿದೆ. ಹಾಗಾಗಿ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಪಾವಗಡ ರಸ್ತೆ ಮಾರ್ಗದ ದೊಡ್ಡೇರಿ ಬಳಿ ರೆಡ್ಡಿಹಳ್ಳಿ ಗೇಟ್‍ನಲ್ಲಿ ನಿರ್ಮಿಸಿದ್ದ ತಂಗುದಾಣದ ಚಾವಣಿ ಸಂಪೂರ್ಣ ಶಿಥಿಲಗೊಂಡಿದೆ. ಮಳೆ ಬಂದಾಗ ಎಲ್ಲೆಂದರಲ್ಲಿ ಸೋರುತ್ತದೆ.

ಜನರು ಕುಳಿತುಕೊಳ್ಳಲು ತಂಗುದಾಣದ ಒಳ ಭಾಗದಲ್ಲಿ ನಿರ್ಮಿಸಿದ್ದ ಸಿಮೆಂಟ್ ಕಟ್ಟೆ ಹಾಗೂ ಗೋಡೆ ಮುರಿದು ಬಿದ್ದು ಸುತ್ತಲು ಮುಳ್ಳುಜಾಲಿ ಗಿಡಗಳು ಬೆಳೆದು ನಿಂತಿವೆ. ಸರಿಯಾದ ನಿರ್ವಹಣೆಯಿಲ್ಲದೇ ಪ್ರಯಾಣಿಕರಿಗೆ ಅಸಹ್ಯ ಹುಟ್ಟಿಸುವಷ್ಟು ಕಸದಿಂದ ತುಂಬಿವೆ.

ಮೀರಾಸಾಬಿಹಳ್ಳಿ ಮಾರ್ಗದ ಕೈಮಾರ, ದ್ಯಾವರನಹಳ್ಳಿ ಹೊಸ ಕಾಲೋನಿ ಗೇಟ್, ಕಾಲುವೆಹಳ್ಳಿ, ಕ್ಯಾತಗೊಂಡನಹಳ್ಳಿ, ಪುರ್ಲೆಹಳ್ಳಿ, ಸೂರನಹಳ್ಳಿ ಮುಂತಾದ ತಂಗುದಾಣಗಳು ಮದ್ಯ ಸೇವನೆಯ ಕೇಂದ್ರವಾಗಿ ಮಾರ್ಪಟ್ಟಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT