ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಲಶಾಸ್ತ್ರೀಯ ಅಧ್ಯಯನಕ್ಕೆ ಕರ್ನಾಟಕ ರಾಜ್ಯ ಪ್ರವರ್ಗ–1ರ ಜಾತಿಗಳ ಒಕ್ಕೂಟ ಆಗ್ರಹ

ರಾಜ್ಯ ಪ್ರವರ್ಗ–1ರ ಜಾತಿಗಳ ಒಕ್ಕೂಟದ ಚಿಂತನ–ಮಂಥನ ಸಭೆ
Last Updated 24 ಅಕ್ಟೋಬರ್ 2021, 7:43 IST
ಅಕ್ಷರ ಗಾತ್ರ

ಚಿತ್ರದುರ್ಗ: ಸಾಮಾಜಿಕ ನ್ಯಾಯದಿಂದ ವಂಚಿತವಾಗುತ್ತಿರುವ ಜಾತಿಗಳ ಕುಲಶಾಸ್ತ್ರೀಯ ಅಧ್ಯಯನ ನಡೆಸಬೇಕು. ಇದಕ್ಕೆ ಕನಿಷ್ಠ ₹ 5 ಕೋಟಿ ಅನುದಾನವನ್ನು ಮೀಸಲಿಡಬೇಕು ಎಂದು ಕರ್ನಾಟಕ ರಾಜ್ಯ ಪ್ರವರ್ಗ–1ರ ಜಾತಿಗಳ ಒಕ್ಕೂಟ ಒತ್ತಾಯಿಸಿದೆ.

ನಗರದ ಯಾದವ ಮಹಾಸಂಸ್ಥಾನ ಮಠದಲ್ಲಿ ಶನಿವಾರ ನಡೆದ ಒಕ್ಕೂಟದ ಜಿಲ್ಲಾ ಚಿಂತನ– ಮಂಥನ ಸಭೆಯಲ್ಲಿ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ.

ಗಂಗಾಮತ, ಗೊಲ್ಲ, ಉಪ್ಪಾರ, ಕಾಡುಗೊಲ್ಲ, ಹಣಬರ, ತೆಲುಗುಗೌಡ, ಮೊಗವೀರ ಬೆಸ್ತರು, ಕಾರ್ವಿ, ಅಂಬಿಗ, ದೇವದಾಸಿ, ಜೋಗಿ, ಗೊಂದಲಿ, ಬುಡುಬುಡುಕಿ ದಾಸರಿ ದೊಂಬಿದಾಸರ ಹೀಗೆ ಹಲವು ಜಾತಿಗಳು ಪ್ರವರ್ಗ–1ರಲ್ಲಿವೆ. ಈ ಎಲ್ಲ ಜಾತಿಗಳ ಜನಸಂಖ್ಯೆ ಕೋಟಿಗೂ ಹೆಚ್ಚಿದೆ. ಮೀಸಲಾತಿ ಸೌಲಭ್ಯ ಸಿಕ್ಕರೂ ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಮುಂದುವರಿಯಲು ಸರ್ಕಾರ ಸಮರ್ಪಕ ಯೋಜನೆಗಳನ್ನು ರೂಪಿಸಿಲ್ಲ ಎಂದು ಒಕ್ಕೂಟ ಬೇಸರ ವ್ಯಕ್ತಪಡಿಸಿದೆ.

ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಡಿ.ಟಿ.ಶ್ರೀನಿವಾಸ್, ‘ಪ್ರವರ್ಗ–1ಕ್ಕೆ ಇದ್ದ ಸೌಲಭ್ಯಗಳನ್ನು ಕ್ರಮೇಣ ಕಡಿತ ಮಾಡಲಾಗುತ್ತಿದೆ. ಇದರಿಂದ ಹಲವು ಜಾತಿಗಳು ಸಾಮಾಜಿಕ ನ್ಯಾಯದಿಂದ ವಂಚಿತವಾಗುತ್ತಿವೆ. ಪ್ರವರ್ಗ–1ರ ವ್ಯಾಪ್ತಿಯಲ್ಲಿರುವ ಎಲ್ಲ ಜಾತಿಗಳ ಕುಲಶಾಸ್ತ್ರೀಯ ಅಧ್ಯಯನ ನಡೆಸುವುದು ಸೂಕ್ತ’ ಎಂದು ಅಭಿಪ್ರಾಯಪಟ್ಟರು.

‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಕಲ್ಪಿಸಿದಂತೆ ಶುಲ್ಕ ವಿನಾಯಿತಿ, ವಿದ್ಯಾರ್ಥಿ ವೇತನ ಹಾಗೂ ಶೈಕ್ಷಣಿಕ ಸೌಲಭ್ಯಗಳು ಪ್ರವರ್ಗ–1ಕ್ಕೆ ಸಿಗುತ್ತಿಲ್ಲ. ಇದರಿಂದ ಅನೇಕ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತವಾಗುವ ಅಪಾಯ ಎದುರಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಕಲ್ಪಿಸಿದ ಎಲ್ಲ ಸೌಲಭ್ಯಗಳನ್ನು ಪ್ರವರ್ಗ–1 ವಿದ್ಯಾರ್ಥಿಗಳಿಗೂ ವಿಸ್ತರಿಸಬೇಕು’ ಎಂದು ಆಗ್ರಹಿಸಿದರು.

‘ಪ್ರವರ್ಗ–1 ಕೋಶವನ್ನು ವಿಶ್ವವಿದ್ಯಾನಿಲಯಗಳಲ್ಲಿ ಮರುಸ್ಥಾಪಿಸಿಸಬೇಕು. ವಿಶ್ವವಿದ್ಯಾನಿಲಯಗಳಲ್ಲಿ ಪ್ರವರ್ಗದ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ಸೌಲಭ್ಯ ಒದಗಿಸಬೇಕು. ಎಸ್ಸೆಸ್ಸೆಲ್ಸಿ, ಪಿಯು, ಪದವಿ ಹಾಗೂ ಸ್ನಾತಕೋತ್ತರ ಪದವಿ ಉತ್ತೀರ್ಣರಾದವರಿಗೆ ನಗದು ಬಹುಮಾನ ಘೋಷಿಸಬೇಕು. ಭೂಒಡೆತನದ ಯೋಜನೆಯನ್ನು ಅನುಷ್ಠಾನಕ್ಕೆ ತರಬೇಕು’ ಎಂದರು.

‘ಪ್ರವರ್ಗ–1ರ ಉದ್ದಿಮೆದಾರರಿಗೆ ₹ 10 ಕೋಟಿವರೆಗೆ ಶೇ 4ರ ಬಡ್ಡಿದರದಲ್ಲಿ ಬ್ಯಾಂಕ್‌ ಸಾಲ ಒದಗಿಸಬೇಕು. ವಿಧಾನಸಭೆ, ವಿಧಾನಪರಿಷತ್‌ ಹಾಗೂ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಸೂಕ್ತ ಪ್ರಾತಿನಿಧ್ಯ ನೀಡಬೇಕು. ಚುನಾವಣೆಗೆ ಪ್ರತ್ಯೇಕ ಮೀಸಲಾತಿ ಒದಗಿಸಬೇಕು’ ಎಂದು ಕೋರಿಕೊಂಡರು.

ಯಾದವ ಗುರುಪೀಠದ ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಒಕ್ಕೂಟದ ಗೌರವಾಧ್ಯಕ್ಷ ಹೊನ್ನಪ್ಪ ಬಂಡಿ, ಪ್ರಧಾನ ಕಾರ್ಯದರ್ಶಿ ಲೋಕೇಶಪ್ಪ, ಉಪಾಧ್ಯಕ್ಷರುಗಳಾದ ಡಾ.ಕೆ.ಜಗದೀಶ್, ಜೋಗಮಲ್ ಶ್ರೀನಿವಾಸಮೂರ್ತಿ, ಕಾರ್ಯದರ್ಶಿ ನರಸಿಂಹಮೂರ್ತಿ, ಖಜಾಂಚಿ ಉಮಾಶಂಕರ್, ಯುವಜನ ಕ್ರೀಡಾ ಇಲಾಖೆ ಉಪನಿರ್ದೇಶಕಿ ಪೂರ್ಣಿಮಾ ಜೋಗಿ, ಸಿದ್ದಪ್ಪ, ಪ್ರತಾಪಜೋಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT