ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನುವಾರು ಹತ್ಯೆ; ಜನರಲ್ಲಿ ಅರಿವು ಮೂಡಿಸಿ: ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ

ಪ್ರಾಣಿ ದಯಾ ಸಂಘದ ನಿರ್ವಹಣಾ ಸಮಿತಿ ಸಭೆಯಲ್ಲಿ ಎಚ್ಚರಿಕೆ
Last Updated 6 ಫೆಬ್ರುವರಿ 2021, 5:24 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಜಾನುವಾರು ಹತ್ಯೆ ಮಾಡಿದಲ್ಲಿ ಕಾನೂನಾತ್ಮಕವಾಗಿ ಶಿಕ್ಷೆಗೆ ಗುರಿಯಾಗಲಿದ್ದಾರೆ. ಈ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿ’ ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಲ್ಲಿ ಶುಕ್ರವಾರ ನಡೆದ ಜಿಲ್ಲಾ ಪ್ರಾಣಿ ದಯಾ ಸಂಘದ ನಿರ್ವಹಣಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ‘ರಾಜ್ಯ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆಯನ್ನು ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಅನುಷ್ಠಾನ ಮಾಡಬೇಕು. ಐಇಸಿ ಕಾರ್ಯಕ್ರಮದಡಿ ಕಾರ್ಯಾಗಾರ, ಫ್ಲೆಕ್ಸ್, ಕರಪತ್ರಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ’ ಎಂದರು.

ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ. ಕೃಷ್ಣಪ್ಪ, ‘ಸಾರ್ವ
ಜನಿಕರ ಆರೋಗ್ಯದ ಹಿತಾಸಕ್ತಿ, ರೋಗದಿಂದ ಬಳಲುವ, ಇತರೆ ಜಾನುವಾರಿಗೆ ಮಾರಕ ಎಂದು ಕಂಡು
ಬರುವ, ವಾಸಿಯಾಗದ ರೋಗದಿಂದ ಬಳಲುವ 13 ವರ್ಷ ಮೇಲ್ಪಟ್ಟ ಎಮ್ಮೆ, ಕೋಣ ಹತ್ಯೆ ಮಾಡಲು ನಿಯಮಬದ್ಧವಾಗಿ ವಿನಾಯಿತಿ ನೀಡಲಾಗಿದೆ’ ಎಂದು ತಿಳಿಸಿದರು.

‘ಕೃಷಿ ಮತ್ತು ಪಶುಸಂಗೋಪನೆ ಉದ್ದೇಶಕ್ಕಾಗಿ ಜಾನುವಾರು ಸಾಗಾಣಿಕೆಗೆ ಪರವಾನಗಿ ನೀಡಲು ಅವಕಾಶವಿದೆ. ರಾಜ್ಯದೊಳಗೆ ಹಾಗೂ ರಾಜ್ಯದ ಹೊರಗೆ ಜಾನುವಾರು ಸಾಗಾಣಿಕೆ ಮಾಡುವ ವೇಳೆ ಮಾರ್ಗಸೂಚಿ ಪಾಲಿಸಬೇಕಿದೆ’ ಎಂದರು.

‘ವಾಹನಗಳಲ್ಲಿ ಜಾನುವಾರು ಮಾಲೀಕರ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಇತರ ವಿವರಗಳನ್ನು ನಮೂದಿಸಬೇಕು. ರಾತ್ರಿ 8ರಿಂದ ಬೆಳಿಗ್ಗೆ 6ರ ವರೆಗೆ ಜಾನುವಾರು ಸಾಗಾಟ ನಿಷೇಧಿಸಲಾಗಿದೆ. ಬೇಸಿಗೆ ಅವಧಿ
ಯಲ್ಲಿ ಬೆಳಿಗ್ಗೆ 11ರಿಂದ ಮಧ್ಯಾಹ್ನ 3ರ ವರೆಗೆ ಸಾಗಾಣಿಕೆ ಮಾಡುವಂತಿಲ್ಲ’ ಎಂದು ಹೇಳಿದರು.

‘ಅಕ್ರಮವಾಗಿ ಜಾನುವಾರು ಸಾಗಾಟ ಮಾಡುವವರನ್ನು ಎಸ್‍ಐಗಿಂತ ಮೇಲ್ಪಟ್ಟ ಪೊಲೀಸ್ ಅಧಿಕಾರಿಗಳು ಶೋಧಿಸುವ, ಜಪ್ತಿ ಮಾಡುವ ಅಧಿಕಾರ ಹೊಂದಿದ್ದಾರೆ. ಜಪ್ತಿ ನಂತರ ಪ್ರಾಧಿಕಾರ, ಉಪವಿಭಾಗಾಧಿಕಾರಿ ಮುಂದೆ ಹಾಜರುಪಡಿಸಬೇಕಿದೆ’ ಎಂದರು.

‘ಕಾಯ್ದೆ ಜಾರಿಗೊಳಿಸಿರುವ ಕಾರಣ ಬೀಡಾಡಿ ದನಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಅವುಗಳ ನಿರ್ವಹಣೆಗಾಗಿ ಖಾಸಗಿ ಗೋಶಾಲೆಗಳಿಗೆ ಕಳುಹಿಸಬೇಕು. ಬೀಡಾಡಿ ದನಗಳ ನಿರ್ವಹಣೆಗಾಗಿ ₹ 1.50 ಲಕ್ಷ ಅನುದಾನ ಲಭ್ಯವಿದೆ. ಪೋಷಣೆಗಾಗಿ ಜಿಲ್ಲೆಯಲ್ಲಿ ಸರ್ಕಾರಿ ಜಮೀನು ಗುರುತಿಸಿ, ಹೊಸದಾಗಿ ಪ್ರತಿ ತಾಲ್ಲೂಕಿನಲ್ಲಿ ಎರಡು ಗೋಶಾಲೆಗಳ ನಿರ್ಮಾಣ ಮಾಡುವ ಕುರಿತು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ತಿಳಿಸಿದರು.

‘ಪ್ರಾಣಿಗಳಿಂದ ಮನುಷ್ಯನಿಗೆ 100ಕ್ಕೂ ಹೆಚ್ಚು ರೋಗಗಳು ಹರಡುತ್ತವೆ. ಹಕ್ಕಿಜ್ವರ ಕಣ್ಗಾವಲು ಸಂಬಂಧ ಕೋಳಿ ಸಾಕಾಣಿಕೆ ಫಾರಂಗಳ ಸರ್ವೇಕ್ಷಣಾ ಕಾರ್ಯ ಪ್ರಗತಿಯಲ್ಲಿದೆ. ಈಗಾಗಲೇ ಭೇಟಿ ನೀಡಿ ರಕ್ತದ ಮಾದರಿ ಸಂಗ್ರಹಿಸಿ ಲ್ಯಾಬ್‍ಗೆ ಕಳುಹಿಸಲಾಗುತ್ತಿದೆ. ಈವರೆಗೂ ಯಾವುದೇ ಪಾಸಿಟಿವ್ ಪ್ರಕರಣ ಕಂಡುಬಂದಿಲ್ಲ’ ಎಂದು ಮಾಹಿತಿ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ, ಎಡಿಸಿ ಬಾಲಕೃಷ್ಣ, ಡಿವೈಎಸ್‍ಪಿ ಪಾಂಡುರಂಗ ಇದ್ದರು.

ಅಕ್ರಮದಲ್ಲಿ ತೊಡಗಿದರೆ ದಂಡ, ಶಿಕ್ಷೆ

‘ಅಕ್ರಮ ಜಾನುವಾರು ಸಾಗಾಟದಲ್ಲಿ ತೊಡಗಿದವರಿಗೆ ಮೊದಲ ಸಲ ಅಪರಾಧಕ್ಕೆ 3 ವರ್ಷದಿಂದ 7 ವರ್ಷ ಕಾರಾಗೃಹ ಶಿಕ್ಷೆ ಅಥವಾ ಒಂದು ಜಾನುವಾರಿಗೆ ₹ 50 ಸಾವಿರದಿಂದ ₹ 5 ಲಕ್ಷದವರೆಗೆ ದಂಡ ವಿಧಿಸಬಹುದಾಗಿದೆ. ಮುಂದುವರಿದ ಅಪರಾಧಕ್ಕೆ ₹ 1 ಲಕ್ಷದಿಂದ ₹ 10 ಲಕ್ಷದವರೆಗೆ ದಂಡ ಅಥವಾ 7 ವರ್ಷ ಕಾರಾಗೃಹ ಶಿಕ್ಷೆ ವಿಧಿಸಬಹುದು’ ಎಂದು ಡಾ. ಕೃಷ್ಣಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT