ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ‘ಜಲಜೀವನ್‌ ಮಿಷನ್‌’ ಕಾಮಗಾರಿ ಪರಿಶೀಲಿಸಿದ ಅಧಿಕಾರಿಗಳ ತಂಡ

ಚಿತ್ರದುರ್ಗ, ಚಳ್ಳಕೆರೆ ತಾಲ್ಲೂಕಿನ ಹಲವು ಗ್ರಾಮಗಳಿಗೆ ಭೇಟಿ
Last Updated 18 ಆಗಸ್ಟ್ 2022, 5:36 IST
ಅಕ್ಷರ ಗಾತ್ರ

ಚಿತ್ರದುರ್ಗ: ಸುಸ್ಥಿರ ಜಲಮೂಲದಿಂದ ಪ್ರತಿ ಮನೆಗೆ ನಳದ ಮೂಲಕವೇ ನೀರು ಪೂರೈಕೆ ಮಾಡುವ ಮಹತ್ತರ ಉದ್ದೇಶದಿಂದ ಅನುಷ್ಠಾನಗೊಳ್ಳುತ್ತಿರುವ ‘ಜಲಜೀವನ್‌ ಮಿಷನ್‌’ (ಜೆಜೆಎಂ) ಯೋಜನೆಯ ಕಾಮಗಾರಿಯ ಪರಿಶೀಲನೆಗೆ ಕೇಂದ್ರ ಜಲಶಕ್ತಿ ಸಚಿವಾಲಯದ ಅಧಿಕಾರಿಗಳ ತಂಡ ಜಿಲ್ಲೆಗೆ ಭೇಟಿ ನೀಡಿದೆ.

ಚಿತ್ರದುರ್ಗ ಹಾಗೂ ಚಳ್ಳಕೆರೆ ತಾಲ್ಲೂಕಿನ ಹಲವು ಗ್ರಾಮಗಳಿಗೆ ಭೇಟಿ ನೀಡಿದ ತಂಡ, ನೀರು ಪೂರೈಕೆಗೆ ನಡೆಯುತ್ತಿರುವ ಕಾಮಗಾರಿ ವೀಕ್ಷಿಸಿತು. ಜನರು, ಜನಪ್ರತಿನಿಧಿಗಳು ಹಾಗೂ ಗ್ರಾಮ ಪಂಚಾಯಿತಿ ನೌಕರರೊಂದಿಗೆ ಸಂವಾದ ನಡೆಸಲಾಯಿತು. ಕಾಮಗಾರಿ ಮತ್ತು ನೀರಿನ ಗುಣಮಟ್ಟ ಪರೀಕ್ಷಿಸಿ ನೀರಗಂಟಿಗಳೊಂದಿಗೆ ಚರ್ಚೆ ನಡೆಸಲಾಯಿತು. ವ್ಯವಸ್ಥೆಯ ನಿರ್ವಹಣೆಗೆ ಸಂಬಂಧಿಸಿ ಸಲಹೆ, ಸೂಚನೆ ನೀಡಲಾಯಿತು.

‘ಜೆಜೆಎಂ ಅನುಷ್ಠಾನಗೊಂಡ ಬಳಿಕ ನಿರ್ವಹಣೆಯ ಹೊಣೆಯನ್ನು ಗ್ರಾಮ ಪಂಚಾಯಿತಿಯ ಸುಪರ್ದಿಗೆ ನೀಡಲಾಗುತ್ತದೆ. ಇದರಲ್ಲಿ ಯಾವುದೇ ಲೋಪವಾಗದಂತೆ ಎಚ್ಚರವಹಿಸಬೇಕಿದೆ. ನಿರ್ವಹಣೆಗೆ ಸರ್ಕಾರದ ವತಿಯಿಂದ ವಿಶೇಷ ಅನುದಾನ ನೀಡುವುದಿಲ್ಲ. ಗ್ರಾಮಸ್ಥರಿಂದ ಮಾಸಿಕ ಶುಲ್ಕ ಸಂಗ್ರಹಿಸಿ ನಿರ್ವಹಿಸಬೇಕು’ ಎಂದು ಕೇಂದ್ರ ಜಲಶಕ್ತಿ ಮಂತ್ರಾಲಯದ ಅಧಿಕಾರಿ ನೀರಜ್‌ ಶರ್ಮಾ ಸೂಚಿಸಿದರು.

ಚಿತ್ರದುರ್ಗ ತಾಲ್ಲೂಕಿನ ಮಾಡನಾಯಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಯನಹಳ್ಳಿಗೆ ಭೇಟಿ ನೀಡಿದ ಅವರು, ಗುಂಡಿ ತೋಡುವ ಹಾಗೂ ಪೈಪ್‌ಲೈನ್‌ ಅಳವಡಿಸುವ ಕಾರ್ಯವನ್ನು ವೀಕ್ಷಿಸಿದರು. ಆಗಾಗ ಶ್ರಮದಾನ ಮಾಡುವ ಮೂಲಕ ಗ್ರಾಮದ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು.

ಚಿಕ್ಕಬೆನ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಿಂಗವ್ವನಾಗತಿಹಳ್ಳಿಗೆ ಭೇಟಿ ನೀಡಿ, ನೀರಿನ ಗುಣಮಟ್ಟ ಪರೀಕ್ಷಿಸುವ ರೀತಿಯನ್ನು ವೀಕ್ಷಿಸಿದರು. ಗ್ರಾಮ ಪಂಚಾಯಿತಿ ನೀರಗಂಟಿ, ಬಿಲ್‌ ಕಲೆಕ್ಟರ್‌ ಹಾಗೂ ಇತರ ಸಿಬ್ಬಂದಿಯೊಂದಿಗೆ ಚರ್ಚಿಸಿದರು. ನೀರಿನ ಗುಣಮಟ್ಟ ಪರೀಕ್ಷಿಸುವ ವಿಧಾನವನ್ನು ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೂ ತಿಳಿಸುವಂತೆ ಹೇಳಿದರು. ನೀರಿನಲ್ಲಿನ ಗಡಸುತನ, ಪೈಪ್‌ಲೈನ್‌ ಸೋರಿಕೆ ಬಗ್ಗೆ ಎಚ್ಚರದಿಂದ ಇರುವಂತೆಹೇಳಿದರು.

ಚಳ್ಳಕೆರೆ ತಾಲ್ಲೂಕಿನ ಗೋಪನಹಳ್ಳಿ ಪಂಚಾಯಿತಿಯ ಬಸವೇಶ್ವರ ನಗರ, ಚಿಕ್ಕೇನಹಳ್ಳಿ, ಗೊಲ್ಲರಹಟ್ಟಿ, ಬೆಳಗೆರೆ ಪಂಚಾಯಿತಿಯ ರಂಗನಾಥಪುರ ಹಾಗೂ ಚಿತ್ರದುರ್ಗ ತಾಲ್ಲೂಕಿನ ಪಾಪೇನಹಳ್ಳಿ ಗ್ರಾಮಗಳಿಗೆ ಮಂಗಳವಾರ ಭೇಟಿ ನೀಡಿದ್ದ ಕೇಂದ್ರ ತಂಡ ಕಾಮಗಾರಿಗಳನ್ನು ಪರಿಶೀಲಿಸಿತು. ಪ್ರತಿ ಮನೆಗೆ ನೀರು ಸರಬರಾಜು ಆಗುತ್ತಿದೆಯೇ ಎಂಬುದನ್ನು ಖಾತರಿಪಡಿಸಿಕೊಂಡಿತು. ಸಾರ್ವಜನಿಕರ ಅಭಿಪ್ರಾಯ, ಸಲಹೆ
ಪಡೆಯಲಾಯಿತು.

ಕೇಂದ್ರ ಜಲಶಕ್ತಿ ಸಚಿವಾಲಯದ ಕೌಶಲೇಂದ್ರ ಕೌಶಲ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಮಹಾಂತಪ್ಪ ಕನ್ನೂರು, ಸಹಾಯಕ ಕಾರ್ಯಪಾಲಕಎಂಜಿನಿಯರ್‌ಗಳಾದ ದಯಾನಂದ ಸ್ವಾಮಿ, ಶಿವರಾಮ್, ಪಾತಪ್ಪ, ಅಂಜನಕುಮಾರ್‌ ಇದ್ದರು.

...........

ಪಂಚಾಯಿತಿ ವ್ಯಾಪ್ತಿಯ 9 ಹಳ್ಳಿಗೆ ಹಲವು ಮೂಲಗಳಿಂದ ನೀರು ಪೂರೈಕೆ ಆಗುತ್ತಿದೆ. ನಿಯಮಿತವಾಗಿ ನೀರು ಪರೀಕ್ಷಿಸಿ ಕುಡಿಯಲು ಯೋಗ್ಯವಾಗಿದೆಯೇ ಪರೀಕ್ಷಿಸುತ್ತೇವೆ. ಫ್ಲೋರೈಡ್‌, ಕ್ಲೋರೈಡ್‌, ಕಬ್ಬಣದಂಶದ ಪ್ರಮಾಣ ಪರಿಶೀಲಿಸುತ್ತೇವೆ.

-ಸಿ. ಗೋವಿಂದಪ್ಪ, ಬಿಲ್‌ ಕಲೆಕ್ಟರ್‌, ಚಿಕ್ಕಬೆನ್ನೂರು ಗ್ರಾಮ ಪಂಚಾಯಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT