ಬಿರುಕು ಬಿಟ್ಟ ಶತಮಾನದ ಶಾಲೆ

6
ಹೊಸದುರ್ಗ: ಜೀವಭಯದಲ್ಲಿ ಪಾಠ ಕೇಳುವ ಮಕ್ಕಳು, ಮೂಲಸೌಕರ್ಯ ಮರೀಚಿಕೆ

ಬಿರುಕು ಬಿಟ್ಟ ಶತಮಾನದ ಶಾಲೆ

Published:
Updated:
Deccan Herald

ಹೊಸದುರ್ಗ: ಇಲ್ಲಿನ ಶತಮಾನದ ಇತಿಹಾಸ ಹೊಂದಿರುವ ಸರ್ಕಾರಿ ಮಾದರಿ ಕನ್ನಡ ಹಾಗೂ ಉರ್ದು ಪ್ರಾಥಮಿಕ ಶಾಲೆ ಶಿಥಿಲಾವಸ್ಥೆ ತಲುಪಿದೆ.

ಬ್ರಿಟಿಷ್‌ ಹಾಗೂ ಮದ್ರಾಸ್‌ ಶೈಲಿಯಲ್ಲಿ ನಿರ್ಮಿಸಲಾದ ಶಾಲೆ 1885ರಲ್ಲಿ ಸ್ಥಾಪನೆಯಾಗಿದ್ದು, 133 ವರ್ಷಗಳನ್ನು ಪೂರೈಸಿದೆ. ಶತಮಾನ ಪೂರೈಸಿದ ಶಾಲೆಯಲ್ಲಿ ಮೂಲ ಸೌಕರ್ಯವೂ ಮರೀಚಿಕೆಯಾಗಿದೆ.

1994ರಲ್ಲಿ ಉನ್ನತೀಕರಿಸಿಕೊಂಡು ಶಾಲೆಯಾಗಿ ಪರಿವರ್ತನೆಯಾಗಿದ್ದು, ಶತಮಾನೋತ್ಸವ ಆಚರಿಸಿಕೊಂಡಿದೆ. ಪ್ರಸ್ತುತ 1ರಿಂದ 8ನೇ ತರಗತಿವರೆಗೂ 185 ವಿದ್ಯಾರ್ಥಿಗಳು ಓದುತ್ತಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರು ಇಲ್ಲ. ನಿಯಮದ ಪ್ರಕಾರ ಮಾದರಿ ಶಾಲೆಗೆ ಕನ್ನಡ, ಇಂಗ್ಲಿಷ್‌, ಹಿಂದಿ ಹಾಗೂ ವಿಜ್ಞಾನ ವಿಷಯಕ್ಕೆ ತಲಾ ಒಬ್ಬರು ಶಿಕ್ಷಕರು ಇರಬೇಕು. ಇದಕ್ಕೆ ವ್ಯತಿರಿಕ್ತ ಎಂಬಂತೆ ಇಲ್ಲಿ ಸಾಮಾನ್ಯ ವಿಷಯ ಶಿಕ್ಷಕರು 3 ಮಂದಿ ದೈಹಿಕ ಶಿಕ್ಷಣ ಮತ್ತು ಸಂಗೀತಕ್ಕೆ ತಲಾ ಒಬ್ಬರು, ಟಿಜಿಟಿ ಆಧಾರಿತವಾಗಿ ಒಬ್ಬರು ವಿಜ್ಞಾನ ಹಾಗೂ ಮುಖ್ಯಶಿಕ್ಷಕರೊಬ್ಬರು ಇದ್ದಾರೆ.

ಕಟ್ಟಡ ಹಳೆಯದಾಗಿದ್ದು, ಹೆಂಚುಗಳು ಒಡೆದು ಹೋಗಿವೆ. ಮಳೆ ಬಂದಾಗ ಸೋರುತ್ತಿದೆ. ಚಾವಣಿ ಶಿಥಿಲಗೊಂಡಿದೆ. ಚಾವಣಿ ಮರದ ದಿಮ್ಮಿಗಳು ಗೆದ್ದಲು ಹಿಡಿದಿವೆ. ಚಾವಣಿ ಬೀಳುವ ಸ್ಥಿತಿಯಲ್ಲಿದೆ. ವಿದ್ಯಾರ್ಥಿಗಳು ಜೀವಭಯದಲ್ಲಿ ಪಾಠ ಕೇಳುವಂತಹ ಸ್ಥಿತಿ ನಿರ್ಮಾಣವಾಗಿದೆ. 50 ವರ್ಷದಿಂದ ಶಾಲೆ ಬಣ್ಣ ಕಂಡಿಲ್ಲ ಎಂದು ಪಾಲಕರು ದೂರುತ್ತಾರೆ.

10 ಎಕರೆಗೂ ಹೆಚ್ಚು ನಿವೇಶನ ಹೊಂದಿರುವ ಶಾಲೆಗೆ ಕಾಂಪೌಂಡ್‌ ಹಾಗೂ ಕ್ರೀಡಾಂಗಣದ ವ್ಯವಸ್ಥೆ ಕಲ್ಪಿಸಿಲ್ಲ. ಬೀಡಾಡಿ ದನಗಳು, ಹಂದಿಗಳು ಶಾಲೆಯ ಆವರಣದಲ್ಲಿ ಓಡಾಡುತ್ತವೆ. ಪುಂಡ ಹುಡುಗರ ಹಾವಳಿಯೂ ಹೆಚ್ಚಾಗಿದ್ದು, ಮಕ್ಕಳಿಗೆ ರಕ್ಷಣೆ ಇಲ್ಲವಾಗಿದೆ.

ಮೂಲಸೌಕರ್ಯ ಸಮಸ್ಯೆ ಇದ್ದರೂ ಇಲ್ಲಿನ ಶಿಕ್ಷಕರು, ಉತ್ತಮ ಶಿಕ್ಷಣ ನೀಡುತ್ತಿದ್ದಾರೆ. ಕಂಪ್ಯೂಟರ್‌ ಕಲಿಕಾ ಕೇಂದ್ರ, ಪ್ರತ್ಯೇಕ ಅಕ್ಷರ ದಾಸೋಹ ಕೊಠಡಿ, ಗ್ರಂಥಾಲಯ, ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ್ದಾರೆ. ಕೇಂದ್ರ ರೈಲ್ವೆ ಸಚಿವರಾಗಿದ್ದ ಜಾಫರ್‌ ಷರೀಫ್‌ ಸೇರಿ ಈ ಶಾಲೆಯಲ್ಲಿ ಓದಿದ ಹಲವರು ಉನ್ನತ ಹುದ್ದೆಯಲ್ಲಿದ್ದಾರೆ.

ಶಾಲೆಗೆ ಕಾಂಪೌಂಡ್‌ ವ್ಯವಸ್ಥೆ ಇಲ್ಲದಿರುವುದರಿಂದ ಸಮಸ್ಯೆ ಎದುರಾಗಿದೆ. ಶಾಲೆ ಎದುರಿಗೆ ಮುಖ್ಯರಸ್ತೆ ಇರುವುದರಿಂದ ಮಕ್ಕಳಿಗೆ ಅಪಾಯಗಳಾಗಬಹುದು. ಕಾಂಪೌಂಡ್‌ ಶೀಘ್ರ ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ಶಾಲೆಯ ಮುಖ್ಯಶಿಕ್ಷಕ ಕೆ. ಚಿಕಪ್ಪ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !