ಬುಧವಾರ, ಮೇ 25, 2022
29 °C
ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಸಭೆ ಅನುಮೋದನೆ

302 ಗ್ರಾಮಕ್ಕೆ ಕುಡಿಯುವ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಚಿತ್ರದುರ್ಗ ಹಾಗೂ ಹಿರಿಯೂರು ತಾಲ್ಲೂಕಿನ 302 ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ಶಾಂತಿಸಾಗರ ಕೆರೆ ಮತ್ತು ವಿ.ವಿ.ಸಾಗರ ಜಲಾಶಯದಿಂದ ನೀರು ಪೂರೈಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಸಭೆ ಬುಧವಾರ ಅನುಮೋದನೆ ನೀಡಿತು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ನಂದಿನಿದೇವಿ ಅಧ್ಯಕ್ಷತೆಯಲ್ಲಿ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

ಚಿತ್ರದುರ್ಗ ತಾಲ್ಲೂಕು ವ್ಯಾಪ್ತಿಯ 265 ಗ್ರಾಮಗಳ ಪೈಕಿ 35 ಗ್ರಾಮಗಳು ಸಿರಿಗೆರೆ-ಭರಮಸಾಗರ ಬಹುಗ್ರಾಮ ಯೋಜನೆ ವ್ಯಾಪ್ತಿಯಲ್ಲಿವೆ. 59 ಗ್ರಾಮಗಳು ಪಾವಗಡ ಡಿಬಿಓಟಿ ಯೋಜನೆಯಡಿ ನೀರು ಪಡೆಯಲಿವೆ. ಬಾಕಿ ಉಳಿದ 171 ಹಳ್ಳಿಗಳನ್ನು ಶಾಂತಿಸಾಗರ ಜಲಮೂಲದಿಂದ ನೀರು ಪೂರೈಸಲು ಸಭೆ ಅನುಮೋದನೆ ನೀಡಿತು.

ಹಿರಿಯೂರು ತಾಲ್ಲೂಕು ವ್ಯಾಪ್ತಿಯ 284 ಗ್ರಾಮಗಳ ಪೈಕಿ 39 ಗ್ರಾಮಗಳು ಜವಗೊಂಡನಹಳ್ಳಿ ಬಹುಗ್ರಾಮ ಯೋಜನೆಯಡಿ ನೀರು ಪಡೆಯಲಿವೆ. 38 ಗ್ರಾಮಗಳು ಐಮಂಗಲ ಬಹುಗ್ರಾಮ ಯೋಜನೆ, 38 ಗ್ರಾಮಗಳು ಹರ್ತಿಕೋಟೆ ಯೋಜನೆ ಹಾಗೂ 38 ಗ್ರಾಮಗಳು ಐಮಂಗಲ ಭಾಗ-2 ಯೋಜನೆ ವ್ಯಾಪ್ತಿಯಲ್ಲಿವೆ. ಬಾಕಿ ಉಳಿದ 131 ಗ್ರಾಮಗಳಿಗೆ ವಿ.ವಿ.ಸಾಗರ ಜಲಾಶಯದಿಂದ ನೀರು ಪೂರೈಸಲಾಗುತ್ತದೆ.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಜ್ಞಾನೇಶ್ ಮಾತನಾಡಿ, ‘ಜಿಲ್ಲೆಯಲ್ಲಿ ವಾಣಿವಿಲಾಸ ಮತ್ತು ಗಾಯತ್ರಿ ಜಲಾಶಯಗಳಿವೆ. ಇಲ್ಲಿಂದ ಹಿರಿಯೂರು, ಚಿತ್ರದುರ್ಗ ಮತ್ತು ಚಳ್ಳಕೆರೆ ನಗರಗಳಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗುತ್ತಿದೆ. ಹಿರಿಯೂರು ತಾಲ್ಲೂಕಿನ 76 ಹಳ್ಳಿಗಳಿಗೆ ನೀರು ಒದಗಿಸುವ ಬಹುಗ್ರಾಮ ಯೋಜನೆ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ. ತುಂಗಭದ್ರಾ ಜಲಾಶಯದಿಂದ ಕುಡಿಯುವ ನೀರು ಒದಗಿಸುವ ಕಾಮಗಾರಿ ಪ್ರಗತಿಯಲ್ಲಿದೆ’ ಎಂದು ಹೇಳಿದರು.

ಹೊಳಲ್ಕೆರೆ ತಾಲ್ಲೂಕು ವ್ಯಾಪ್ತಿಯ 273 ಗ್ರಾಮಗಳ ಪೈಕಿ 273 ಗ್ರಾಮಗಳು ನಬಾರ್ಡ್ ಬಹುಗ್ರಾಮ ಯೋಜನೆ ವ್ಯಾಪ್ತಿಗೆ ಬರಲಿವೆ. ವಿವರವಾದ ಯೋಜನಾ ವರದಿ ತಯಾರಿಸಿ ಇಲಾಖೆಗೆ ಸಲ್ಲಿಸಲಾಗಿದೆ. ಹೊಸದುರ್ಗ ತಾಲ್ಲೂಕು ವ್ಯಾಪ್ತಿಯ ಎಲ್ಲ 346 ಗ್ರಾಮಗಳು ಡಿಬಿಓಟಿ ಬಹುಗ್ರಾಮ ಯೋಜನೆಯಡಿಗೆ ಒಳಪಟ್ಟಿವೆ. ಚಳ್ಳಕೆರೆ ತಾಲ್ಲೂಕು ವ್ಯಾಪ್ತಿಯಲ್ಲಿರುವ 345 ಗ್ರಾಮ ಹಾಗೂ ಮೊಳಕಾಲ್ಮೂರು ತಾಲ್ಲೂಕಿನ 134 ಗ್ರಾಮ ತುಂಗಭದ್ರಾ ಹಿನ್ನೀರಿನ ಯೋಜನೆಗೆ ಸೇರಿವೆ ಎಂದು ಮಾಹಿತಿ ನೀಡಿದರು.

***

ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಜನರಿಗೆ ಕುಡಿಯುವ ನೀರು ಒದಗಿಸಬೇಕು.

–ಡಾ.ಕೆ.ನಂದಿನಿದೇವಿ
ಜಿಲ್ಲಾ ಪಂಚಾಯಿತಿ ಸಿಇಒ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು