ಚಳ್ಳಕೆರೆ: ಮೇಲ್ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ತಾಲ್ಲೂಕಿನ ಸಿದ್ದಾಪುರ ಮತ್ತು ವೀರದಿಮ್ಮನಹಳ್ಳಿ ಗ್ರಾಮಸ್ಥರು ರಾಷ್ಟ್ರೀಯ ಹೆದ್ದಾರಿ (150 ಎ) ತಡೆದು ಗುರುವಾರ ದಿಢೀರ್ ಪ್ರತಿಭಟನೆ ನಡೆಸಿದರು.
ಹೆದ್ದಾರಿಯಿಂದ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಅಂಡರ್‌ಪಾಸ್ ಕಿರಿದಾಗಿದ್ದು, ಅವೈಜ್ಞಾನಿಕವಾಗಿದೆ. ಇದರಿಂದ ಗ್ರಾಮದ ಜನರ ಓಡಾಟಕ್ಕೆ ತೀವ್ರ ತೊಂದರೆಯಾಗುತ್ತಿದೆ ಎಂದು ಗ್ರಾಮದ ಮುಖಂಡ ಶೇಖರಪ್ಪ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಶ್ರೀರಂಗಪಟ್ಟಣ-ಬೀದರ್ ಮಾರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಕಷ್ಟು ವಾಹನಗಳು ಸಂಚರಿಸುತ್ತಿವೆ. ಗ್ರಾಮ ಸಂಪರ್ಕದ ರಸ್ತೆ ಅತ್ಯಂತ ಕಿರಿದಾಗಿದ್ದು ಅಪಘಾತಗಳಿಗೆ ದಾರಿ ಮಾಡಿಕೊಟ್ಟಾಂಗಿದೆ ಎಂದು ಗ್ಯಾರಂಟಿ ಯೋಜನೆ ತಾಲ್ಲೂಕು ಸಮಿತಿ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ ಹೇಳಿದರು.
ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಟಿ.ರಘುಮೂರ್ತಿ, ತಾಲ್ಲೂಕಿನ ನನ್ನಿವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ 20ಕ್ಕೂ ಹೆಚ್ಚು ಹಟ್ಟಿಯ ಜನರು ಹೆದ್ದಾರಿಯ ಮೂಲಕವೆ ನಗರಕ್ಕೆ ಬರಬೇಕಾಗಿದೆ. ಹೀಗಾಗಿ ಹೆದ್ದಾರಿಯ ಅಲ್ಲಲ್ಲಿ ಮೇಲ್ಸೇತುವೆ ನಿರ್ಮಿಸಿಕೊಡಬೇಕು ಎಂದು ಪ್ರಾಧಿಕಾರದ ಅಧಿಕಾರಿಗಳಿಗೆ ಸಲಹೆ ನೀಡಿದರು.
ಜಿಲ್ಲಾಧಿಕಾರಿ ವೆಂಕಟೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ತಹಶೀಲ್ದಾರ್ ರೇಹಾನ್ ಪಾಷ, ಡಿವೈಎಸ್ಪಿ ಟಿ.ಬಿ.ರಾಜಣ್ಣ, ಬೆಸ್ಕಾಂ ಅಧಿಕಾರಿ ಶಿವಪ್ರಸಾದ್ ಹೆದ್ದಾರಿ ಅಂಡರ್‌ಪಾಸ್ ಪರಿಶೀಲಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಟಿ.ಶಶಿಧರ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪಾತಲಿಂಗಪ್ಪ, ಮಂಜುನಾಥ್, ಶಿವಕುಮಾರ್, ನಾಗರಾಜ, ಮಹೇಶ್, ಗ್ರಾಮ ಪಂಚಾಯಿತಿ ಸದಸ್ಯ ಪ್ರಭುಯಾದವ್, ನಾಗರಾಜ, ತಿಪ್ಪೇರುದ್ರಪ್ಪ, ರಾಜನಾಯ್ಕ, ಕುಮಾರನಾಯ್ಕ, ಜಗದೀಶ್, ಸೋಮ್ಲನಾಯ್ಕ, ವೀರನಾಯ್ಕ, ರವಿನಾಯ್ಕ, ರಾಜಣ್ಣ ಇದ್ದರು.