ಮಂಗಳವಾರ, ನವೆಂಬರ್ 24, 2020
22 °C
ಉತ್ತಮ ಆದಾಯದ ನಿರೀಕ್ಷೆಯಲ್ಲಿ ಬೆಳೆಗಾರರು

ಚಳ್ಳಕೆರೆಯಲ್ಲಿ ಈ ಬಾರಿ ತೊಗರಿ ಬಂಪರ್ ಬೆಳೆ

ಶಿವಗಂಗಾ ಚಿತ್ತಯ್ಯ Updated:

ಅಕ್ಷರ ಗಾತ್ರ : | |

Prajavani

ಚಳ್ಳಕೆರೆ: ಮುಂಗಾರು ಹಂಗಾಮಿನಲ್ಲಿ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಬಿದ್ದ ಮಳೆಯಿಂದ ತಾಲ್ಲೂಕಿನ ಎಲ್ಲೆಡೆ ಬಿತ್ತನೆಯಾಗಿರುವ ತೊಗರಿ ಬೆಳೆ ಸಮೃದ್ಧವಾಗಿ ಬೆಳೆದಿದೆ. ಇದರಿಂದಾಗಿ ಬೆಳೆಗಾರರು ಉತ್ತಮ ಆದಾಯ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

ಬಿತ್ತನೆಯ ಆರಂಭದಿಂದಲೇ ಉತ್ತಮ ಮಳೆ ಬಂದ ಕಾರಣ ಶೇಂಗಾ, ಈರುಳ್ಳಿ ಬೆಳೆ ಚೆನ್ನಾಗಿ ಬಂದಿದ್ದವು. ಬೆಳೆ ಫಸಲಿಗೆ ಬಂದ ಸಂದರ್ಭದಲ್ಲಿ ಹೆಚ್ಚು ಮಳೆ ಸುರಿಯಿತು. ಇದರಿಂದ ತೇವಾಂಶ ಹೆಚ್ಚಳವಾಗಿ ಬೆಳೆ ಸಂಪೂರ್ಣ ವಿಫಲವಾಗಿದೆ.

ಆದರೆ, ಮಳೆಯಾಶ್ರಿತ ಖುಷ್ಕಿ ಭೂಮಿಯಲ್ಲಿ ತಾಲ್ಲೂಕಿನ ನಗರಂಗೆರೆ, ಸೋಮಗುದ್ದು, ಬಾಲೇನಹಳ್ಳಿ, ರಾಮಜೋಗಿಹಳ್ಳಿ, ರೆಡ್ಡಿಹಳ್ಳಿ, ಮೀರಾಸಾಬಿಹಳ್ಳಿ, ಭರಮಸಾಗರ, ಬುಡ್ನಹಟ್ಟಿ, ನೇರಲಗುಂಟೆ, ನನ್ನಿವಾಳ, ಕುರುಡಿಹಳ್ಳಿ ಮುಂತಾದ ಗ್ರಾಮದಲ್ಲಿ ಬಿತ್ತನೆ ಮಾಡಿದ ತೊಗರಿ ಬೆಳೆ ಉತ್ತಮವಾಗಿದ್ದು, ಗಿಡಗಳು 4-5 ಅಡಿ ಎತ್ತರ ಬೆಳೆದಿವೆ.

‘ಹಚ್ಚ ಹಸಿರಿನಿಂದ ಕಂಗೊಳಿಸುವ ಗಿಡಗಳು, ಹೂವು ಮತ್ತು ಕಾಯಿಗಳನ್ನು ಹೊತ್ತು ನಿಂತಿವೆ. ಹೂವಿನ ಹಳದಿಬಣ್ಣ ಇಡೀ ಬೆಳೆಯನ್ನು ಆವರಿಸಿಕೊಂಡಂತಿದೆ. ಹೊಲದಲ್ಲಿನ ಫಸಲು ಕಣ್ಣಿಗೆ ಹಬ್ಬವನ್ನುಂಟು ಮಾಡಿದೆ. ಶೇಂಗಾ, ಈರುಳ್ಳಿ ವಿಫಲವಾಯ್ತು. ಸದ್ಯಕ್ಕೆ ಈಗ ರೈತರನ್ನು ಕೈ ಹಿಡಿಯುವ ಬೆಳೆ ತೊಗರಿ ಮಾತ್ರ ಎಂಬಂತಾಗಿದೆ. ಬೆಳೆ ಚೆನ್ನಾಗಿ ಬಂದಿದೆ. ಇದರಿಂದ ಉತ್ತಮ ಆದಾಯ ನಿರೀಕ್ಷಿಸಲಾಗಿದೆ’ ಎನ್ನುತ್ತಾರೆ ರೈತ ವೀರಭದ್ರಪ್ಪ.

‘ಮಳೆಯಾಶ್ರಿತ 8 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಹೊಂದಲಾಗಿತ್ತು. ಆದರೆ, 8,257 ಹೆಕ್ಟೆರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗಿದೆ. ಹೂವು ಕಟ್ಟುವ ಹಂತದಲ್ಲಿ ಇರುವ ತೊಗರಿ ಬೆಳೆಗೆ ಪ್ರತಿ ಲೀಟರ್ ನೀರಿಗೆ 0.5 ಎಂಎಲ್ ಪ್ಲಾನೋಫಕ್ಸ್ ಮಿಶ್ರಣ ಮಾಡಿ ಸಿಂಪರಣೆ ಮಾಡಬೇಕು. ಇದರಿಂದ ಹೂವು ಉದುರುವುದು ನಿಲ್ಲುತ್ತದೆ ಎಂದು ಕೃಷಿ ಸಹಾಯಕ ನಿರ್ದೇಶಕ ಡಾ.ಮೋಹನ್‍ಕುಮಾರ್ ರೈತರಿಗೆ ಸಲಹೆ ನೀಡಿದ್ದಾರೆ.

‘ಮೋಡ ಕವಿದ ವಾತಾವಾರಣ ಹಾಗೂ ಮಳೆ ಬರುವ ಮುನ್ಸೂಚನೆ ಇರುವುದರಿಂದ ಬೆಳೆಗೆ ಕಾಯಿಕೊರಕ ರೋಗ ಹರಡುವ ಸಾಧ್ಯತೆ ಇದೆ. ಕಾಯಿಕೊರಕ ರೋಗ ಕಂಡುಬಂದಲ್ಲಿ 2 ಎಂಎಲ್ ಕ್ಲೋರೋಪೈರಿಫಸ್ ಮತ್ತು ಎಮೋಮೆಕ್ಸೆಟ್ ಬೆಂಜೆಟ್ ಪ್ರತಿ ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಬೆಳೆಗೆ ಸಿಂಪರಣೆ ಮಾಡಬೇಕು’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು