ಎನ್‌ಇಪಿ ವಿರೋಧಿಸಿ ದೆಹಲಿ ಚಲೋ: ಎನ್‌ಎಸ್‌ಯುಐರಾಜ್ಯ ಘಟಕ ಅಧ್ಯಕ್ಷ ಕೀರ್ತಿ ಗಣೇಶ್

ಚಿತ್ರದುರ್ಗ: ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ವಿರೋಧಿಸಿ ದೆಹಲಿ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಎನ್‌ಎಸ್‌ಯುಐ ರಾಜ್ಯ ಘಟಕದ ಅಧ್ಯಕ್ಷ ಕೀರ್ತಿ ಗಣೇಶ್ ತಿಳಿಸಿದರು.
ಕಾಂಗ್ರೆಸ್ ಜಿಲ್ಲಾ ಘಟಕದ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಎನ್‌ಇಪಿ ತರಾತುರಿಯಲ್ಲಿ ಜಾರಿಗೆ ತರುತ್ತಿರುವುದರ ಹಿಂದೆ ಖಾಸಗೀಕರಣದ ದುರುದ್ದೇಶವಿದೆ’ ಎಂದು ಆರೋಪಿಸಿದರು.
‘ರಾಷ್ಟ್ರೀಯ ಶಿಕ್ಷಣ ನೀತಿ ಇಡೀ ಶಿಕ್ಷಣ ವ್ಯವಸ್ಥೆಯನ್ನು ವ್ಯಾಪಾರೀಕರಣಗೊಳಿಸಿ, ಸರಕಿನಂತೆ ಆಗುವುದರಲ್ಲಿ ಅನುಮಾನವಿಲ್ಲ. ಶಿಕ್ಷಣದಿಂದ ಲಾಭ ಮಾಡಿಕೊಳ್ಳುವ ಕಾರ್ಪೊರೇಟ್ ಮನೆತನಗಳಿಗೆ ಒಪ್ಪಿಸುವ ಸಾಧ್ಯತೆ ಹೆಚ್ಚಿದೆ’ ಎಂದು ದೂರಿದರು.
‘ಎನ್‌ಇಪಿ ವಿರುದ್ಧ ವಿದ್ಯಾರ್ಥಿಗಳನ್ನು ಸಂಘಟಿಸಲು ರಾಜ್ಯದಾದ್ಯಂತ ಪ್ರವಾಸ ಕೈಗೊಳ್ಳಲಾಗಿದೆ. ಶಾಲಾ–ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಲ್ಲಿ ಈ ಕುರಿತು ಜಾಗೃತಿ ಮೂಡಿಸಲಾಗುವುದು. ಅದಕ್ಕಾಗಿ ಈ ಜಿಲ್ಲೆಯಲ್ಲೂ ಶೀಘ್ರದಲ್ಲೇ ಒಕ್ಕೂಟದ ಜಿಲ್ಲಾ ಘಟಕದ ಪದಾಧಿಕಾರಿಗಳನ್ನು ನೇಮಕ ಮಾಡಲಾಗುವುದು’ ಎಂದರು.
ಎನ್‌ಎಸ್‌ಯುಐ ರಾಷ್ಟ್ರೀಯ ಕಾರ್ಯದರ್ಶಿ ಮಮತಾ ನೇರ್ಲಿಗೆ, ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು, ಕೊರೊನಾ ವಿರುದ್ಧ ಹೋರಾಡುತ್ತಿರುವ ಸಮಯ ದುರುಪಯೋಗ ಮಾಡಿಕೊಂಡು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಹೇರಲು ಹೊರಟಿದೆ’ ಎಂದು ಆರೋಪಿಸಿದರು.
‘ಪುಸ್ತಕ ನೀಡುವುದರಿಂದ ಹಿಡಿದು ಪರೀಕ್ಷೆ ನಡೆಸಿ ಫಲಿತಾಂಶ ಪ್ರಕಟಿಸುವ ವಿಶ್ವವಿದ್ಯಾಲಯಗಳ ಅಧಿಕಾರವನ್ನು ಕಿತ್ತುಕೊಳ್ಳಲು ಮುಂದಾಗಿದೆ. ಕಾಲೇಜು ಆಡಳಿತ ಮಂಡಳಿಗೆ ಎಲ್ಲ ಅಧಿಕಾರ ನೀಡಲು ಹೊರಟಿದೆ. ಈ ನೀತಿಯು ಜನವಿರೋಧಿಯಾಗಿದೆ’ ಎಂದು ದೂರಿದರು.
ನವೋದಯದ ಹರಿಕಾರರು ಎತ್ತಿಹಿಡಿದ ಜನತಾಂತ್ರಿಕ, ವೈಜ್ಞಾನಿಕ ಮತ್ತು ಧರ್ಮನಿರಪೇಕ್ಷ ತತ್ವಗಳನ್ನು ಗಾಳಿಗೆ ತೂರಿ ಶಿಕ್ಷಣವನ್ನು ಖಾಸಗೀಕರಣ, ವ್ಯಾಪಾರೀಕರಣ ಮಾಡಲು ಹುನ್ನಾರ ನಡೆಸಿದೆ. ಇದರ ವಿರುದ್ಧ ದೇಶದ ಎಲ್ಲ ರಾಜ್ಯಗಳ ವಿದ್ಯಾರ್ಥಿಗಳನ್ನು ಒಗ್ಗೂಡಿಸಿ ಚಳಿಗಾಲದ ಅಧಿವೇಶನದ ವೇಳೆ ದೆಹಲಿಯ ಸಂಸತ್ ಭವನದ ಮುಂಭಾಗ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಕಾಂಗ್ರೆಸ್ ಯುವ ಮುಖಂಡರಾದ ಆಜಾಮ್, ಎನ್.ಡಿ. ಕುಮಾರ್, ಅಶೋಕ್ ನಾಯ್ಡು, ವಿನಯ್ ಗೋಡೆಮನೆ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.