ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಜಾಜೂರು: ಚಿತ್ತೆ ಮಳೆಗೆ ತತ್ತರಿಸಿದ ರೈತ ವರ್ಗ

Last Updated 19 ಅಕ್ಟೋಬರ್ 2018, 13:08 IST
ಅಕ್ಷರ ಗಾತ್ರ

ಚಿಕ್ಕಜಾಜೂರು: ಗುರುವಾರ ಮಧ್ಯಾಹ್ನ ಸುರಿದ ಚಿತ್ತೆ ಮಳೆಯಿಂದಾಗಿ ರೈತರ ಬೆಳೆಗಳು ನೀರು ಪಾಲಾಗಿವೆ.

ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದಾಗಿ ಹೊನ್ನಕಾಲುವೆ, ಹನುಮನಹಳ್ಳಿ, ಚಿಕ್ಕಜಾಜೂರು, ಕಡೂರು, ಐಯ್ಯನಹಳ್ಳಿ ಗ್ರಾಮಗಳ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದು ನಿಂತಿದ್ದ ಮೆಕ್ಕೆಜೋಳ, ರಾಗಿ, ಹತ್ತಿ, ಅವರೆ ಪೈರುಗಳು ಹಾಳಾಗಿವೆ.

ಕಡೂರು ರಸ್ತೆಯಲ್ಲಿರುವ ಹೊನ್ನಕಾಲುವೆ ಗ್ರಾಮದ ತಳವಾರ ಹೊರಕೇರಪ್ಪ ಅವರ ಜಮೀನಿನಲ್ಲಿ ತೆನೆಯಾಗಿದ್ದ ರಾಗಿ ಮಳೆ ನೀರಿನಿಂದ ಹಾನಿಯಾಗಿದೆ.

ಹೊನ್ನಕಾಲುವೆ ಹಾಗೂ ಚಿಕ್ಕಜಾಜೂರು ಗ್ರಾಮಗಳ ಜಮೀನುಗಳಲ್ಲಿ ಬೆಳೆದು ನಿಂತಿದ್ದ ಮೆಕ್ಕೆಜೋಳ, ಹತ್ತಿ ಜಮೀನುಗಳಲ್ಲೂ ನೀರು ತುಂಬಿ ಹರಿಯುತ್ತಿತ್ತು. ಇತ್ತೀಚೆಗಷ್ಟೆ ಅಡಿಕೆ ಸಸಿಗಳನ್ನು ನಾಟಿ ಮಾಡಿದ್ದ ಗ್ರಾಮದ ಅಬ್ದುಲ್ ಕಲಾಂ ಅವರ ಜಮೀನಿಗೂ ಅಪಾರ ಪ್ರಮಾಣದ ನೀರು ನುಗ್ಗಿ, ಮಣ್ಣು ಕೊಚ್ಚಿ ಹೋಗಿದೆ.

ಹೊನ್ನಕಾಲುವೆ ಗ್ರಾಮದಲ್ಲಿನ ಜಿ. ಶಿವಕುಮಾರ ಅವರ ಜಮೀನಿನಲ್ಲಿ ಮೆಕ್ಕೆಜೋಳವನ್ನು ಮುರಿದು ರಾಶಿ ಹಾಕಿದ್ದ ಬಣವೆಗೆ ನೀರು ನುಗ್ಗಿದ್ದು, ತೆನೆ ಹಾಳಾಗಿದೆ.

ವರ್ಷಾರಂಭದಿಂದ ಇದುವರೆಗೂ ಚಿಕ್ಕಜಾಜೂರು ಸುತ್ತಮುತ್ತಲ ಯಾವುದೇ ಹಳ್ಳಗಳು ಹರಿದಿರಲಿಲ್ಲ. ಆದರೆ ಗುರುವಾರ ಸುರಿದ ಮಳೆಗೆ ಶೃಂಗೇರಿ ಹನುಮನಹಳ್ಳಿ, ಹೊನ್ನಕಾಲುವೆ ಭಾಗಗಳಲ್ಲಿನ ಹೊಲಗಳಿಗೆ ನೀರು ಹರಿದು ಬಂದಿದೆ. ಹೊಲಗಳ ಬದುಗಳು ತುಂಬಿಕೊಂಡು ಸಂಜೆ ವೇಳಿಗೆ ಕರಡಿಹಳ್ಳ ಹಾಗೂ ಕರ್ಲಳ್ಳಗಳಿಗೆ ಹರಿದಿದೆ.

ಬುಧವಾರ ರಾತ್ರಿ 23.5 ಮಿ.ಮೀ. ಹಾಗೂ ಗುರುವಾರ 18.5 ಮಿ.ಮೀ. ನಷ್ಟು ಮಳೆ ದಾಖಲಾಗಿದೆ ಎಂದು ಕಂದಾಯ ಇಲಾಖೆಯ ಗುರುರಾಜ್ ತಿಳಿಸಿದ್ದಾರೆ.

ಬಿ. ದುರ್ಗ, ಸಾಸಲು ಗ್ರಾಮಗಳಲ್ಲೂ ಅಷ್ಟಾಗಿ ಮಳೆಯಾಗಿಲ್ಲ. ಈ ಗ್ರಾಮಗಳ ಪಶ್ಚಿಮದಲ್ಲಿರುವ ರೈಲ್ವೆ ಹಳಿಯ ಆಚೆ ಉತ್ತಮ ಮಳೆಯಾಗಿದ್ದು, ಹೊಲಗಳಲ್ಲಿ ನೀರು ಹರಿದಿದೆ. ಸಮೀಪದ ಕೋಟೆಹಾಳ್, ಕೊಡಗವಳ್ಳಿ, ಕೊಡಗವಳ್ಳಿಹಟ್ಟಿ, ಚಿಕ್ಕಎಮ್ಮಿಗನೂರು, ಹಿರೇಎಮ್ಮಿಗನೂರು, ಅಂತಾಪುರ, ನಂದಿಹಳ್ಳಿಗಳಲ್ಲೂ ಉತ್ತಮ ಹದ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT