ಚಿಕ್ಕಜಾಜೂರು: ರೈಲ್ವೆ ಇಲಾಖೆ ನಿರ್ಮಿಸಿರುವ ಮೇಲ್ಸೇತುವೆಯ ರಸ್ತೆ ಅಲ್ಲಲ್ಲಿ ಕುಸಿಯುತ್ತಿದ್ದು, ಸಂಬಂಧಪಟ್ಟ ಇಲಾಖೆಯ ಎಂಜಿನಿಯರ್‌ಗಳು ತಕ್ಷಣ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಗ್ರಾಮದ ಹೊಸನಗರ ಬಡಾವಣೆ ಹಾಗೂ ಕಡೂರು ಮತ್ತಿತರ ಗ್ರಾಮಗಳಿಗೆ ಸಂಚರಿಸಲು ರೈಲ್ವೆ ಇಲಾಖೆ ಹಳಿಗಳ ಮೇಲ್ಭಾಗದಲ್ಲಿ ಮೇಲ್ಸೇತುವೆಯನ್ನು ಈ ಹಿಂದೆ ನಿರ್ಮಿಸಿತ್ತು. ಆದರೆ, ರಸ್ತೆ ಅಲ್ಲಲ್ಲಿ ಹಾನಿಗೀಡಾಗಿದೆ. ರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗಿವೆ. ಸವಾರರು ಸ್ವಲ್ಪ ಎಚ್ಚರ ತಪ್ಪಿದರೂ ವಾಹನಗಳು ಉರುಳಿ ಬೀಳುವ ಅಪಾಯವಿದೆ. ಇಲ್ಲಿ ಅಳವಡಿಸಿರುವ ವಿದ್ಯುತ್ ದೀಪಗಳು ರಾತ್ರಿ ವೇಳೆ ಬೆಳಗುವುದಿಲ್ಲ. ಸಂಜೆ ಹಾಗೂ ಮುಂಜಾನೆ ವೇಳೆ ಸಂಚರಿಸುವ ವಾಹನ ಸವಾರರು ಹಾಗೂ ವಾಯು ವಿಹಾರಿಗಳಿಗೆ ಸುರಕ್ಷತೆ ಇಲ್ಲದಂತಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ರೈಲ್ವೆ ಇಲಾಖೆ ತಕ್ಷಣ ಕ್ರಮ ತೆಗೆದುಕೊಳ್ಳಬೇಕು ಎಂದು ವಾಯು ವಿಹಾರಿಗಳಾದ ನಿವೃತ್ತ ಬ್ಯಾಂಕ್ ಅಧಿಕಾರಿ ಜಿ. ನಟರಾಜ್, ಮಾರುತಿ, ನಾಗರಾಜಪ್ಪ, ದೇವರಾಜ್, ರವಿಕುಮಾರ್, ಬತ್ತಿ ಸೀನಪ್ಪ, ನಿಜಗುಣ, ಸತೀಶ್, ಹರವ ಮಂಜುನಾಥ್, ಬಸವರಾಜು ಆಗ್ರಹಿಸಿದ್ದಾರೆ.