ಚಿಕ್ಕಜಾಜೂರು: ಬಾಲ್ಯವಿವಾಹ ಮಾಡಿಸುವುದು ಹಾಗೂ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುವುದು ಶಿಕ್ಷಾರ್ಹ ಅಪರಾಧಗಳು ಎಂದು ಮುಖ್ಯ ಶಿಕ್ಷಕ ಮಂಜುನಾಥ್ ತಿಳಿಸಿದರು.
ಇಲ್ಲಿನ ಎಸ್‌ಜೆಎಂ ಪ್ರೌಢಶಾಲೆಯಲ್ಲಿ ಬುಧವಾರ ನಡೆದ ಪೋಕ್ಸೊ ಕಾಯ್ದೆ ಹಾಗೂ ಬಾಲ್ಯ ವಿವಾಹ ನಿಷೇಧ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈಗಲೂ ಕೆಲವು ಸಮುದಾಯಗಳಲ್ಲಿ ಬಾಲ್ಯವಿವಾಹ ಪದ್ದತಿ ಇನ್ನೂ ಜೀವಂತವಾಗಿದೆ. ಬಾಲ್ಯವಿವಾಹಕ್ಕೆ ಒಳಗಾಗುವ ಬಾಲಕಿಯರು ಪ್ರಸವದ ವೇಳೆಯಲ್ಲಿ ಪ್ರಾಣ ಕಳೆದುಕೊಂಡ ನಿದರ್ಶನಗಳಿವೆ. ಹುಟ್ಟುವ ಮಕ್ಕಳ ಆರೋಗ್ಯದ ಮೇಲೂ ದುಷ್ಪರಿಣಾಮ ಉಂಟಾಗುತ್ತದೆ. ಬಾಲ್ಯ ವಿವಾಹಗಳು ಕಂಡುಬಂದಲ್ಲಿ, ಪೊಲೀಸ್ ಠಾಣೆಗೆ ತಿಳಿಸಬೇಕು ಎಂದು ಸೂಚಿಸಿದರು.
‘ಬಾಲಕಿಯರ ಮೇಲಿನ ಅಮಾನವೀಯ ಘಟನೆಗಳಿಗೆ ಕಡಿವಾಣ ಹಾಕಲು ಸರ್ಕಾರ ಪೋಕ್ಸೊ ಕಾಯ್ದೆ ಜಾರಿಗೆ ತಂದಿದ್ದು, ದೌರ್ಜನ್ಯಕ್ಕೆ ಒಳಗಾದ ಬಾಲಕಿಯರಿಗೆ ರಕ್ಷಣೆ ನೀಡುವುದರ ಜತೆಗೆ, ಅಪರಾಧ ಎಸಗಿದ ವ್ಯಕ್ತಿಗೆ ಉಗ್ರ ಶಿಕ್ಷೆ ನೀಡುವುದು ಕಾಯ್ದೆಯ ಉದ್ದೇಶ’ ಎಂದು ಶಿಕ್ಷಕ ಕೆ.ಎಚ್. ಸಿದ್ಧಲಿಂಗಪ್ಪ ಹೇಳಿದರು.
ಶಿಕ್ಷಕರಾದ ರವಿಕುಮಾರ್, ಕಮಲಾಕ್ಷಿ, ಐಶ್ವರ್ಯ, ಮೇಘಾ ಹಾಗೂ ವಿದ್ಯಾರ್ಥಿಗಳು ಇದ್ದರು.