ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಮಕ್ಕಳ ದಿನ ಅರ್ಥಪೂರ್ಣ ಆಚರಣೆ

ಬಾಲ್ಯವಿವಾಹ ತಡೆಗೆ ಎಲ್ಲರೂ ಕೈಜೋಡಿಸಿ; ಜಿಲ್ಲಾ ನ್ಯಾಯಾಧೀಶರಾದ ಮನಗೂಳಿ ಪ್ರೇಮಾವತಿ
Last Updated 15 ನವೆಂಬರ್ 2021, 5:04 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ವಿವಾಹದ ಅರಿವೇ ಇಲ್ಲದ ವಯಸ್ಸಿನಲ್ಲಿ ಮಕ್ಕಳಿಗೆ ಮದುವೆ ಮಾಡುವುದು ಸೂಕ್ತವಲ್ಲ. ಇದರಿಂದ ಅವರ ಭವಿಷ್ಯಕ್ಕೆ ಕುತ್ತು ಉಂಟಾಗಲಿದೆ. ಬಾಲ್ಯವಿವಾಹ ಶಿಕ್ಷಾರ್ಹ ಅಪರಾಧ. ಪೋಷಕರು ದಯವಿಟ್ಟು ತಮ್ಮ ಮಕ್ಕಳನ್ನು ಬಾಲ್ಯವಿವಾಹದ ಕೂಪಕ್ಕೆ ತಳ್ಳಬೇಡಿ...’

ತರಾಸು ರಂಗಮಂದಿರದಲ್ಲಿ ಬೆಂಗಳೂರಿನ ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಾಗೂ ಕಾನೂನು ಸೇವಾ ಸಪ್ತಾಹದ ಅಂಗವಾಗಿ ಭಾನುವಾರ ಆಯೋಜಿಸಿದ್ದ ‘ಮಕ್ಕಳ ದಿನಾಚರಣೆ’ ಕಾರ್ಯಕ್ರಮದಲ್ಲಿ ಬಾಲಕಿಯರ ಬಾಲಮಂದಿರದ ಮಕ್ಕಳು ಬಾಲ್ಯವಿವಾಹ ಕುರಿತು ಕಿರುನಾಟಕ ಪ್ರದರ್ಶಿಸುವ ಮೂಲಕ ಗಮನಸೆಳೆದ ಪರಿ ಇದು.

ಮಕ್ಕಳ ಮೇಲೆ ಆಗುತ್ತಿರುವ ದೌರ್ಜನ್ಯಹಾಗೂ ಸಾಮಾಜಿಕ ಸಮಸ್ಯೆಗಳ ತಡೆಯುವ ಕುರಿತು ಪ್ರದರ್ಶಿಸಿದ ಕಿರುನಾಟಕ ನೆರೆದಿದ್ದವರ ಮೆಚ್ಚುಗೆಗೆ ಪಾತ್ರವಾಯಿತು. ಬಾಲಮಂದಿರದ ವಿದ್ಯಾರ್ಥಿಗಳು ದೇಶಭಕ್ತಿ ಹಾಡಿಗೆ ಹೆಜ್ಜೆ ಹಾಕಿ ಸಂಚಲನ ಮೂಡಿಸಿದರು. ಈ ಮೂಲಕ ಮಕ್ಕಳ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಪ್ರಧಾನಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಮನಗೂಳಿ ಎಂ.ಪ್ರೇಮಾವತಿ, ‘ಮಕ್ಕಳು ದೇಶದ ಆಸ್ತಿ. ಭವ್ಯ ಭಾರತ ನಿರ್ಮಾಣದಲ್ಲಿ ಇವರ ಪಾತ್ರ ಮಹತ್ವದ್ದಾಗಿದೆ. ಆದ್ದರಿಂದ ಮಕ್ಕಳ ಹಕ್ಕುಗಳ ರಕ್ಷಣೆ ಆಗಬೇಕು. ಅವರ ಸರ್ವತೋಮುಖ ಬೆಳವಣಿಗೆಗೆ ಪ್ರೋತ್ಸಾಹ ನೀಡಬೇಕು’ ಎಂದು ಸಲಹೆ ನೀಡಿದರು.

ಕಿರುನಾಟಕ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ‘ಬಾಲ್ಯವಿವಾಹಕ್ಕೆ ಹೆಣ್ಣುಮಕ್ಕಳೇ ಗುರಿಯಾಗುತ್ತಿದ್ದಾರೆ. ಏನು ಅರಿಯದ ವಯಸ್ಸಿನಲ್ಲಿ ಮದುವೆ ಮಾಡಿದರೆ ಪೋಷಕರೇ ಅವರ ಜೀವನ ಹಾಳು ಮಾಡಿದಂತೆ. ಇದು ನಗರ ಪ್ರದೇಶಕ್ಕಿಂತಲೂ ಗ್ರಾಮೀಣ ಭಾಗಗಳಲ್ಲಿ ನಡೆಯುತ್ತಿದೆ. ಇದನ್ನು ಸಂಪೂರ್ಣವಾಗಿ ತಡೆಯುವ ಜವಾಬ್ದಾರಿ ಪ್ರತಿಯೊಬ್ಬ ಪ್ರಜೆಯದ್ದಾಗಿದೆ’ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ, ‘ಮಕ್ಕಳ ಸಹಾಯವಾಣಿ 1098, ಪೊಲೀಸ್ ಸಹಾಯವಾಣಿ ಪ್ರತಿಯೊಬ್ಬ ಮಕ್ಕಳ ಬಳಿಯೂ ಇರಬೇಕು. ಎಲ್ಲಿಯಾದರೂ ದೌರ್ಜನ್ಯ ನಡೆದರೆ, ತೊಂದರೆ ಉಂಟಾದಲ್ಲಿ ಇದು ಸಹಾಯಕ್ಕೆ ಬರಲಿದೆ. ಆದ್ದರಿಂದ ತಪ್ಪದೇ ನಿಮ್ಮ ಬಳಿ ನಂಬರ್ ಇಟ್ಟುಕೊಳ್ಳಿ’ ಎಂದು ಸಲಹೆ ನೀಡಿದರು.

‘18 ವರ್ಷ ತುಂಬಿದ ಬಳಿಕ ಚಾಲನಾ ಪರವಾನಗಿ ಪಡೆದು ವಾಹನ ಚಾಲನೆ ಮಾಡಬೇಕು. ಆದರೆ, ಅದಕ್ಕಿಂತ ಮುನ್ನ ಯಾವ ಮಕ್ಕಳು ವಾಹನ ಚಾಲನೆ ಮಾಡಬಾರದು. ಪೋಷಕರು ಕೂಡ ನೀಡಬಾರದು. ಇದರಿಂದ ತೊಂದರೆ ಉಂಟಾದಲ್ಲಿ ಪಶ್ಚಾತಾಪ ಪಡಬೇಕಾಗುತ್ತದೆ’ ಎಂದು ಎಚ್ಚರಿಸಿದರು.

‘ಹಕ್ಕುಗಳ ಕುರಿತು ಮಕ್ಕಳು ತಿಳಿದುಕೊಳ್ಳಬೇಕು. ವಿದ್ಯೆಯ ಜತೆಗೆ ಸಂಸ್ಕಾರವಂತರಾಗಿ ಬಾಳುವುದನ್ನು ಕಲಿಯಬೇಕು. ಸಮಾಜಕ್ಕೆ ಉತ್ತಮ ಕೊಡುಗೆ ನೀಡುವಂಥ ಸತ್ಪ್ರಜೆಗಳಾಗಿ ದೇಶ ಕಟ್ಟುವ ಕಾಯಕಕ್ಕೆ ಕೈಜೋಡಿಸಬೇಕು’ ಎಂದು ತಿಳಿಸಿದರು.

ನ್ಯಾಯಾಧೀಶರಾದ ಆರ್.ಬನ್ನಿಹಟ್ಟಿ ಹನುಮಂತಪ್ಪ, ಎಚ್.ಎಂ.ದೇವರಾಜು, ಎಸ್.ಎನ್.ಕಲ್ಕಣಿ, ಸಿ.ಎಸ್.ಜಿತೇಂದ್ರನಾಥ್, ಕೆ.ಲತಾ, ನೇಮಚಂದ್ರ ಜೆ.ದೇಸಾಯಿ, ಎಚ್.ಜೆ.ಶಿಲ್ಪಾ, ಬಿ.ಕೆ.ಗಿರೀಶ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಎಸ್.ರಾಜಾನಾಯಕ್, ವಕೀಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಶಿವುಯಾದವ್, ಜಿ.ಸಿ.ದಯಾನಂದ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪಿ.ಲೋಕೇಶ್ವರಪ್ಪ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಡಾ.ಆರ್.ಪ್ರಭಾಕರ್ ಇದ್ದರು.

ಬಹುಮಾನ ವಿಜೇತ ಮಕ್ಕಳು

ಚಿತ್ರಕಲೆ ಸ್ಪರ್ಧೆ: ಸಂಸ್ಕೃತಿ–ಪ್ರಥಮ, ಆರ್.ಪುಷ್ಪಾ–ದ್ವಿತೀಯ, ದುರ್ಗೇಶ್‌ ತೃತೀಯ. ಪ್ರಬಂಧ: ಯು.ಜಿ.ಶಿವಾನಿ–ಪ್ರಥಮ, ಜಿ.ಜೆ.ಕಾವ್ಯಾ–ದ್ವಿತೀಯ, ಆರ್.ಎಸ್‌.ಸಿದ್ದೇಶ್‌–ತೃತೀಯ. ಘೋಷಣೆಗಳ ರಚನೆ: ಜಿ.ಜೆ. ಶೃತಿ–ಪ್ರಥಮ, ಯು.ಜಿ.ಶಿವಾನಿ–ದ್ವಿತೀಯ, ಜಿ.ಜೆ.ಕಾವ್ಯಾ–ತೃತೀಯ ಬಹುಮಾನ ಪಡೆದುಕೊಂಡರು.

ಕಿರುಚಿತ್ರ: ಚಿತ್ರದುರ್ಗದ ಸರ್ಕಾರಿ ಬಾಲಕಿಯರ ಬಾಲಮಂದಿರ–ಪ್ರಥಮ, ಸರ್ಕಾರಿ ಬಾಲಕರ ಬಾಲಮಂದಿರ–ದ್ವಿತೀಯ, ಮುರುಘಾರಾಜೇಂದ್ರ ಮಠದ ಬಸವ ನಿರ್ಗತಿಕರ ಕುಟೀರ ತೃತೀಯ ಬಹುಮಾನ ಪಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT