ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಒಳಾಂಗಣ ಈಜುಕೊಳದಲ್ಲಿ ಮಕ್ಕಳ ಕಲರವ

ಮೊದಲ ದಿನವೇ ಹೌಸ್‌ಪುಲ್‌– ಶುಲ್ಕದ ವಿಚಾರಕ್ಕೆ ಅಸಮಾಧಾನ
Last Updated 7 ಮೇ 2022, 4:47 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೊರೊನಾದಿಂದಾಗಿ ಕಳೆದ ಮೂರು ವರ್ಷ ಸ್ಥಗಿತಗೊಂಡಿದ್ದ ಜಿಲ್ಲಾ ಕ್ರೀಡಾಂಗಣದ ಈಜುಕೊಳದಲ್ಲಿ ಪುನಾ ಈಜು ಪ್ರಿಯರ ಕಲರವ ಶುರುವಾಗಿದೆ. ಶುಕ್ರವಾರ ಬೆಳಿಗ್ಗೆ ಇಲಾಖೆ ಸಿಬ್ಬಂದಿ ಪೂಜೆ ಸಲ್ಲಿಸಿ ಬೇಸಿಗೆ ಶಿಬಿರಕ್ಕೆ ಚಾಲನೆ ನೀಡಿದರು.

ನಗರದ ವೀರವನಿತೆ ಒನಕೆ ಓಬವ್ವ ಕ್ರೀಡಾಂಗಣದ ಆವರಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ 2010ರಲ್ಲಿ 6 ಲಕ್ಷ ಲೀಟರ್‌ ಸಾರ್ಮಥ್ಯದ ಸುಸಜ್ಜಿತ ಒಳಾಂಗಣ ಈಜುಕೊಳವನ್ನು ಸೆಮಿ ಓಲಿಂಪಿಕ್‌ ಮಾರ್ಗಸೂಚಿಯಲ್ಲಿ ನಿರ್ಮಿಸಲಾಗಿದೆ. 25 x 16 ಅಳತೆ, 4.5ರಿಂದ 5.5 ಆಳ ಹೊಂದಿದ್ದು, ರಾಜ್ಯದ ಎರಡನೇ ಪ್ರಮುಖ ಸುಸಜ್ಜಿತ ಈಜುಕೊಳ ಇದಾಗಿದ್ದು, ಉದ್ಘಾಟನೆಗೊಂಡ ದಿನದಿಂದ ನಿರಂತರವಾಗಿ ಈಜುಪ್ರಿಯರ ನೆಚ್ಚಿನ ತಾಣವಾಗಿದೆ.

ಪ್ರತಿ ವರ್ಷ ನೂರಕ್ಕೂ ಹೆಚ್ಚು ಮಕ್ಕಳು ಈ ಕೊಳದಲ್ಲಿ ಈಜು ಕಲಿತಿದ್ದಾರೆ. ಜತೆಗೆ ವಿವಿಧ ವಿಭಾಗದ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. 2020ರ ಮಾರ್ಚ್‌ನಿಂದ ಕೊರೊನಾ ಸೋಂಕಿನ ಕಾರಣಕ್ಕೆ ಸರ್ಕಾರದ ಸೂಚನೆಯಂತೆ ಸ್ಥಗಿತಗೊಳಿಸಲಾಗಿತ್ತು. ಅ ಕಾರಣಕ್ಕೆ ಬಹುತೇಕ ಯಂತ್ರೋಪಕರಣಗಳು ಹಾಳಾಗಿದ್ದವು.

ಸೋಂಕು ಸಂಪೂರ್ಣ ಇಳಿಕೆಯಾದ ಕಾರಣ ಈಜುಕೊಳ ಪ್ರಾರಂಭಿಸಲು ಇಲಾಖೆ ಕಳೆದೊಂದು ತಿಂಗಳಿನಿಂದ ಈಜುಕೊಳದ ಮಷಿನ್‌ ರೂಂನಲ್ಲಿರುವ ಮರಳಿನಿಂದ ತುಂಬಿರುವ ನೀರು ಶುದ್ಧೀ
ಕರಣದ ಟ್ಯಾಂಕ್‌ಗಳು, ಮೋಟರ್‌ಗಳನ್ನು ₹ 9.5 ಲಕ್ಷ ವೆಚ್ಚದಲ್ಲಿ ದುರಸ್ತಿಗೊಳಿಸಿದೆ. ಆದರೆ ನಗರಸಭೆ ನೀರು ಬಿಡುವ ವಿಚಾರದಲ್ಲಿ ಮಾಡಿದ ವಿಳಂಬ ಮಾಡಿದ್ದರಿಂದ ತಡವಾಗಿದೆ.

ತಡವಾದರೂ ಬೇಸಿಗೆ ಶಿಬಿರದ ಸದುಪಯೋಗವಾಗಲಿ ಎಂಬ ಕಾರಣಕ್ಕೆ ಇಲಾಖೆ ಮಕ್ಕಳ ಕಲಿಕೆಗೆ ವಿಶೇಷ ಆದ್ಯತೆವಹಿಸಿದೆ. 60 ನಿಮಿಷಗಳಂತೆ ಬೆಳಿಗ್ಗೆ 6ರಿಂದ 8 ಹಾಗೂ ಮಧ್ಯಾಹ್ನ 3ರಿಂದ 5ರವರೆಗೆ ಪುರುಷರಿಗೆ, ಸಂಜೆ 5ರಿಂದ 6ರವರೆಗೆ ಮಹಿಳೆಯರಿಗೆ ಸಮಯ ನಿಗದಿಗೊಳಿಸಿದೆ. ಪ್ರವೇಶಾತಿ ಹೆಚ್ಚಾದರೆ ಸಮಯವನ್ನು ವಿಸ್ತರಿಸುವ ಚಿಂತನೆ ನಡೆದಿದೆ.

‘ಶಿಬಿರಕ್ಕೆ ಮಕ್ಕಳು ಬರುವುದರಿಂದ ಒಂದು ಅಡಿ ಆಳ ಹಾಗೂ ಮೂರು ಅಡಿ
ಅಗಲದಲ್ಲಿ ಬೇಬಿ ಪೂಲ್‌ ನಿರ್ಮಿಸಲಾಗಿದೆ. ಇದರಲ್ಲಿ ಐದು ವರ್ಷದೊಳಗಿನ ಮಕ್ಕಳಿಗೆ ಕಲಿಯಲು ಅವಕಾಶ ನೀಡಲಾಗಿದೆ. ಇಲ್ಲಿ ರಾಜ್ಯಮಟ್ಟದ ಅನೇಕ ಕ್ರೀಡಾಕೂಟಗಳು ನಡೆದಿದ್ದು, ಇನ್ನೂ ಹೊಸ ಈಜುಪಟುಗಳು ಸಿದ್ಧವಾಗುತ್ತಾರೆ’ ಎಂದು ಈಜುಕೊಳದ ಸಿಬ್ಬಂದಿ ಹರ್ಷ ವ್ಯಕ್ಯಪಡಿಸಿದರು.

ನಿರೀಕ್ಷೆಯಂತೆ ಮೊದಲ ದಿನವೇ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿ ಕಂಡು ಬಂದಿತು. ಪಾಲಕರು ಸಹ ಮಕ್ಕಳನ್ನು ಈಜುಕೊಳಕ್ಕೆ ಕರೆದು ಕೊಂಡು ಬರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ನಿತ್ಯ ಈಜಲು ಬರುವವರ ಸುರಕ್ಷತೆಗಾಗಿ ಟ್ಯೂಬ್ಸ್‌ ಸೇರಿದಂತೆ ತರಬೇತಿ ಹಂತದ ಮುಂಜಾಗ್ರತೆಗೆ ಅಗತ್ಯವಿರುವ ಸಾಮಾಗ್ರಿಗಳನ್ನು ಒದಗಿಸಲಾಗಿದೆ. ಲೈಫ್‌ ಗಾರ್ಡ್‌, ಸ್ವಚ್ಛತೆ ನಿರ್ವಹಣೆ ಸಿಬ್ಬಂದಿ ಉತ್ಸಾಹ ಇಮ್ಮಡಿಗೊಂಡಿತ್ತು.

ಹೆಚ್ಚಿನ ಶುಲ್ಕ ನಿಗದಿಗೆ ಅಪಸ್ವರ

ಮಳೆಗಾಲ ಪ್ರಾರಂಭದ ಸನಿಹದಲ್ಲಿ ತೆರೆದಿರುವ ಈಜುಕೊಳಕ್ಕೆ ಇಲಾಖೆ ನಿಗದಿಪಡಿಸಿರುವ ಮಾಸಿಕ ಶುಲ್ಕದ ವಿಚಾರಕ್ಕೆ ಪಾಲಕರಿಂದ ಅಪಸ್ವರ ಎದ್ದಿದೆ. 14 ವರ್ಷದೊಳಗಿನವರಿಗೆ ತಿಂಗಳಿಗೆ ₹ 1,000, 14 ವರ್ಷ ಮೇಲ್ಪಟ್ಟವರಿಗೆ ₹ 1,500 ಅದರ ಹೊರತಾಗಿ ಒಂದು ಗಂಟೆಗೆ ₹ 50 ಪಾವತಿಸಿ ಈಜುಕೊಳಕ್ಕೆ ಪ್ರವೇಶ ಪಡೆಯಬಹುದಾಗಿದೆ.

ಶಾಲಾ ಪ್ರಾರಂಭಕ್ಕೆ ಇನ್ನೂ 10 ದಿನ ಬಾಕಿ ಉಳಿದಿದ್ದು ಇದೀಗ ₹ 1,000 ಶುಲ್ಕ ಪಾವತಿಸುವುದು ವ್ಯರ್ಥವಾಗುತ್ತದೆ. ಆ ಕಾರಣಕ್ಕೆ ಶುಲ್ಕವನ್ನು ಕಡಿಮೆಗೊಳಿಸಬೇಕು ಎನ್ನುತ್ತಾರೆ ಪೋಷಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT