ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಳಕಾಲ್ಮುರು ತಾಲ್ಲೂಕಿನ ವಿವಿಧೆಡೆ ಮೆಣಸಿನಕಾಯಿ ಬೆಳೆಗೆ ಕಪ್ಪುಹುಳು ಬಾಧೆ

Last Updated 13 ಫೆಬ್ರುವರಿ 2023, 5:31 IST
ಅಕ್ಷರ ಗಾತ್ರ

ಮೊಳಕಾಲ್ಮುರು: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಮೂರು ವರ್ಷಗಳಿಂದ ಮೆಣಸಿನಕಾಯಿ ಬೆಳೆಗೆ ಸತತವಾಗಿ ಕಪ್ಪುಹುಳು ಬಾಧೆ (ಬ್ಲ್ಯಾಕ್ ಟ್ರಿಪ್ಸ್) ಕಾಣಿಸಿಕೊಳ್ಳುತ್ತಿರುವ ಪರಿಣಾಮ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ತಾಲ್ಲೂಕಿನಾದ್ಯಂತ ನೀರಾವರಿ ಪ್ರದೇಶದಲ್ಲಿ ಮೆಣಸಿನಕಾಯಿ ಸಸಿ ನಾಟಿ ಮಾಡಲಾಗುತ್ತದೆ. ದೇವಸಮುದ್ರ ಹೋಬಳಿಯ ವಿಠಲಾಪುರ, ವೆಂಕಟಾಪುರ, ನಾಗಸಮುದ್ರ, ಹುಚ್ಚಂಗಿದುರ್ಗ, ಮೇಗಲಕಣಿವೆ, ಕೆಳಗಿನ ಕಣಿವೆ, ಸಂತೇಗುಡ್ಡ, ಬಾಂಡ್ರಾವಿ, ಕೊಂಡಾಪುರ, ಎನ್.ಆರ್. ಕೊಂಡಾಪುರ ಸುತ್ತಮುತ್ತ ಹೆಚ್ಚು ಮೆಣಸಿನಕಾಯಿ ಬೆಳೆಯಲಾಗುತ್ತದೆ.

ಬ್ಯಾಡಗಿ ಮೆಣಸಿನಕಾಯಿ, ಡಬ್ಬಿ ಮೆಣಸಿನಕಾಯಿ, ಕಡ್ಡಿ ಬ್ಯಾಡಗಿ, ಸಿಜೆಂಟಾ–2065, ಗುಂಟೂರು ತಳಿಯ ಮೆಣಸಿನಕಾಯಿ ನಾಟಿ ಮಾಡಲಾಗುತ್ತಿದ್ದು, ಸಾಮಾನ್ಯವಾಗಿ ಜೂನ್ ಅಂತ್ಯಕ್ಕೆ ನಾಟಿ ಮಾಡುವುದು ವಾಡಿಕೆ. ಮೂರು ವರ್ಷಗಳಿಂದ ‘ಬ್ಲ್ಯಾಕ್ ಟ್ರಿಪ್ಸ್’ ಬಾಧೆ ಕಾಣಿಸಿಕೊಳ್ಳುತ್ತಿದ್ದು, ಇಳಿವರಿ ಮೇಲೆ ದುಷ್ಪರಿಣಾಮ ಬೀರಿದೆ. ಬೆಳೆಯಲ್ಲಿ ಹೂವು ಇದ್ದಾಗ ಒಳಗಡೆ ಸೇರಿಕೊಳ್ಳುವ ಕಪ್ಪುಹುಳು ಬಾಧೆಗೆ ಕಾರಣವಾಗಿದೆ. ಔಷಧ ಸಿಂಪಡಣೆ ಮಾಡಿದರೂ ರೋಗ ಹತೋಟಿಗೆ ಬಂದಿಲ್ಲ.

‘ಹೂವು ನೆಲಕ್ಕೆ ಮುಖ ಮಾಡಿರುತ್ತವೆ. ಹೀಗಾಗಿ ಔಷಧ ಸಿಂಪಡಣೆ ಮಾಡಿದಾಗ ಹೂವಿನ ಒಳಗಡೆ ಹೋಗುವುದಿಲ್ಲ. ಇದರಿಂದಾಗಿ ಹುಳು ಸಾಯುವುದಿಲ್ಲ’ ಎಂದು ಬೆಳೆಗಾರ ವಿಠಲಾಪುರದ ಸತೀಶ್ ಮಾಹಿತಿ ನೀಡಿದರು.

ಪ್ರತಿ ಎಕರೆಗೆ 20ಕ್ಕೂ ಹೆಚ್ಚು ಕ್ವಿಂಟಲ್ ಇಳುವರಿ ಬರುತ್ತದೆ. ಆದರೆ, 2–3 ವರ್ಷಗಳಿಂದ 2–3 ಕ್ವಿಂಟಲ್ ಮಾತ್ರ ಬರುತ್ತಿದೆ. ಪ್ರತಿ ಎಕರೆ ಮೆಣಸಿನಕಾಯಿ ಕೃಷಿಗೆ ಕನಿಷ್ಠ ₹ 1 ಲಕ್ಷ ಖರ್ಚು ಬರುತ್ತದೆ. ಈ ವರ್ಷ ಬೆಳೆಗೆ ದಾಖಲೆಯ ದರವಿದ್ದರೂ ಹಾಕಿದ ಬಂಡವಾಳ ವಾಪಸ್‌ ಬರಲಿಲ್ಲ. ತಜ್ಞರನ್ನು ಕರೆಯಿಸಿ ಪರಿಹಾರ ನೀಡುವಂತೆ ತೋಟಗಾರಿಕೆ ಅಧಿಕಾರಿಗಳಿಗೆ ಹಲವು ಸಲ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಬೆಳೆಗಾರರು ದೂರಿದರು.

‘ನಾನು 10 ಎಕರೆಯಲ್ಲಿ ಮೆಣಸಿಕಾಯಿ ಕೃಷಿ ಮಾಡುತ್ತಿದ್ದೇನೆ. ಪ್ರತಿ ಎಕರೆಗೆ ಸರಾಸರಿ 2 ಕ್ವಿಂಟಲ್ ಇಳುವರಿ ಬಂದಿದೆ. ರೋಗ ಹತೋಟಿಗೆ ತೋಟಗಾರಿಕೆ ಇಲಾಖೆ ನಿರ್ಲಕ್ಷ್ಯ ತೋರುತ್ತಿರುವುದು ಸರಿಯಲ್ಲ. ಹಿರಿಯ ವಿಜ್ಞಾನಿಗಳು ಸ್ಥಳಕ್ಕೆ ಭೇಟಿ ನೀಡಿ ರೋಗಕ್ಕೆ ಪರಿಹಾರ ತಿಳಿಸಬೇಕು. ಇಲ್ಲವಾದಲ್ಲಿ ಮೆಣಸಿನ ಕೃಷಿಯಿಂದ ಬೆಳೆಗಾರರು ವಿಮುಖರಾಗುತ್ತಾರೆ’ ಎಂದು ರೈತ ಸತೀಶ್ ಕುಮಾರ್ ತಿಳಿಸಿದರು.

ತೇವಾಂಶ ಹೆಚ್ಚಳದಿಂದ ರೋಗಬಾಧೆ

ಮೊಳಕಾಲ್ಮುರು ತಾಲ್ಲೂಕಿನಲ್ಲಿ ಕಳೆದ ವರ್ಷ 240 ಹೆಕ್ಟೇರ್‌ನಲ್ಲಿ ಮೆಣಸಿನಕಾಯಿ ಸಸಿ ನಾಟಿ ಮಾಡಲಾಗಿತ್ತು. ಈ ವರ್ಷ 165 ಹೆಕ್ಟೇರ್‌ಗೆ ಕುಸಿದಿದೆ. ರೋಗಬಾಧೆ ಗಮನಕ್ಕೆ ಬಂದಿದ್ದು, ಇಳಿವರಿ ಕುಸಿತಕ್ಕೆ ರೋಗಬಾಧೆಯೇ ಮುಖ್ಯ ಕಾರಣವಾಗಿದೆ. ಬಳ್ಳಾರಿ ಭಾಗದಲ್ಲಿ ಈ ರೋಗ ಕಾಣಿಸಿಕೊಂಡು ನಂತರ ಇಲ್ಲಿ ಹರಡಿಕೊಂಡಿದೆ. ರಾಜ್ಯದ ಬೇರೆ ಜಿಲ್ಲೆಗಳಲ್ಲಿಯೂ ಕಪ್ಪುಹುಳು ಬಾಧೆ ವರದಿಯಾಗಿದ್ದು, ಇದಕ್ಕೆ ಮಳೆ ಹೆಚ್ಚಿ ತೇವಾಂಶ ಹೆಚ್ಚಳವಾಗಿರುವುದು ಕಾರಣ ಎಂದು ತೋಟಗಾರಿಕೆ ಇಲಾಖೆ ಪ್ರಭಾರ ಸಹಾಯಕ ನಿರ್ದೇಶಕ ಆರ್. ವಿರೂಪಾಕ್ಷಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT