ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮದ ಚಿತ್ರಲಿಂಗೇಶ್ವರ ಅಂಬಿನೋತ್ಸವ

ಬಾಳೆಕಂದು ಕಡಿಯುವ ಮೂಲಕ ಆಚರಣೆ, ಸಾವಿರಾರು ಭಕ್ತರು ಭಾಗಿ
Last Updated 6 ಅಕ್ಟೋಬರ್ 2022, 5:34 IST
ಅಕ್ಷರ ಗಾತ್ರ

ಹೊಳಲ್ಕೆರೆ: ತಾಲ್ಲೂಕಿನ ಚಿತ್ರಹಳ್ಳಿಯಲ್ಲಿ ಬುಧವಾರ ಬೆಳಿಗ್ಗೆ ಚಿತ್ರಲಿಂಗೇಶ್ವರ ಸ್ವಾಮಿಯ ಅಂಬಿನೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

ಬೆಳಗಿನ ಜಾವ 5.30ಕ್ಕೆ ದೇವಾಲಯದ ಆವರಣದಲ್ಲಿ ಬಾಳೆಕಂದು ನೆಟ್ಟು, ವಿಶೇಷ ಪೂಜೆ ಸಲ್ಲಿಸಿ ಅದನ್ನು ಕಡಿಯುವ ಮೂಲಕ ಅಂಬಿನೋತ್ಸವ ಆಚರಿಸಲಾಯಿತು. ಭಕ್ತರು ಉದ್ದನೆಯ ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಕೋವಿಡ್ ನಂತರ ವೈಭವದಿಂದ ನಡೆದ ಅಂಬಿನೋತ್ಸವಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಭಕ್ತರ ಸುರಕ್ಷತೆಗಾಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಚಿತ್ರದುರ್ಗ, ಹೊಸದುರ್ಗ, ದಾವಣಗೆರೆ, ಶಿವಮೊಗ್ಗ ಕಡೆಗಳಿಂದ ಬರುವ ಭಕ್ತರಿಗೆ ಅನುಕೂಲ ಆಗುವಂತೆ ಹೆಚ್ಚುವರಿ ಖಾಸಗಿ ಬಸ್ ವ್ಯವಸ್ಥೆ ಮಾಡಲಾಗಿತ್ತು.

ಮನೆ ಅಥವಾ ಹೊಲಗಳಲ್ಲಿ ಹಾವು, ಚೇಳಿನಂತಹ ವಿಷಜಂತುಗಳು ಕಾಣಿಸಿಕೊಂಡಾಗ ದೇವಾಲಯಕ್ಕೆ ಬರುವುದಾಗಿ ಚಿತ್ರಲಿಂಗೇಶ್ವರ ಸ್ವಾಮಿಗೆ ಕೈ ಮುಗಿಯುತ್ತಾರೆ. ಪ್ರತಿ ಸೋಮವಾರ ವಿಶೇಷ ಪೂಜೆ ನಡೆಯಲಿದ್ದು, ಸಾವಿರಾರು ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಾರೆ. ಶ್ರಾವಣ ಮಾಸದಲ್ಲಿ ಹೆಚ್ಚು ಭಕ್ತರು ಸೇರುತ್ತಾರೆ. ಕೆಲವರು ದೂರದ ಊರುಗಳಿಂದ ಕಾಲ್ನಡಿಗೆಯಲ್ಲಿ ಜಾತ್ರೆಗೆ ಬರುತ್ತಾರೆ.

‘ತಾಲ್ಲೂಕು ಆಡಳಿತ ಹಾಗೂ ಗ್ರಾಮ ಪಂಚಾಯಿತಿಯಿಂದ ಭಕ್ತರಿಗೆ ಕುಡಿಯುವ ನೀರು, ವೈದ್ಯಕೀಯ ಸೌಲಭ್ಯ, ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿತ್ತು. ದೇವಾಲಯ ಚಿತ್ರಹಳ್ಳಿ ಗೇಟ್‌ನ ರಾಷ್ಟ್ರೀಯ ಹೆದ್ದಾರಿ-13ರಿಂದ 2 ಕಿ.ಮೀ. ದೂರದಲ್ಲಿದ್ದು, ಮುಖ್ಯರಸ್ತೆಯಿಂದಲೇ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಜಾತ್ರೆ ಸುಗಮವಾಗಿ ನಡೆಯಲು ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಭಕ್ತರು ಹೆಚ್ಚು ಉತ್ಸಾಹದಿಂದ ಜಾತ್ರೆಯಲ್ಲಿ ಪಾಲ್ಗೊಂಡರು’ ಎಂದು ತಹಶೀಲ್ದಾರ್ ರೇಖಾ ತಿಳಿಸಿದರು.

ಶಾಸಕ ಎಂ.ಚಂದ್ರಪ್ಪ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನೀಕೇರಿ ಅಂಬಿನೋತ್ಸವದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT