ಹಿರಿಯೂರು: ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.
ನಾಲ್ವರು ಯುವತಿಯರು, ‘ಸಿವಿಲ್ ಎಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿ ಮನೆಯಲ್ಲಿ ಕುಳಿತಿದ್ದೇವೆ. ದಯವಿಟ್ಟು ಜಲಜೀವನ್ ಮಿಷನ್ ಯೋಜನೆಯಲ್ಲಿ ತಾತ್ಕಾಲಿಕ ಹುದ್ದೆ ಕೊಡಿಸಿ’ ಎಂದು ಮನವಿ ಮಾಡಿದರು.
ಸ್ವಂತಕ್ಕೆ ಕಾಮಗಾರಿ ಮಾಡಿಸುವಷ್ಟು ಆರ್ಥಿಕ ಶಕ್ತಿ ನಮಲ್ಲಿಲ್ಲ. ಸಿವಿಲ್ ಎಂಜಿನಿಯರಿಂಗ್ ಪದವಿ ಮುಗಿಸಿರುವ ಹೆಣ್ಣುಮಕ್ಕಳಿಗೆ ನಿರ್ಮಾಣ ಕಂಪನಿಗಳು ಕೆಲಸ ನೀಡಲು ಹಿಂದೇಟು ಹಾಕುತ್ತವೆ. ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರ್ಕಾರ ಮುಂದಾಗಿಲ್ಲ ಎಂದು ಯುವತಿಯರು ಅಳಲು ತೋಡಿಕೊಂಡರು.
ಸರ್ಕಾರದ ಯಾವುದಾದರೂ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಹುದ್ದೆ ಕೊಡಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ ಎಂದು ಸುಧಾಕರ್ ಭರವಸೆ ನೀಡಿದರು.
ನಗರದ ರಾಷ್ಟ್ರೀಯ ಹೆದ್ದಾರಿ 148ರ ಬೈಪಾಸ್ ರಸ್ತೆಯಲ್ಲಿ ಪಿಎನ್‌ಸಿ ಕಂಪನಿಯವರು ರಸ್ತೆ ಸಂಚಾರಕ್ಕೆ ಅಡ್ಡಿಯಾಗುವಂತೆ ಜಲ್ಲಿ, ಮಣ್ಣು ರಾಶಿ ಹಾಕಿದ್ದು, ಅದನ್ನು ತೆಗೆಸುವಂತೆ ಸಂಬಂಧಿಸಿದವರಿಗೆ ತಾಕೀತು ಮಾಡಬೇಕು ಎಂದು ಲಾರಿ ಮಾಲೀಕರು, ಚಾಲಕರು ಸಚಿವರಿಗೆ ಮನವಿ ಸಲ್ಲಿಸಿದರು.
ಆಸ್ಪತ್ರೆ ಖರ್ಚಿಗೆ, ಮದುವೆಗೆ, ಮಕ್ಕಳ ಶಿಕ್ಷಣದ ಖರ್ಚು ಭರಿಸಲು ನೆರವು ನೀಡುವಂತೆ ಹಲವರು ಮನವಿ ಮಾಡಿದರು.